ಕಸ ಹಾಕೋ ಜಾಗದಲ್ಲಿ ರಂಗೋಲಿ ಬಿಡಿಸಿ ಗಾಂಧಿಗಿರಿ ತೋರಿದ ಪೌರಕಾರ್ಮಿಕರು
ಬೆಂಗಳೂರು, ಅಕ್ಟೋಬರ್ 31: ತ್ಯಾಜ್ಯ ಎಸೆಯೋ ಮುನ್ನ ಈ ರಂಗೋಲಿನಾದ್ರು ನೋಡ್ರಪ್ಪಾ, ಕಸ ಬಿಸಾಡುವ ಮನಸಾಗಲ್ಲ ಎಂದು ಹೇಳುತ್ತಾ ತ್ಯಾಜ್ಯ ಎಸೆಯುವ ಜಾಗದಲ್ಲಿ ರಂಗೋಲಿ ಬಿಡಿಸುವ ಮೂಲಕ ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಛತೆ ಬಗ್ಗೆ ಜಾಗೃತಿಗೆ ಮುಂದಾಗಿದ್ದಾರೆ.
ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿ ಮಾಡಲು ಹೈಕೋರ್ಟ್ ಬಿಬಿಎಂಪಿಗೆ ಪದೇ ಪದೇ ಚಾಟಿ ಬೀಸುತ್ತಿದೆ. ಅಷ್ಟೇ ಅಲ್ಲದೆ ಅಕ್ಟೋಬರ್ 31ರೊಳಗೆ ಕಸಮುಕ್ತ ನಗರವನ್ನಾಗಿ ಮಾಡಲು ಅಂತಿಮ ಗಡುವು ನೀಡಿದೆ.
ಬಿಬಿಎಂಪಿಯ ಪ್ರತಿಯೊಂದು ವೈಫಲ್ಯವನ್ನು ಹುಡುಕುತ್ತಿರುವ ಹೈಕೋರ್ಟ್ ಒಂದೊಂದೇ ವಿಚಾರವನ್ನು ಕೈಗೆತ್ತಿಕೊಂಡು ಸರಿಪಡಿಸಿಉವ ಪ್ರಯತ್ನ ಮಾಡುತ್ತಿದೆ. ಹಾಗೆಯೇ ಬಿಬಿಎಂಪಿಯು ಕೂಡ ತನಗಾದ ಪ್ರಯತ್ನವನ್ನು ಆರಂಭಿಸಿದೆ. ಕಸ ಮುಕ್ತ ನಗರವನ್ನಾಗಿಸಲು ಪೌರಕಾರ್ಮಿಕರು ಉಪಾಯೊಂದನ್ನು ಮಾಡಿದ್ದು, ತ್ಯಾಜ್ಯ ಎಸೆಯುವ ಜಾಗದಲ್ಲಿ ರಂಗೋಲಿಯನ್ನು ಹಾಕುವ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂಬಿ ಕಾಂಪೌಂಡ್ ಬದಿಯಲ್ಲಿರುವ ಕಸದ ಬ್ಲಾಕ್‌ಸ್ಪಾಟ್‌ನಲ್ಲಿ ಪೌರಕಾರ್ಮಿಕರು ರಂಗೋಲಿ ಬಿಡಿಸಿ ಗಮನ ಸೆಳೆದಿದ್ದಾರೆ. ಅದೇ ರೀತಿ ನಗರದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಹಾಗೆಂದ ಮಾತ್ರಕ್ಕೆ ಕಸ ಹಾಕುವವರ ಸಂಖ್ಯೆಯೇನೂ ಕಡಿಮೆ ಆಗಿಲ್ಲ ಆದರೆ ಇದೊಂದು ವಿನೂತನ ಪ್ರಯತ್ನವಾಗಿದೆ.
ಐಐಎಂಬಿ ಸುತ್ತಮುತ್ತಲಿನ ನಿವಾಸಿಗಳು ನಿತ್ಯ ಕಸವನ್ನು ತಂದು ಕಾಂಪೌಂಡ್ ಬಳಿಯಲ್ಲಿ ಬಿಸಾಡುತ್ತಿದ್ದರು. ತ್ಯಾಜ್ಯವನ್ನು ಕಾಂಪೌಂಡ್ ಬಳಿ ಹಾಕದಂತೆ ಪಾಲಿಕೆ ಅಧಿಕಾರಿಗಳು ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಇಲ್ಲಿ ಕಸ ಹಾಕದಂತೆ ನಿತ್ಯ ಜನರಲ್ಲಿ ಮನವಿ ಮಾಡಿಕೊಳ್ಳುತ್ತಲೇ ಇದ್ದೇವೆ ಎಂದು ಪೌರಕಾರ್ಮಿಕರು ತಿಳಿಸಿದ್ದಾರೆ.
ಪರ ಕಾರ್ಮಿಕರು ಕಸವನ್ನು ತೆರವುಗೊಳಿಸಿ ಬಳಿಕ ಮತ್ತೆ ತಂದು ಸುರಿಯುತ್ತಿದ್ದಾರೆ ಹಾಗಾಗಿ ಕಾರ್ಮಿಕರು ರಂಗೋಲಿ ಬಿಡಿಸುವಂತಹ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications