ಬೆಂಗಳೂರಿನ ಜನರ ಜೊತೆ ಪೊಲೀಸ್ ಆಯುಕ್ತರ ಮಾತುಕತೆ
ಬೆಂಗಳೂರು, ನವೆಂಬರ್ 20: ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ನಗರದ ಜನರ ಜೊತೆ ಮಾತುಕತೆ ನಡೆಸಲಿದ್ದಾರೆ. ಟ್ವೀಟರ್‌ನಲ್ಲಿ ಈ ಕುರಿತು ಆಯುಕ್ತರು ಮಾಹಿತಿಯನ್ನು ನೀಡಿದ್ದಾರೆ.
ನವೆಂಬರ್ 21ರ ಶನಿವಾರ ಬೆಳಗ್ಗೆ 11 ರಿಂದ 12ರ ತನಕ ಪೊಲೀಸ್ ಆಯುಕ್ತರು ಜನರ ಜೊತೆ ಟ್ವಿಟರ್ ಮೂಲಕ ಮಾತುಕತೆ ನಡೆಸಲಿದ್ದಾರೆ. ಜನರು #AskCPBlr ಎಂದು ಟ್ಯಾಗ್ ಮಾಡಿ ಪ್ರಶ್ನೆಗಳನ್ನು ಕೇಳಬಹುದಾಗಿದೆ.
"ಕ್ಯಾಲೆಂಡರ್‌ನಲ್ಲಿ ಮಾರ್ಕ್ ಮಾಡಿಕೊಳ್ಳಿ, ನನ್ನ ಜೊತೆ ನೇರವಾಗಿ ಮಾತನಾಡಿ. ಪೊಲೀಸ್ ವ್ಯವಸ್ಥೆ ಬಗ್ಗೆ ಸಲಹೆಗಳನ್ನು ನೀಡಿ. ನಗರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನಿಮ್ಮ ಸಲಹೆಗಳನ್ನು ನೀಡಿ" ಎಂದು ಕಮಲ್ ಪಂಥ್ ಟ್ವೀಟ್ ಮಾಡಿದ್ದಾರೆ.

ಪ್ರತಿ ತಿಂಗಳ 4ನೇ ಶನಿವಾರ ಬೆಳಗ್ಗೆ 11 ರಿಂದ 12ರ ತನಕ ಟ್ವಿಟರ್‌ನಲ್ಲಿ ಆಯುಕ್ತರು ಲೈವ್ ಬರಲಿದ್ದು, ಜನರ ಜೊತೆ ಮಾತುಕತೆ ನಡೆಸಲಿದ್ದಾರೆ. ತಿಂಗಳಿಗೆ ಒಂದು ಬಾರಿ ಜನರ ಜೊತೆ ಮಾತುಕತೆ ನಡೆಸುವ ಕಾರ್ಯಕ್ರಮ ಇದಾಗಿದೆ.
4ನೇ ಶನಿವಾರವನ್ನು ಬೆಂಗಳೂರು ಪೊಲೀಸರು 'ಮಾಸಿಕ ಜನಸಂಪರ್ಕ ದಿವಸ' ಎಂದು ಆಚರಣೆ ಮಾಡಲಿದ್ದಾರೆ. ಅಂದು ಹತ್ತಿರದ ಪೊಲೀಸ್ ಠಾಣೆಗೆ ಜನರು ಭೇಟಿ ನೀಡಿ, ತಮಗೆ ಬೇಕಾದ ಮಾಹಿತಿಯನ್ನು ಪಡೆಯಲು ಸಹ ಅವಕಾಶ ನೀಡಲಾಗುತ್ತದೆ.
Mark your calendars! Join me for another live session to discuss your concerns and queries about BCP, and to share your suggestions to improve our city. #AskCPBlr pic.twitter.com/DkdiC3ScSQ
— Kamal Pant, IPS (@CPBlr) November 19, 2020
ಜನರು ನೇರವಾಗಿ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ತಮ್ಮ ಪ್ರದೇಶದ ಕಾನೂನು ಸುವ್ಯವಸ್ಥೆ ಕುರಿತು ದೂರುಗಳನ್ನು ನೀಡಬಹುದು. ತಮ್ಮ ದೂರಿನ ಸ್ಥಿತಿಗತಿಯ ಬಗ್ಗೆ ಪೊಲೀಸ್ ಠಾಣೆಯಿಂದ ಮಾಹಿತಿಯನ್ನು ಪಡೆಯಬಹುದಾಗಿದೆ.
ಇದೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಇಂತಹ ಕಾರ್ಯಕ್ರಮ ರೂಪಿಸಿದ್ದಾರೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ಮನವಿ ಮಾಡಿದ್ದಾರೆ.












Click it and Unblock the Notifications