ಒಳ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸ್ ದಾಳಿ: ಸಿಎಂಗೆ ಸಿಪಿಐ(ಎಂ) ಪ್ರಶ್ನೆ
ಬೆಂಗಳೂರು, ಡಿ. 12: ಭಾನುವಾರ ಒಳ ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟನಿರತರ ಮೇಲೆ ಹಲ್ಲೆ ನಡೆಸಿ, ಹಲವರನ್ನು ಬಂಧಿಸಿದ್ದ ಕೃತ್ಯವನ್ನು ಸಿಪಿಐ(ಎಂ) ಖಂಡಿಸಿದೆ. ಹೋರಾಟಗಾರರ ಮೇಲೆ ಪೋಲೀಸ್ ಧಾಳಿ ನಡೆಸುವ ಮೂಲಕ ಸರಕಾರವು ಒಳ ಮೀಸಲಾತಿಯನ್ನು ವಿರೋಧಿಸುವ ಸಂದೇಶ ನೀಡಿದೆಯಾ..? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಿಪಿಐ(ಎಂ) ಪ್ರಶ್ನಿಸಿದೆ.
ಪರಿಶಿಷ್ಟ ಜಾತಿ ಸಮುದಾಯಗಳ ನಡುವೆ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಹೋರಾಟಗಾರರ ಜೊತೆ ಸರ್ಕಾರ ಮಾತುಕತೆ ನಡೆಸಬೇಕಿತ್ತು. ಮಾತುಕತೆ ನಡೆಸಿ ಸದಾಶಿವ ಆಯೋಗದ ವರದಿಯ ಕುರಿತು ಸರ್ಕಾರದ ಅಭಿಪ್ರಾಯವೇನೆಂದು ಪ್ರಕಟಿಸುವ ಬದಲು ಹೋರಾಟ ನಿರತರ ಮೇಲೆ ಪೋಲೀಸ್ ಧಾಳಿಗೆ ಕ್ರಮವಹಿಸಿ ದೌರ್ಜನ್ಯ ನಡೆಸಿರುವುದನ್ನು ಸಿಪಿಐ(ಎಂ) ಪಕ್ಷ ಬಲವಾಗಿ ಖಂಡಿಸುತ್ತದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ತಕ್ಷಣವೇ ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ಮತ್ತು ಉಚಿತ ಆರೋಗ್ಯ ಸೇವೆಯನ್ನು ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದಿದೆ.
ಪರಿಶಿಷ್ಠ ಜಾತಿ ಸಮುದಾಯದ ಮೀಸಲಾತಿಯಲ್ಲಿ ಹಿಂದುಳಿದಿರುವಿಕೆಯ ಕಾರಣದಿಂದ ವಂಚನೆಗೊಳಗಾದವರಿಗೆ ಒಳ ಮೀಸಲಾತಿ ನೀಡಬೇಕೆಂಬ ಒತ್ತಾಯ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಈ ಕುರಿತಂತೆ ನ್ಯಾಯಮೂರ್ತಿ ಸದಾಶಿವ ಆಯೋಗವು ತನ್ನ ವರದಿಯನ್ನು ನೀಡಿ ಹಲವು ವರ್ಷಗಳೇ ಕಳೆದಿವೆ. ಇದುವರೆಗೆ ರಾಜ್ಯ ಸರಕಾರ ಆ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ ಮತ್ತು ಸರಕಾರ ಆ ಕುರಿತು ತನ್ನ ನಿಲುವು ಏನೆಂದು ಪ್ರಕಟಿಸದಿರುವುದು ಅಕ್ಷಮ್ಯವಾಗಿದೆ ಎಂದು ಸಿಪಿಐ(ಎಂ) ಆರೋಪಿಸಿದೆ.

ಈ ಕೂಡಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಮತ್ತು ಸರ್ಕಾರ ಆ ಕುರಿತು ತನ್ನ ನಿಲುಮೆ ಏನೆಂಬುದನ್ನು ಪ್ರಕಟಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.
ಒಳ ಮೀಸಲಾತಿಗಾಗಿ ಹೋರಾಟದಲ್ಲಿ ತೊಡಗಿರುವವರ ಮೇಲೆ ಪೋಲೀಸ್ ದಾಳಿಯ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುವ ಮೂಲಕ ಸರ್ಕಾರ ಒಳ ಮೀಸಲಾತಿಯನ್ನು ವಿರೋಧಿಸುವ ಇಂಗಿತ ವ್ಯಕ್ತಪಡಿಸಿದೆಯೇ ಎಂದು ಸಿಪಿಐ(ಎಂ) ಮುಖ್ಯ ಮಂತ್ರಿಗಳನ್ನು ಪ್ರಶ್ನಿಸಿದೆ.
ಹರಿಹರದಲ್ಲಿರುವ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರ ಸಮಾಧಿ ಬಳಿಯಿಂದ ನವೆಂಬರ್ 28 ರಂದು 'ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಯಾಗಲಿ ಹೋರಾಟ'ದ ಪಾದಯಾತ್ರೆ ಆರಂಭವಾಗಿತ್ತು. ಭಾನುವಾರ ಫ್ರೀಡಂ ಪಾರ್ಕ್ ಬಳಿ ಮಳೆಯಲ್ಲಿಯೇ ಸಮಾವೇಶ ನಡೆಸಲಾಗಿತ್ತು.












Click it and Unblock the Notifications