ಬೆಂಗಳೂರಲ್ಲಿ ಪೊಲೀಸ್ ಮಾಹಿತಿದಾರನ ಹತ್ಯೆ
ಬೆಂಗಳೂರು, ಜನವರಿ 26 : ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಲವು ದರೋಡೆ ಪ್ರಕರಣಗಳ ಬಗ್ಗೆ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದ.
ಕೊಲೆಯಾದ ಯುವಕನನ್ನು ಪ್ರಭು (25) ಎಂದು ಗುರುತಿಸಲಾಗಿದೆ. ಕುವೆಂಪು ನಗರ ನಿವಾಸಿಯಾದ ಪ್ರಭು ಸಿದ್ದೇಶ್ವರ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಪ್ರಭು ಕುವೆಂಪು ನಗರ, ಕಮಲ ನಗರದ ಸುತ್ತಮುತ್ತ ನಡೆಯುವ ಅಪರಾಧ ಚಟುವಟಿಕೆ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ. ಎರಡು ಬಾರಿ ದರೋಡೆಗಳ ಬಗ್ಗೆ ಮಾಹಿತಿ ನೀಡಿ, ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ನೆರವು ನೀಡಿದ್ದ.

ಇದೇ ಕಾರಣದಿಂದಾಗಿ ಹತ್ಯೆ ನಡೆಯಿತಾ? ಎಂಬುದು ಅನುಮಾನಕ್ಕೆ ಕಾರಣವಾಗಿದೆ. ದರೋಡೆ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆಗೊಂಡವರು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ. ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದ ಆರೋಪಿಗಳ ಗುರುತು ಪತ್ತೆಗೆ ಪ್ರಯತ್ನ ಮುಂದುವರೆಸಿದ್ದಾರೆ.











Click it and Unblock the Notifications