ರೇಖಾ ಕದಿರೇಶ್ ಕೊಲೆ ಪ್ರಕರಣ: ಆರೋಪಿಗಳ ಪತ್ತೆ ಕಾರ್ಯಾಚರಣೆ ವಿವರಿಸಿದ ಕಮಲ್ ಪಂತ್
ಬೆಂಗಳೂರು, ಜೂನ್ 25: ಬೆಂಗಳೂರಿನ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, "ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಆದೇಶಿಸಿದ್ದರು. ರೇಖಾ ಕದಿರೇಶ್ ಕೊಲೆ ಆರೋಪಿಗಳ ಪತ್ತೆಗಾಗಿ ಆರು ವಿಶೇಷ ತಂಡ ರಚನೆ ಮಾಡಲಾಗಿತ್ತು,'' ಎಂದು ಹೇಳಿದರು.
"ಡಿಸಿಪಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಎಲ್ಲಾ ಪೊಲೀಸರು ಅಲರ್ಟ್ ಆಗಿದ್ದರು. ಶುಕ್ರವಾರ ಬೆಳಿಗ್ಗೆ ಕಾಮಾಕ್ಷಿಪಾಳ್ಯ ಬಜಾಜ್ ಮೈದಾನ ಬಳಿ ಆರೋಪಿಗಳು ತಲೆಮರೆಸಿಕೊಂಡಿರುವ ಮಾಹಿತಿಯಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪೀಟರ್ ಹಾಗೂ ಸೂರ್ಯನನ್ನು ಬಂಧಿಸಲಾಗಿದೆ. ಬಂಧಿಸುವಾಗ ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಪ್ರಾಣ ರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹೊಡೆಯಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,'' ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
"ನಿಖರವಾಗಿ ಯಾವ ವಿಚಾರಕ್ಕಾಗಿ ರೇಖಾ ಕದಿರೇಶ್ ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ಇನ್ನೂ ಮಹಿತಿ ತಿಳಿದುಬಂದಿಲ್ಲ. ವಿಚಾರಣೆ ನಡೆಸಿದ ಬಳಿಕವಷ್ಟೇ ಗೊತ್ತಾಗಲಿದೆ. ಕೊಲೆ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದು, ಆರೋಪಿಗಳಿಗೆ ಸಹಾಯ ಮಾಡಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶೀಘ್ರವಾಗಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು,'' ಎಂದು ಮಾಹಿತಿ ಹಂಚಿಕೊಂಡರು.

ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್‌ರನ್ನು ಬರ್ಬರವಾಗಿ ಕೊಲ್ಲುವ ದೃಶ್ಯದಲ್ಲಿ ರಕ್ಷಣೆಗೆ ಬರುವವರ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ. 17ಕ್ಕೂ ಹೆಚ್ಚು ಸಲ ಚಾಕುವಿನಿಂದ ಇರಿದಿದ್ದಾರೆ. ಅರೋಪಿ ಸೂರ್ಯ ಚಾಕುವಿನಿಂದ ಹಲ್ಲೆ ಮಾಡಿದ್ದು, ನಂತರ ಪೀಟರ್‌ನಿಂದಲೂ ಚಾಕುವಿನಿಂದ ಹಲ್ಲೆಯಾಗಿದೆ. ಈ ವೇಳೆ ಯಾರೂ ಹತ್ತಿರ ಸುಳಿಯದಂತೆ ಭೀತಿ ಸೃಷ್ಟಿಯಾಗಿತ್ತು.
ರೇಖಾ ಹಂತಕರನನ್ನು ಬಂಧಿಸುವ ಕಾರ್ಯಾಚರಣೆ ಹೇಗಿತ್ತು?
