ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಉದ್ಘಾಟಿಸಿ ರಾಷ್ಟ್ರಪತಿ ಮುರ್ಮು ಕೊಟ್ಟ ಸಲಹೆಯೇನು?

|
Google Oneindia Kannada News

ಬೆಂಗಳೂರು, ಸೆ.28: ''ಶಿಕ್ಷಣವು ಸಾಮಾಜಿಕ ಪರಿವರ್ತನೆಗೆ ಅತ್ಯಂತ ಪ್ರಬಲವಾದ ಸಾಧನವಾಗಿದೆ ಮತ್ತು ನಮ್ಮ ವಿಶ್ವವಿದ್ಯಾನಿಲಯಗಳು ಬದಲಾವಣೆಯ ಮಧ್ಯವರ್ತಿಗಳ ಪಾತ್ರವನ್ನು ವಹಿಸಬೇಕಾಗಿದೆ'' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ ನೀಡಿದರು. ಬೆಂಗಳೂರಿನಲ್ಲಿ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಭವಿಷ್ಯದ ಬೇಡಿಕೆಗಳಿಗೆ ಸಿದ್ಧರಾಗುವಂತೆ ತರಬೇತಿ ನೀಡಿ ಸಜ್ಜುಗೊಳಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು.

ಇಂದಿನ ಯುವ ಜನರು ಮಹತ್ವಾಕಾಂಕ್ಷಿಗಳಾಗಿದ್ದಾರೆ ಎಂದ ಅವರು, ಅವರ ವೈವಿಧ್ಯಮಯ ಆಶಯಗಳಿಗೆ ನಮ್ಮ ವಿಶ್ವವಿದ್ಯಾಲಯಗಳು ಸ್ಪಂದಿಸಬೇಕು. ಇದಕ್ಕಾಗಿ, ವಿನೂತನ ಚಿಂತನೆಯ ಅಗತ್ಯವಿದೆ. ಅಂತಹ ಚಿಂತನೆಯು ಶ್ರೀಮಂತ ಕಲಿಕೆಯ ಅನುಭವಗಳು ಮತ್ತು ಸೃಜನಶೀಲ ಪರಿಹಾರಗಳಿಗೆ ಕಾರಣವಾಗಬಹುದು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ 2020, ಶಿಕ್ಷಣ ತಜ್ಞರನ್ನು ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಸಿದ್ಧಗೊಳಿಸಲು ಅಂತಹ ಒಂದು ಪ್ರಯತ್ನವಾಗಿದೆ. ಇದು ವಿಮರ್ಶಾತ್ಮಕ ಚಿಂತನೆ ಮತ್ತು ಹೊಸತನದ ಶೋಧಕ್ಕೆ ಒತ್ತು ನೀಡುತ್ತದೆ. ಈ ನೀತಿಯ ಪ್ರಕಾರ, ಶಿಕ್ಷಣವು ವಿಮರ್ಶಾತ್ಮಕ ಚಿಂತನೆಯ ಬಗ್ಗೆ ಹೆಚ್ಚು ಮತ್ತು ಕಂಠಪಾಠದ ಕಲಿಕೆಯ ಬಗ್ಗೆ ಕಡಿಮೆ ಗಮನ ನೀಡುತ್ತದೆ ಎಂದು ಅವರು ಹೇಳಿದರು.

President of India Murmu graces inaugural function of St. Josephs university

ಇಂದು ಜಗತ್ತಿನಲ್ಲಿ ಯುವ ಪೀಳಿಗೆಗೆ ಅಪಾರ ಅವಕಾಶಗಳಿವೆ. ಆದಾಗ್ಯೂ, ಆಧುನಿಕ ಜಗತ್ತಿನಲ್ಲಿ ಅಗತ್ಯವಿರುವ ಕೌಶಲ್ಯಗಳು ಬಹು ಆಯಾಮದ್ದಾಗಿವೆ. ಪ್ರತ್ಯೇಕವಾಗಿ ಕೆಲಸ ಮಾಡುವ ಮತ್ತು ಅಧ್ಯಯನ ಮಾಡುವ ವಿಧಾನವು ಪರಿಣಾಮಕಾರಿಯಾಗಿರುವುದಿಲ್ಲ. ಆಗಿಂದಾಗ್ಗೆ ಎದುರಾಗುವ ಬೇಡಿಕೆಗಳನ್ನು ಪೂರೈಸಲು ಇದು ಬಹು-ಶಿಸ್ತಿನ ವಿಧಾನವಾಗಿರಬೇಕು. ವಿಜ್ಞಾನ ಮತ್ತು ಗಣಿತದ ಜೊತೆಗೆ, ಸುಸಜ್ಜಿತ ಪಠ್ಯಕ್ರಮವು ಕಲೆ ಮತ್ತು ಕರಕುಶಲ, ಮಾನವಶಾಸ್ತ್ರ, ಕ್ರೀಡೆ ಮತ್ತು ಫಿಟ್‌ನೆಸ್, ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸಹ ಒಳಗೊಂಡಿರಬೇಕು. ಇಂತಹ ಸಮಗ್ರ ಪಠ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು ತನ್ನ ವಿವಿಧ ವಿಶೇಷ ಶಾಲೆಗಳ ಮೂಲಕ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಪೂರೈಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಶಕಗಳಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಯುವಜನರನ್ನು ಹೊಂದಲಿದೆ ಎಂಬ ಅಂಶದ ಬಗ್ಗೆ ಗಮನ ಸೆಳೆದ ರಾಷ್ಟ್ರಪತಿಯವರು, ಯುವಜನರಿಗೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ನಮ್ಮ ಸಾಮರ್ಥ್ಯವು ಅವರ ಭವಿಷ್ಯ ಮತ್ತು ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದರು. ನಮ್ಮ ಅನೇಕ ವಿದ್ಯಾರ್ಥಿಗಳು ಉನ್ನತ ಕಲಿಕೆ ಮತ್ತು ಸಂಶೋಧನೆಗಾಗಿ ಪಾಶ್ಚಿಮಾತ್ಯ ದೇಶಗಳ ಕಡೆಗೆ ನೋಡುತ್ತಾರೆ.

ನಮ್ಮ ವಿಶ್ವ ವಿದ್ಯಾನಿಲಯ ಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವುದು ನಮ್ಮ ಪ್ರಯತ್ನವಾಗಬೇಕು. ಇದರಿಂದ ನಮ್ಮ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ಅವಕಾಶಗಳನ್ನು ಪಡೆಯುತ್ತಾರೆ. ಅನೇಕ ಭಾರತೀಯ ಸಂಸ್ಥೆಗಳು ಅಂತರರಾಷ್ಟ್ರೀಯ ಶ್ರೇಯಾಂಕದಲ್ಲಿ ಸ್ಥಾನ ಗಳಿಸಿವೆ. ಆದರೆ ಅವುಗಳ ಸಂಖ್ಯೆ ಬಹಳ ಕಡಿಮೆ ಇದೆ. ಪ್ರತಿ ಭಾರತೀಯ ಶಿಕ್ಷಣ ಸಂಸ್ಥೆಯು ವಿಶ್ವ ದರ್ಜೆಯ ಕಲಿಕೆಯ ಕೇಂದ್ರವಾಗುವುದು ನಮ್ಮ ಗುರಿಯಾಗಬೇಕು ಎಂದು ತಿಳಿಸಿದರು.

