ಬೆಂಗಳೂರಿನ ದೇಗುಲಗಳ ಘಂಟಾನಾದ ಶಬ್ದದಿಂದ ಮಾಲಿನ್ಯ! ನೋಟಿಸ್ ಜಾರಿ
ಬೆಂಗಳೂರು, ಫೆ.15: ನಗರದ ಹಲವು ಪ್ರಮುಖ ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ಧಾರ್ಮಿಕ ದತ್ತಿ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಿದೆ. ಬೆಂಗಳೂರು ಪೊಲೀಸರು ನೋಟಿಸ್ ತಲುಪಿಸುವ ಕಾರ್ಯ ಮಾಡಿದ್ದಾರೆ, ದೇವರಿಗೆ ಕೈ ಮುಗಿದು ಬಂದಿದ್ದಾರೆ ಎಂಬ ಸುದ್ದಿ ಬಂದಿದೆ.
ದೇವಸ್ಥಾನದಲ್ಲಿ ದಿನ ನಿತ್ಯ ಮಹಾ ಮಂಗಳಾರತಿ, ಅಭಿಷೇಕ, ವಿಶೇಷ ಪೂಜೆ ಸಂದರ್ಭದಲ್ಲಿ ಬಳಸುವ ದೊಡ್ಡ ಘಂಟೆ, ಎಲೆಕ್ಟ್ರಿಕಲ್ ಘಂಟಾನಾದ ವ್ಯವಸ್ಥೆ, ಢಮರುಗ, ಧನಿವರ್ಧಕಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಇವುಗಳಿಂದ ಅಗತ್ಯಕ್ಕಿಂತ ಹೆಚ್ಚಿನ ಡೆಸಿಬಲ್ ಶಬ್ದ ಹೊರ ಹೊಮ್ಮುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಪರಿಗಣಿಸಿರುವ ಧಾರ್ಮಿಕ ದತ್ತಿ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ರದಂತೆ ಶಬ್ದ ಮಾಲಿನ್ಯ ನಿಯಂತ್ರಣ (ತಿದ್ದುಪಡಿ) ಕಾಯ್ದೆ 2010, ಪರಿಸರ ಸಂರಕ್ಷಣಾ ಕಾಯ್ದೆ 1986ರ ಅನ್ವಯ ನಿಗದಿತ ಡೆಸಿಬಲ್ ಶಬ್ದ ಪ್ರಮಾಣಕ್ಕಿಂತ ಹೆಚ್ಚಿನ ಶಬ್ದ ಮಾಡುವ ಸಂಗೀತ ಸಾಧನಗಳನ್ನು ಬಳಸದಂತೆ ತಿಳಿಸಲಾಗಿದೆ.

ಕೈಗಾರಿಕಾ ಪ್ರದೇಶ: ಬೆಳಗ್ಗೆ 75 ಡಿಬಿ, ರಾತ್ರಿ 70 ಡಿಬಿ
ವಾಣಿಜ್ಯ ಪ್ರದೇಶ: ಬೆಳಗ್ಗೆ 65 ಡಿಬಿ, ರಾತ್ರಿ 55 ಡಿಬಿ
ವಸತಿ ಪ್ರದೇಶ: ಬೆಳಗ್ಗೆ 55 ಡಿಬಿ, ರಾತ್ರಿ 45 ಡಿಬಿ
ನಿಶ್ಯಬ್ದ ವಲಯ: ಬೆಳಗ್ಗೆ 50 ಡಿಬಿ, ರಾತ್ರಿ 40 ಡಿಬಿ

ನಗರದ ಹಲವು ದೇಗುಲಗಳ ಘಂಟಾನಾದ ತಕ್ಷಣವೆ ಬಂದ್ ಮಾಡುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಲಾಗಿದೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ, ಮಿಂಟೋ ಆಂಜನೇಯ ದೇಗುಲ, ಕಾರಂಜಿ ಆಂಜನೇಯಸ್ವಾಮಿ, ದೊಡ್ಡ ಬಸವಣ್ಣ ದೇವಸ್ಥಾನ, EAT ರಸ್ತೆಯ ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಹಲವು ದೇಗುಲಗಳಿಗೆ ನೋಟಿಸ್ ತಲುಪಿದೆ.
ಮಸೀದಿ, ದರ್ಗಾಕ್ಕೂ ನಿರ್ಬಂಧ:
ಕರ್ನಾಟಕ ವಕ್ಫ್ ಮಂಡಳಿ ಹೊರಡಿಸಿರುವ ಆದೇಶದ ಅನ್ವಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ಅವಧಿಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂಬ ನಿಯಮ ಜಾರಿಗೆ ಬಂದಿದೆ. ಧ್ವನಿವರ್ಧಕಗಳ ಮೂಲಕ ಅಜಾನ್ ಅಥವಾ ಯಾವುದೇ ಇಸ್ಲಾಮಿಕ್ ಕರೆಯನ್ನು ಇಲಾಖೆ ನಿರ್ಬಂಧಿಸಿದೆ. ಭಾರಿ ಶಬ್ದದಿಂದ ಉಂಟಾಗುವ ದೈಹಿಕ, ಮಾನಸಿಕ ಆರೋಗ್ಯ ಪರಿಣಾಮ, ಶಬ್ದ ಮಾಲಿನ್ಯ ನಿಯಂತ್ರಿಸುವ ಬಗ್ಗೆ ತಜ್ಞರು ನೀಡಿದ ವರದಿ ಆಧರಿಸಿ ಈ ಕ್ರಮ ಜರುಗಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ, ನ್ಯಾಯಾಲಯಗಳ ಸುತ್ತಮುತ್ತಲಿನ ನೂರು ಮೀಟರ್ ಪ್ರದೇಶವನ್ನು ಶಬ್ದ ರಹಿತ ವಲಯ ಎಂದು ಘೋಷಿಸಲಾಗುತ್ತದೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಧ್ವನಿ ವರ್ಧಕ, ಸಿಡಿಮದ್ದು, ಪಟಾಕಿ ಬಳಕೆ ಅಥವಾ ಸಾರ್ವಜನಿಕ ಘೋಷಣೆ, ಮೆರವಣಿಗೆ ಮೂಲಕ ಸದ್ದು ಮಾಡಿದರೆ ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ ಎಂಬ ಆದೇಶವೂ ಇದೆ.
ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಇಲಾಖೆ ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ ನೋ ಹಾಂಕಿಂಗ್ ಡೇ ಕೂಡಾ ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಧಾರ್ಮಿಕ ಸಂಸ್ಥೆ, ದೇಗುಲಗಳ ಘಂಟನಾದಕ್ಕೆ ನಿರ್ಬಂಧ ಹೇರಿರುವುದರ ಬಗ್ಗೆ ಸಹಜವಾಗಿ ಭಕ್ತರಿಂದ ವಿರೋಧ ವ್ಯಕ್ತವಾಗಿದೆ.












Click it and Unblock the Notifications