ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಪೌರಕಾರ್ಮಿಕರ ಪ್ರತಿಭಟನೆ
ಬೆಂಗಳೂರು, ಜೂನ್ 12: ವೇತನ ನೀಡದ ಪಾಲಿಕೆ ವಿರುದ್ಧ ತಿರುಗಿ ಬಿದ್ದಿರುವ ಬಿಬಿಎಂಪಿ ಪೌರಕಾರ್ಮಿಕರು ಕೆಆರ್‌ಪುರದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಆರು ತಿಂಗಳಿನಿಂದ ವೇತನ ನೀಡದೆ ಪಾಲಿಕೆ ಸತಾಯಿಸುತ್ತಿದೆ, ವೇತನವಿಲ್ಲದೆ ಪಿಎಫ್ ಹಣವನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಪೌರಕಾರ್ಮಿಕರು ಆರೋಪ ಮಾಡಿದ್ದಾರೆ, ಪಾಲಿಕೆ ಸದಸ್ಯ ಶ್ರೀಕಾಂತ್ ನೇತೃತ್ವದಲ್ಲಿ ನೂರಾರು ಸದಸ್ಯರು ಪ್ರತಿಭಟನೆ ನಡೆಸಿದರು.
ಮಹದೇವಪುರ ವಲಯ ಬಿಬಿಎಂಪಿ ಕಚೇರಿ ಎದುರು ಕಸ ಸುರಿದು ಪ್ರತಿಭಟಿಸಿದರು. ಸೋಮವಾರ ಬಿಬಿಎಂಪಿ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು.ಬಿಬಿಎಂಪಿ ತ್ಯಾಜ್ಯ ಸಂಗ್ರಹಿಸಲು 4 ಸಾವಿರಕ್ಕೂ ಹೆಚ್ಚಿನ ಆಟೋ ಟಿಪ್ಪರ್‌ಗಳಿವೆ, 450ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳಿವೆ.

ಈ ಕಾರ್ಯದಲ್ಲಿ 7 ಸಾವಿರಕ್ಕೂ ಹೆಚ್ಚಿನ ಸಹಾಯಕರು ಸೇವೆ ಮಾಡುತ್ತಿದ್ದಾರೆ. ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಗೆ ಕಳೆದ ಐದು ತಿಂಗಳ 220 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ ಇದನ್ನು ಕೂಡಲೇ ಪಾವತಿಸಬೇಕು ಎಂಬುದು ಗುತ್ತಿಗೆದಾರರ ಆಗ್ರಹವಾಗಿತ್ತು.

ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದೆ. ಅದರಲ್ಲಿ 2,100 ಟನ್ ಸಂಸ್ಕರಿಸಿ ಉಳಿದಿದ್ದನ್ನು ಕಲ್ಲು ಕ್ವಾರಿಗಳಿಗೆ ಸುರಿಯಲಾಗುತ್ತಿದೆ.












Click it and Unblock the Notifications