ಶುಕ್ರವಾರ ರೆಡ್ಡಿ ಬಿಡುಗಡೆ : ಜೈಲ್ ಸುತ್ತ ನಿಷೇಧಾಜ್ಞೆ
ಬೆಂಗಳೂರು, ಜ. 22: ಮೂರು ವರ್ಷಗಳಿಗಿಂತ ಅಧಿಕ ಕಾಲದಿಂದ ಜೈಲಿನಲ್ಲಿದ್ದ ಗಣಿ ಉದ್ಯಮಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಎಲ್ಲ ಪ್ರಕರಣಗಳಲ್ಲಿ ಷರತ್ತುಬದ್ಧ ಜಾಮೀನು ದೊರೆತಿರುವ ಕಾರಣ ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ರೆಡ್ಡಿ ಅಭಿಮಾನಿಗಳು ಅದ್ದೂರಿ ಸಂಭ್ರಮಾಚರಣೆಗೆ ಸಿದ್ಧರಾಗಿದ್ದಾರೆ. ಆದರೆ, ವಿಜಯೋತ್ಸವದಿಂದ ಹಲವು ಸಮಸ್ಯೆ ಉಂಟಾಗುವ ಆತಂಕವೂ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಸುತ್ತಮುತ್ತ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಭಾರತೀಯ ದಂಡ ಸಂಹಿತೆಯ 144ನೇ ಕಲಂ ಅನ್ವಯ ಪ್ರತಿಬಂಧಕಾಜ್ಞೆ ವಿಧಿಸಿ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಆದೇಶ ಹೊರಡಿಸಿದ್ದಾರೆ. ಪ್ರತಿಬಂಧಕಾಜ್ಞೆಯು ಗುರುವಾರ ಮಧ್ಯಾಹ್ನ 12 ಗಂಟೆಯಿಂದಲೇ ಜಾರಿಗೆ ಬಂದಿದ್ದು, ಶುಕ್ರವಾರ ರಾತ್ರಿ 12 ಗಂಟೆಯವರೆಗೂ ಮುಂದುವರಿಯಲಿದೆ. [ಜನಾರ್ಧನ ರೆಡ್ಡಿಗೆ ಷರತ್ತುಬದ್ಧ ಜಾಮೀನು]

ಪೊಲೀಸ್ ಆಯುಕ್ತರು ವಿಧಿಸಿರುವ ನಿಬಂಧನೆಗಳೇನು?
- ಕಾನೂನುಭಂಗ ಉಂಟುಮಾಡುವ ಉದ್ದೇಶದಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವಂತಿಲ್ಲ.
- ಮೆರವಣಿಗೆ ಮತ್ತು ಸಭೆಗಳ ನಡೆಸುವಂತಿಲ್ಲ. [ಬಳ್ಳಾರಿಯಲ್ಲಿ ಸಂಭ್ರಮವೋ ಸಂಭ್ರಮ]
- ಮಾರಕಾಸ್ತ್ರಗಳು (ಶಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಮುಂತಾದವು) ಅಥವಾ ದೈಹಿಕ ಹಿಂಸೆ ಉಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ.
- ಯಾವುದೇ ಸಂರಕ್ಷಾರ ಪದಾರ್ಥ ಅಥವಾ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲು ಮತ್ತು ಕ್ಷಿಪಣಿ ಎಸೆಯುವ ಸಾಧನಗಳು ಅಥವಾ ಉಪಕರಣಗಳನ್ನು ಒಯ್ಯುವುದು ಮತ್ತು ಶೇಖರಿಸುವುದು ಅಪರಾಧ.
- ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರದರ್ಶನ, ಪ್ರಚೋದನಾತ್ಮಕ ಬಹಿರಂಗ ಘೋಷಣೆ ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು ಹಾಗೂ ಚಿತ್ರ, ಸಂಕೇತ, ಭಿತ್ತಿ ಪತ್ರ ಅಥವಾ ಇತರೆ ಯಾವುದೇ ವಸ್ತುಗಳು ಅಥವಾ ಪದಾರ್ಥಗಳ ಪ್ರದರ್ಶಿಸುವಂತಿಲ್ಲ. [ರೆಡ್ಡಿಗೆ 2 BHK ಮನೆ ಬೇಕು!]

ಜನಾರ್ದನ ರೆಡ್ಡಿ ಬೆಂಬಲಿಗರು ವಿಜಯೋತ್ಸವ ಆಚರಿಸುವ ಸ್ಥಳದಲ್ಲಿ ಸಾರ್ವಜನಿಕರ ಶಾಂತಿ ಹಾಗೂ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಗಳಿವೆ. ಸುಗಮ ವಾಹನ ಸಂಚಾರ ವ್ಯವಸ್ಥೆಗೂ, ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗುತ್ತದೆ. [ರೆಡ್ಡಿಗೆ ಜಾಮೀನು : ಯಾರೇನು ಹೇಳಿದರು?]
ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಆದ್ದರಿಂದ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಎಂ.ಎನ್. ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications