ಬೆಂಗಳೂರಿನಲ್ಲಿ ಜುಲೈ 28 & 29ರಂದು ತೇಜಸ್ವಿ ಸಾಂಸ್ಕೃತಿಕ ಹಬ್ಬ
ಬೆಂಗಳೂರು, ಜುಲೈ, 26: ಮೇರು ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ, ಛಾಯಾಗ್ರಹಣ, ವರ್ಣಚಿತ್ರಗಳು ಮತ್ತು ಅವರ ವಿಚಾರಧಾರೆಯನ್ನು ಒಳಗೊಂಡಿರುವ ಕೃತಿಗಳನ್ನು ಸೆಲೆಬ್ರೇಟ್ ಮಾಡುವ ಎರಡು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಜುಲೈ 28 & 29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಆಚರಣೆಯ ಸಂದರ್ಭದಲ್ಲಿ ಮಾಧ್ಯಮ ಅನೇಕ ನಿರ್ಮಾಣದ ಪೂರ್ಣಚಂದ್ರ ತೇಜಸ್ವಿಯವರ ಜೀವನ ಮತ್ತು ಕೃತಿಗಳ ಕುರಿತು ಬೃಹತ್ ಸಾಕ್ಷ್ಯಚಿತ್ರ ಸರಣಿ "ತೇಜಸ್ವಿ ಎಂಬ ವಿಸ್ಮಯ" ಲೋಕಾರ್ಪಣೆಯಾಗಲಿದೆ. ಅದರೊಂದಿಗೆ ಎಂಎಂ ಪಬ್ಲಿಕೇಷನ್ಸ್ ಅವರು ಪ್ರಕಟಿಸಿರುವ 14 ಸಂಪುಟಗಳ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಮಗ್ರ ಕೃತಿಜಗತ್ತು ಸಂಪೂರ್ಣ ಕೃತಿಗಳನ್ನು ಬಿಡುಗಡೆ ಮಾಡಲಾಗುವುದು.

ಈ ಆಚರಣೆಯ ಭಾಗವಾಗಿ ಅನೇಕ ಚರ್ಚೆ, ಸಂವಾದ, ಘೋಷ್ಠಿಗಳು ನಡೆಯಲಿದ್ದು, ಉನ್ನತ ಸಂಶೋಧನಾ ವಿದ್ವಾಂಸರು, ಪ್ರತಿಷ್ಠಿತ ಶಿಕ್ಷಣ ತಜ್ಞರು, ತೇಜಸ್ವಿ ಅವರ ಕುಟುಂಬ ಸದಸ್ಯರು ಮತ್ತು ಅವರ ಅನುಯಾಯಿಗಳು ಭಾಗವಹಿಸಲಿದ್ದಾರೆ.
ಸಾಹಿತಿ ತೇಜಸ್ವಿ ಅವರಿಗೆ ಅತ್ಯಾಪ್ತರಾಗಿದ್ದ ಪ್ರೊ ಕೆ.ಸ. ಶಿವಾರೆಡ್ಡಿ ಅವರು ಸಂಪಾದಿಸಿರುವ ಕೃತಿ ಇದಾಗಿದೆ. ಜುಲೈ 29ರಂದು ಸೋಮವಾರ ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ಸಮಗ್ರ ಕೃತಿ ಜಗತ್ತ"ನ್ನು ಲೋಕಾರ್ಪಣೆ ಮಾಡಲಿದ್ದಾರೆ.
ತೇಜಸ್ವಿ ಹಬ್ಬದಲ್ಲಿ 'ಮಾಧ್ಯಮ ಅನೇಕ' ಸಂಸ್ಥೆ ನಿರ್ಮಾಣದ 'ತೇಜಸ್ವಿ ಎಂಬ ವಿಸ್ಮಯ' ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆಯಾಗಲಿದೆ. 28ನೇ ಜುಲೈ 2024ರಂದು ಭಾನುವಾರ ಬೆಳಗ್ಗೆ 10:00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂನ ಹಾಲಿ ಶಾಸಕರಾದ ಡಾ ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ ಮಾಡಲಿದ್ದಾರೆ. 29 ಜುಲೈ 2024ರಂದು ಸೋಮವಾರ ಮಧ್ಯಾಹ್ನ 12:00-1:30ರವರೆಗೆ ಸಾಕ್ಷ್ಯಚಿತ್ರ ಸರಣಿಯನ್ನು ಪ್ರದರ್ಶಿಸಲಾಗುತ್ತದೆ.
ಎರಡು ದಿನಗಳ ಹಬ್ಬದಲ್ಲಿ 'ಪೂರ್ಣಚಂದ್ರ' ಚಿತ್ರ ಸಂಪುಟ ಬಿಡುಗಡೆ, ಅಣ್ಣನ ನೆನಪು ಸಾಕ್ಷ್ಯ ನಾಟಕ ಸೇರಿದಂತೆ ತೇಜಸ್ವಿ ಸಾಹಿತ್ಯ, ಅವರ ರಾಜಕೀಯ ಮತ್ತು ಸಾಮಾಜಿಕ ಚಿಂತನೆ ಕುರಿತಂತೆ ಗೋಷ್ಠಿಗಳು ನಡೆಯಲಿವೆ. ಇದೇ ವೇಳೆ ಪಕ್ಷಿಗಳ ಅಂಚೆಚೀಟಿ ಪ್ರದರ್ಶನ, ತೇಜಸ್ವಿ ಪುಸ್ತಕಗಳ ಪ್ರದರ್ಶನ, ತೇಜಸ್ವಿ ಅವರು ಸೆರೆಹಿಡಿದ ಫೋಟೋಗಳ ಪ್ರದರ್ಶನ ನಡೆಯಲಿದೆ.












Click it and Unblock the Notifications