ನಂತರ ಸಂಜೆ, ರಾಷ್ಟ್ರಪತಿಯವರು ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರವು ಅವನ ಗೌರವಾರ್ಥ ಆಯೋಜಿಸಿದ್ದ ಪೌರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಯವರು, ಸ್ವಾತಂತ್ರ್ಯ ಹೋರಾಟ, ಆಧ್ಯಾತ್ಮಿಕತೆ, ತತ್ವಶಾಸ್ತ್ರ, ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ, ವಾಸ್ತುಶಿಲ್ಪ ಇತ್ಯಾದಿಗಳಲ್ಲಿ ಕರ್ನಾಟಕದ ಕೊಡುಗೆಗಳನ್ನು ಸ್ಮರಿಸಿದರು. ಹಂಪಿಯ ಅವಶೇಷಗಳು ಮತ್ತು ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬೇಲೂರು, ಹಳೇಬೀಡು, ಸೋಮನಾಥಪುರ ಮತ್ತು ಮೈಸೂರಿನಂತಹ ಸ್ಥಳಗಳು ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅತ್ಯುತ್ತಮ ಪರಂಪರೆಯ ತಾಣವಾಗಿವೆ ಎಂದರು.

ಕರ್ನಾಟಕದ ಶ್ರೀಗಂಧದ ಪರಿಮಳವು ಇಡೀ ದೇಶ ಮತ್ತು ಜಗತ್ತಿಗೆ ಪಸರಿಸುತ್ತಿರುವಂತೆ, ಕರ್ನಾಟಕದ ಜನರ ಮಧುರ ಸ್ವಭಾವವು ದೇಶ ಮತ್ತು ಪ್ರಪಂಚದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡಿಗರು ಶಾಂತಸ್ವಭಾವ, ಉದಾರತೆ ಮತ್ತು ವಾತ್ಸಲ್ಯಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ರಾಷ್ಟ್ರಪತಿಯವರು ಹೇಳಿದರು.

ಆಧುನಿಕ ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ಜೈವಿಕ ತಂತ್ರಜ್ಞಾನ, ಭಾರೀ ಇಂಜಿನಿಯರಿಂಗ್, ವಾಯುಯಾನ, ಸಂಶೋಧನೆ ಮತ್ತು ಅಭಿವೃದ್ಧಿ, ಬಾಹ್ಯಾಕಾಶ-ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ಪ್ರಮುಖ ರಾಜ್ಯವಾಗಿದೆ. ಕರ್ನಾಟಕ ನಮ್ಮ ದೇಶದ ಪ್ರಮುಖ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವಾಗಿ ಅಮೂಲ್ಯ ಕೊಡುಗೆ ನೀಡುತ್ತಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಭಾರತದ ಖ್ಯಾತಿಯನ್ನು ಜಾಗತಿಕವಾಗಿ ಹೆಚ್ಚಿಸಿದ್ದಕ್ಕಾಗಿ, ಕರ್ನಾಟಕಕ್ಕೆ, ವಿಶೇಷವಾಗಿ ಸಿಲಿಕಾನ್ ಸಿಟಿ - ಬೆಂಗಳೂರಿಗೆ ಬಹಳಷ್ಟು ಶ್ರೇಯಸ್ಸು ಸಲ್ಲುತ್ತದೆ ಎಂದು ರಾಷ್ಟ್ರಪತಿಯವರು ಹೇಳಿದರು.

ಕರ್ನಾಟಕದ ದೂರಗಾಮಿ ದೃಷ್ಟಿಯ ರಾಜಕಾರಣಿಗಳು, ಉದ್ಯಮ-ದಿಗ್ಗಜರು ಮತ್ತು ಉದ್ಯಮಿಗಳು ಕೈಗಾರಿಕಾ ಅಭಿವೃದ್ಧಿಗೆ ವಿಶೇಷವಾಗಿ ನವೋದ್ಯಮಗಳಿಗೆ ಉತ್ತಮ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಅವರು ಹೇಳಿದರು. ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಷ್ಟ್ರಪತಿಯವರು ವಿಶ್ವಾಸ ವ್ಯಕ್ತಪಡಿಸಿದರು.

English summary
President of India Droupadi Murmu graces inaugural function of St. Joseph's university, Bengaluru and said Education is the most potent means for social transformation and our universities have to play the role of change-agents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X