Prajwal Revanna: ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುಳುವಾಗಲಿದೆ ಪ್ರಜ್ವಲ್ ಕೇಸ್!
ಬೆಂಗಳೂರು, ಮೇ. 04: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮೇ 7ಕ್ಕೆ ನಡೆಯಲಿದೆ. ಇದರ ಬೆನ್ನಲ್ಲೇ ರಾಜ್ಯದ ಆರು ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಎಲ್ಲಾ ಚುನಾವಣೆಗಳಿಗೂ ಒಂದಾಗಿರುತ್ತೇವೆ ಎಂದು ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮುಂಬರುವ ಎಂಎಲ್‌ಸಿ ಚುನಾವಣೆಯಲ್ಲಿ ಪೆಟ್ಟು ಬೀಳುವ ಸಾಧ್ಯತೆಯಿದೆ.
ವಿಧಾನ ಪರಿಷತ್ ಚುನಾವಣೆ ನಡೆಯಲಿರುವ ಕಣದಲ್ಲಿರುವ ಆರು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಲ್ಲಿ 44% ಮತದಾರರು ಮಹಿಳೆಯರಾಗಿದ್ದಾರೆ. ಇದು ಚುನಾವಣಾ ಫಲಿತಾಂಶದ ಮೇಲೆ ಭಾರೀ ಪರಿಣಾಮ ಬೀರಲಿದೆ. ಹೀಗಾಗಿಯೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಪ್ರಕರಣದ ಚುನಾವಣಾ ಪರಿಣಾಮದ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಜಾಗರೂಕವಾಗಿದೆ.

ಬಿಜೆಪಿ - ಜೆಡಿಎಸ್ ಮೈತ್ರಿ ವಿರುದ್ಧ ಮಹಿಳಾ ಮತದಾರರನ್ನು ತನ್ನತ್ತ ಸೆಳೆಯಲು, ಮೈತ್ರಿ ವಿರುದ್ಧ ಮಹಿಳೆಯರನ್ನು ಎತ್ತಿಕಟ್ಟಲು ಕಾಂಗ್ರೆಸ್ ಈ ವಿಷಯವನ್ನೇ ಪ್ರಮುಖ ದಾಳವಾಗಿಸಿಕೊಳ್ಳಲು ಮುಂದಾಗಿದೆ. ಆದರೆ, ಮೈತ್ರಿ ನಾಯಕರು ಮಾತ್ರ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಎಂಎಲ್‌ಸಿ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸುತ್ತಿದ್ದಾರೆ.
ಕರ್ನಾಟಕ ಈಶಾನ್ಯ ಪದವೀಧರರು, ಕರ್ನಾಟಕ ನೈಋತ್ಯ ಪದವೀಧರರು, ಬೆಂಗಳೂರು ಪದವೀಧರರು, ಕರ್ನಾಟಕ ಆಗ್ನೇಯ ಶಿಕ್ಷಕರು, ಕರ್ನಾಟಕ ನೈರುತ್ಯ ಶಿಕ್ಷಕರು ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ ನಡೆಯಲಿದೆ. ಜೂನ್ 6 ರಂದು ಮತ ಎಣಿಕೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಗುರುವಾರ ತಿಳಿಸಿದೆ. ರಾಜ್ಯದ ಮೂರು ಪದವೀಧರ ಕ್ಷೇತ್ರಗಳು ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಪ್ರಜ್ವಲ್ ಪ್ರಕರಣದ ಪರಿಣಾಮ ಸೀಮಿತ!
ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಎಂಎಲ್‌ಸಿ ಎಸ್‌ಎಲ್ ಭೋಜೇಗೌಡ ಡೆಕ್ಕನ್ ಹೆರಾಲ್ಡ್ ಜೊತೆಗೆ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಪ್ರಜ್ವಲ್ ಪ್ರಕರಣದ ಪರಿಣಾಮ ಸೀಮಿತವಾಗಿದೆ ಎಂದು ಹೇಳಿದ್ದಾರೆ. "ಪ್ರಕರಣ ಪರಿಣಾಮ ಪಕ್ಷದ ಮೇಲೆ ಬೀರಲಿದೆ. ಹೀಗಾಗಿಯೇ ನಾವು ಅವರನ್ನು ಅಮಾನತುಗೊಳಿಸುವ ಮೂಲಕ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದೇವೆ. ತನಿಖೆಯಲ್ಲಿ ಏನು ಹೊರ ಬರುತ್ತದೆ ಎಂಬುದರ ಆಧಾರದ ಮೇಲೆ ಮುಂದಿನ ಕ್ರಮವನ್ನು ಪ್ರಾರಂಭಿಸಲಾಗುವುದು. ಮೇಲಾಗಿ ಮೇ 7ರ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಬಳಿಕ ಈ ಸಮಸ್ಯೆ ಇರುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯ ಮಾಜಿ ಎಂಎಲ್‌ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಲೈಂಗಿಕ ಹಗರಣದ ಪರಿಣಾಮವನ್ನು ನಿರಾಕರಿಸಿಲ್ಲ, ಆದರೆ ಅದಕ್ಕೆ ಮಿತಿಯಿದೆ ಎಂದಿದ್ದಾರೆ. "ಮೇಲ್ಮನೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ, ಮತದಾರರು ತಮ್ಮ ಮನಸ್ಸಿನಲ್ಲಿ ಹಲವಾರು ಸಮಸ್ಯೆಗಳನ್ನು ಹೊಂದಿರುತ್ತಾರೆ. ಈ ನಿರ್ದಿಷ್ಟ ಘಟನೆಯು ಸಣ್ಣ ಪರಿಣಾಮ ಬೀರಬಹುದು" ಎಂದು ಮಾಹಿತಿ ನೀಡಿದ್ದಾರೆ.
ಪ್ರಜ್ವಲ್ ಪ್ರಕರಣ ದಾಳ ಮಾಡಿಕೊಂಡ ಕಾಂಗ್ರೆಸ್
ಆದರೆ, ಕಾಂಗ್ರೆಸ್ ಮಾತ್ರ ಇದನ್ನು ಒಪ್ಪುತ್ತಿಲ್ಲ. ಮೇ 7 ರಂದು ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷವು ತನ್ನ ಪ್ರಚಾರದ ಸಮಯದಲ್ಲಿ ಪ್ರಜ್ವಲ್ ರೇವನ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಪ್ರಸ್ತಾಪಿಸುತ್ತಿದೆ. ಹೀಗಿರುವಾಗ ಎಂಎಲ್‌ಸಿ ಚುನಾವಣೆಯಲ್ಲಿ ಬಿಡುವ ಮಾತೇ ಇಲ್ಲ ಎನ್ನಬಹುದು.
ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚು. ಅವರು ಈ ವಿಷಯವನ್ನು ಸುಲಭವಾಗಿ ಮರೆಯುವುದಿಲ್ಲ ಎಂದು ಬೆಂಗಳೂರು ಶಿಕ್ಷಕರ ವಿಭಾಗವನ್ನು ಪ್ರತಿನಿಧಿಸುವ ಕಾಂಗ್ರೆಸ್ ಎಂಎಲ್‌ಸಿ ಪುಟ್ಟಣ್ಣ ಹೇಳಿದ್ದಾರೆ. ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಬೆಂಗಳೂರು ಪದವೀಧರರ ಸ್ಥಾನಗಳಲ್ಲಿ ಪುರುಷರಿಗಿಂತ ಹೆಚ್ಚು ಮಹಿಳಾ ಮತದಾರರಿದ್ದಾರೆ.












Click it and Unblock the Notifications