ಟೀಮ್ 1: ಕಾಟನ್‌ಪೇಟೆ ಇನ್ಸ್‌ಪೆಕ್ಟರ್ ಚಿದಾನಂದ ಮೂರ್ತಿ
ಟೀಮ್ 2: ಸಿಟಿ ಮಾರ್ಕೆಟ್ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ
ಟೀಮ್ 3: ಕಾಮಾಕ್ಷಿಪಾಳ್ಯ ಇನ್ಸ್‌ಪೆಕ್ಟರ್ ಪ್ರಶಾಂತ್
ಟೀಮ್ 4: ಉಪ್ಪಾರಪೇಟೆ ಇನ್ಸ್‌ಪೆಕ್ಟರ್ ಶಿವಸ್ವಾಮಿ
ಟೀಮ್ 5: ಕಾಲಾಸಿಪಾಳ್ಯ ಇನ್ಸ್‌ಪೆಕ್ಟರ್ ಚಂದ್ರಕಾಂತ್
ಟೀಮ್ 6: ಚಾಮಾರಾಜಪೇಟೆ ಇನ್ಸ್‌ಪೆಕ್ಟರ್ ಲೋಕಾಪುರ ನೇತೃತ್ವದಲ್ಲಿ ಆರು ವಿಶೇಷ ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿತ್ತು.
ಮೂರು ಟೀಮ್‌ಗಳಿಂದ ಆರೋಪಿಗಳ ಹುಡುಕಾಟ ನಡೆಸಲಾಗಿತ್ತು, ರಾತ್ರಿ ಒಟ್ಟು 50ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು. ರಾತ್ರಿ ಪೂರ್ತಿ ವಿಚಾರಣೆ ನಡೆಸಲಾಗಿತ್ತು. ಮೊದಲ ಹಂತದ ವಿಚಾರಣೆ ಬಳಿಕ 39 ಜನರನ್ನು ವಶದಲ್ಲಿ ಇಟ್ಟುಕೊಂಡರು. ನಂತರ 39ರಲ್ಲಿ ವಿಚಾರಣೆ ಸಮಯದಲ್ಲಿ ನೇರವಾಗಿ ಪೀಟರ್ ಸಂಪರ್ಕ ಹೊಂದಿದ್ದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆಯಲಾಯಿತು.

ಪೀಟರ್ ಸಂಪರ್ಕದ ವ್ಯಕ್ತಿಯಿಂದ ಹೆಚ್ಚಿನ ಮಾಹಿತಿ ಪಡೆದು, ನಂತರ ಮಾಹಿತಿ ಆಧರಿಸಿ ಕಾರ್ಯಚರಣೆ ನಡೆಸಿದ ಪೊಲೀಸರು, ರಾತ್ರಿ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ತಾಳವಾಡಿ ರಸ್ತೆ, ಸಿಂಗೇನ ಅಗ್ರಹಾರ, ಚಂದಾಪುರ, ವರ್ತೂರು, ಹೊಸೂರು ಬಳಿಯಲ್ಲಿ ಹುಡುಕಾಟ ನಡೆಸಿದರು.
ಗುರುವಾರ ಕೊಲೆ ಘಟನೆ ಬಳಿಕ ಒಂದು ಕಡೆ ನಿಲ್ಲದೆ ಆರೋಪಿಗಳು ತಿರುಗುತ್ತಲೇ ಇದ್ದರು. ಆಟೋ ಒಂದರಲ್ಲಿ ಆರೋಪಿಗಳು ಬೆಂಗಳೂರು ನಗರಾದ್ಯಂತ ತಿರುಗಿತ್ತಿದ್ದರು. ಆಟೋದಲ್ಲಿ ತಿರುಗುತ್ತಿದ್ದಾರೆ ಎಂದು ಬೆಳಗಿನ ಜಾವ 3.30ಕ್ಕೆ ಪೊಲೀಸರು ಮಾಹಿತಿ ಪಡೆದರು. ನಂತರ ಪೊಲೀಸರು ಆಟೋ ಹುಡುಕುತ್ತಾ ಹೊರಟರು. ಆಸ್ಟಿಂಗ್ ಟೌನ್‌ನಲ್ಲಿ ಮೊದಲ ಬಾರಿಗೆ ಆಟೋ ಬಗ್ಗೆ ಮಾಹಿತಿ ಪಡೆದರು. ಆಸ್ಟಿಂಗ್ ಟೌನ್ ಬಳಿಕ ಕೋರಮಂಗಲ, ಎಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಸಿಂಗೇನ ಅಗ್ರಹಾರ ಸುತ್ತಮುತ್ತ ತಿರುಗಿದ್ದರು.
ಬಳಿಕ ಕೊಡತಿ, ಚಿಕ್ಕನಾಯಕನ ಹಳ್ಳಿಯಲ್ಲಿ ತಿರುಗಿ ಆರೋಪಿಗಳು ಮತ್ತೆ ನಗರಕ್ಕೆ ಬಂದಿದ್ದರು. ಶ್ರೀರಾಮಪುರ, ರಾಜಾಜಿನಗರ, ವಿಜಯನಗರದ ಕಡೆ ಶುಕ್ರವಾರ ಬೆಳಗ್ಗೆ ಆರೋಪಿಗಳು ಬಂದಿದ್ದು, ರಾಜಾಜಿನಗರದಿಂದ ಮೈಸೂರು ರೋಡ್ ಮೂಲಕ ಆರೋಪಿಗಳು ಪಾಸ್ ಆಗಿದ್ದರು. ಈ ಮಾಹಿತಿಯನ್ನು ಪೊಲೀಸ್ ಟೀಮ್ ಪಕ್ಕ ಮಾಡಿಕೊಂಡಿತು.

ಬೆಳಗ್ಗೆ 9.45ಕ್ಕೆ ಮತ್ತೆ ಪೊಲೀಸರಿಗೆ ಸುಳಿವು ಸಿಗದಂತೆ ಆಗಿತ್ತು. ನಂತರ ಮಾಗಡಿ ರೋಡ್‌ನಲ್ಲಿ ಆರೋಪಿಗಳ ಆಟೋ ಚಲನದ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ತಕ್ಷಣ ತಂಡಗಳ ಸಹಿತ ಆರೋಪಿಗಳ ಬೆನ್ನು ಹತ್ತಿದ ಪೊಲೀಸರು, 12 ಗಂಟೆ ಸುಮಾರಾಗಿ ಸುಂಕದಕಟ್ಟೆ ಬಳಿಯ ಬಜಾಜ್ ಗ್ರೌಂಡ್ ಬಳಿ ಇರುವ ಬಗ್ಗೆ ಮಾಹಿತಿ ಪಡೆದರು. ತಕ್ಷಣ ಉಪ್ಪಾರಪೇಟೆ ಇನ್ಸ್‌ಪೆಕ್ಟರ್ ಶಿವಸ್ವಾಮಿ ಮತ್ತು ಕಾಟನ್ ಪೇಟೆ ಇನ್ಸ್‌ಪೆಕ್ಟರ್ ಚಿದಾನಂದ ಮೂರ್ತಿ ಅರೋಪಿಗಳ ಬೆನ್ನು ಹತ್ತಿದ್ದರು.
ಆರೋಪಿಗಳು ಮರದ ಕೆಳಗೆ ಕುಳಿತು ಎಣ್ಣೆ ಹೊಡೆಯುತ್ತಿದ್ದಾಗ ರೌಂಡ್ ಮಾಡಿದ್ದ ಪೊಲೀಸರು, ಬಳಿಕ ಡ್ಯಾಗರ್‌ನಿಂದ ಹಿಡಿಯಲು ಹೋದ ಪಿಎಸ್ಐ ಕರಿಯಣ್ಣ ಮತ್ತು ಹೆಡ್ ಕಾನ್ಸ್‌ಟೆಬಲ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದರು. ಬಳಿಕ ಆರೋಪಿಗಳನ್ನು ಲಕ್ಷ್ಮೀ ಆಸ್ಪತ್ರೆಗೆ ದಾಖಲು ಮಾಡಿದರು.
Recommended Video
ಈಗಾಗಲೇ ಆರೋಪಿ ಸೂರ್ಯನ ವಿರುದ್ಧ ಎರಡು ಮರ್ಡರ್ ಕೇಸ್(IPC 302), ಎರಡು ಕೊಲೆ ಯತ್ನ ಕೇಸ್ (IPC 307). ಪೀಟರ್ ವಿರುದ್ಧ ಮೂರು ಕೊಲೆ ಕೇಸ್, ಒಂದು ಹಲ್ಲೆ ಕೇಸ್, ಎರಡು ದರೋಡೆ ಪ್ರಕರಣ ದಾಖಲಾಗಿದ್ದವು.












Click it and Unblock the Notifications