Mann Ki Baat: ಮನ್ ಕಿ ಬಾತ್‌ನಲ್ಲಿ ಬೆಂಗಳೂರಿನ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ,ಯಾವ ವಿಚಾರಕ್ಕೆ?
ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನ್ ಕಿ ಬಾತ್ 127ನೇ ಸಂಚಿಕೆಯಲ್ಲಿ ಬೆಂಗಳೂರಿನ ಬಗ್ಗೆ ಉಲ್ಲೇಖಿಸಿದ್ದಾರೆ. ಬೆಂಗಳೂರನ್ನು ಸರೋವರಗಳ ನಗರ ಎಂದು ಕರೆಯಲಾಗುತ್ತದೆ. ಬೆಂಗಳೂರಿನ ಇಂಜಿನಿಯರ್ ಆಗಿರುವ ಕಪಿಲ್ ಶರ್ಮಾ ಅವರು ಕೆರೆಗಳಿಗೆ ಹೊಸ ಜೀವ ನೀಡುವ ಅಭಿಯಾನವನ್ನು ಪ್ರಾರಂಭಿಸಿದ್ದು, ಅವರ ತಂಡವು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 40 ಬಾವಿಗಳು ಮತ್ತು 6 ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದಲ್ಲದೆ, ಮರ ನೆಡುವ ಅಭಿಯಾನದಲ್ಲೂ ತೊಡಗಿಸಿಕೊಂಡಿದೆ ಎಂದು ಶ್ಲಾಘಿಸಿದ್ದಾರೆ. ಈ ಮೂಲಕ ದೃಢನಿಶ್ಚಯವಿದ್ದಾಗ ಬದಲಾವಣೆ ಖಂಡಿತ ಬರುತ್ತದೆ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದಿದ್ದಾರೆ.
ಕಳೆದ ವರ್ಷ ಲಕ್ನೋದಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಕರ್ತವ್ಯ ಸಭೆಯ ಸಂದರ್ಭದಲ್ಲಿ ರಿಯಾ ಎಂಬ ಶ್ವಾನ ಎಲ್ಲರ ಗಮನ ಸೆಳೆಯಿತು. ಅದು ಬಿಎಸ್‌ಎಫ್‌ನಿಂದ ತರಬೇತಿ ಪಡೆದ ಮುಧೋಳ ಹೌಂಡ್ ಆಗಿದ್ದು, ಕಾರ್ಯಕ್ರಮದಲ್ಲಿ ಅನೇಕ ವಿದೇಶಿ ತಳಿಗಳ ಶ್ವಾನಗಳನ್ನು ಸೋಲಿಸಿ ಕರ್ನಾಟಕದ ಮುಧೋಳ ಶ್ವಾನವಾದ ರಿಯಾ ಪ್ರಥಮ ಬಹುಮಾನವನ್ನು ಗೆದ್ದಿತು. ನಮ್ಮ ಸ್ಥಳೀಯ ಶ್ವಾನಗಳು ಅದ್ಭುತ ಧೈರ್ಯವನ್ನು ಪ್ರದರ್ಶಿಸಿವೆ ಎಂದು ಪ್ರಧಾನಿ ಮೋದಿ ಕೊಂಡಾಡಿದ್ದಾರೆ.

ಜಿಎಸ್‌ಟಿ ಉಳಿತಾಯ ಉತ್ಸವದಿಂದಾಗಿ ಹಬ್ಬದ ಋತುವಿನಲ್ಲಿ ಸಂತೋಷದ ವಾತಾವರಣ ಕಂಡುಬಂದಿದೆ. ಮಾರುಕಟ್ಟೆಗಳಲ್ಲಿ ಸ್ಥಳೀಯ ವಸ್ತುಗಳ ಖರೀದಿಯಲ್ಲಿ ಅಗಾಧ ಏರಿಕೆ ಕಂಡುಬಂದಿದೆ. ಖಾದ್ಯ ತೈಲದ ಬಳಕೆಯನ್ನು ಶೇ. 10 ರಷ್ಟು ಕಡಿಮೆ ಮಾಡುವಂತೆ ನಾನು ಒತ್ತಾಯಿಸಿದ್ದೆ. ಜನರು ಇದಕ್ಕೆ ತುಂಬಾ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿಸಿದ್ದಾರೆ ಎಂದಿದ್ದಾರೆ.
ವಂದೇ ಮಾತರಂನ 150ನೇ ವರ್ಷಾಚರಣೆ
ನವೆಂಬರ್ 7ರಂದು ನಡೆಯಲಿರುವ ಭಾರತದ ರಾಷ್ಟ್ರೀಯ ಗೀತೆ "ವಂದೇ ಮಾತರಂ"ನ 150ನೇ ವರ್ಷಾಚರಣೆಯಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಗೀತೆಯನ್ನು ಮೊದಲು 1896ರಲ್ಲಿ ರವೀಂದ್ರನಾಥ ಟ್ಯಾಗೋರ್ ಹಾಡಿದ್ದರು. ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸಿದರು ಎಂದು ನೆನೆದಿದ್ದಾರೆ. ವಂದೇ ಮಾತರಂ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಅಪರಿಮಿತ ಭಾವನೆ ಮತ್ತು ಹೆಮ್ಮೆಯನ್ನು ಹೊತ್ತಿಸುತ್ತದೆ ಎಂದಿದ್ದಾರೆ.
ವಂದೇ ಮಾತರಂ ದೇಶಭಕ್ತಿ ಮತ್ತು ಏಕತೆಯ ಅಭಿವ್ಯಕ್ತಿಯಾಗಿದ್ದು, ಇದು ಭಾರತೀಯರಿಗೆ ಸ್ಫೂರ್ತಿ ನೀಡುತ್ತಿದೆ. ಅದರ ಪರಂಪರೆಯನ್ನು ಪ್ರತಿಬಿಂಬಿಸುತ್ತಾ ವಂದೇ ಮಾತರಂ ಮೊದಲ ಪದವೇ ನಮ್ಮ ಹೃದಯದಲ್ಲಿ ಭಾವನೆಗಳನ್ನು ಹುಟ್ಟುಹಾಕುತ್ತದೆ. ವಂದೇ ಮಾತರಂ ಈ ಒಂದು ಪದವು ಹಲವು ಭಾವನೆಗಳನ್ನು, ಹಲವು ಶಕ್ತಿಗಳನ್ನು ಒಳಗೊಂಡಿದೆ. ಸರಳವಾಗಿ ಹೇಳುವುದಾದರೆ, ಇದು ಭಾರತೀಯ ಮಾತೃ ವಾತ್ಸಲ್ಯವನ್ನು ಅನುಭವಿಸುವಂತೆ ಮಾಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications