Narendra Modi Road Show: ಏ.29ರಂದು ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ; ಇಲ್ಲಿದೆ ಪರ್ಯಾಯ ಮಾರ್ಗ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ರಾಷ್ಟ್ರೀಯ ನಾಯಕರ ಪ್ರಚಾರದ ಜೋರಾಗಿ ನಡೆಯುತ್ತಿದೆ. ರಾಜ್ಯ ನಾಯಕರೊಂದಿಗೆ ಸೇರಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತಂತ್ರ- ಪ್ರತಿತಂತ್ರ ರೂಪಿಸುತ್ತಿದ್ದಾರೆ.
ಸದ್ಯ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ರಾಷ್ಟ್ರೀಯ ನಾಯಕರಿಂದ ಮತಬೇಟೆ ನಡೆಸುತ್ತಿದ್ದಾರೆ. ಆದರೆ, ಈವರೆಗೂ ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಧುಮುಕಿರದ ಪ್ರಧಾನಿ ನರೇಂದ್ರ ಮೋದಿ ಶನಿವಾರ (ಏಪ್ರಿಲ್ 29)ರಿಂದ ತಮ್ಮ ಅಬ್ಬರದ ಪ್ರಚಾರದ ಮೂಲಕ ಚುನಾವಣಾ ಅಖಾಡಕ್ಕೆ ಪ್ರವೇಶಿಸಲಿದ್ದಾರೆ.

ಇದೀಗ ಏಪ್ರಿಲ್ 29ರಿಂದ ಸತತ ಒಂದು ವಾರದ ಕಾಲ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹುಮ್ನಾಬಾದ್, ವಿಜಯಪುರ, ಕುಡಚಿಯ ಪ್ರಚಾರ ಸಮಾವೇಶಗಳಲ್ಲಿ ಭಾಗವಹಿಸಿದ ಬಳಿಕ ನರೇಂದ್ರ ಮೋದಿ ಅವರು ಏಪ್ರಿಲ್ 29ರ ಸಂಜೆ 6.15ಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ಹೀಗಾಗಿ, ಭದ್ರತಾ ದೃಷ್ಟಿಯಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ರಸ್ತೆ ಸಂಚಾರಕ್ಕೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಶನಿವಾರ ಮಧ್ಯಾಹ್ನ 2ರಿಂದ ರಾತ್ರಿ 7.30ರವರೆಗಿನ ಈ ಅವಧಿಯಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ನರೇಂದ್ರ ಮೋದಿ ರೋಡ್ ಶೋ ವೇಳೆ ಪರ್ಯಾಯ ರಸ್ತೆಗಳ ಬಳಕೆಗೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಭ?
* ಹಳೇ ಏರ್‌ಪೋರ್ಟ್ ರಸ್ತೆ
* ಕಬ್ಬನ್ ರಸ್ತೆ
* ಅಂಬೇಡ್ಕರ್ ವೀದಿ
* ಕೃಂಬಿಗಲ್ ರಸ್ತೆ
* ದೇವಾಂಗ ರಸ್ತೆ
* ಕೇಂಬ್ರಿಡ್ಜ್ ಲೇಔಟ್ ರಸ್ತೆ
* ಡಿಕನ್ಸನ್ ರಸ್ತೆ
* ಲಾಲ್‌ಭಾಗ್ ವೆಸ್ಟ್ ಗೇಟ್ ರಸ್ತೆ
* ಕೆ.ಆರ್. ಸರ್ಕಲ್
* ಆರ್ವಿ ಕಾಲೇಜ್ ರಸ್ತೆ
* ಲಾಲ್ ಭಾಗ್ ಮುಖ್ಯ ರಸ್ತೆ
* ಬಸನವಗುಡಿ 50 ಅಡಿ ಕೆನರಾ ಬ್ಯಾಂಕ್ ರಸ್ತೆ

ಪರ್ಯಾಯ ಮಾರ್ಗಗಳ ಮಾಹಿತಿ
* ಮಾಗಡಿ ಕಡೆಯಿಂದ ಬೆಂಗಳೂರು ನಗರ ಪ್ರವೇಶಿಸುವ ವಾಹನಗಳು ತಾವರೆಕೆರೆ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಹೆಮ್ಮಿಗೆಪುರ-ಕೊಮ್ಮಘಟ್ಟ-ಕೆಂಗೇರಿ ಮೂಲಕ ಮೈಸೂರು ರಸ್ತೆಯಲ್ಲಿ ಸಂಚರಿಸಬಹುದಾಗಿದೆ.
* ತುಮಕೂರು ಕಡೆಯಿಂದ ಬಂದು ನೈಸ್ ರಸ್ತೆಯಲ್ಲಿ ಸಂಚರಿಸುವ ಸರಕು ವಾಹನಗಳು ನೆಲಮಂಗಲ-ಸೊಂಡೇಕೊಪ್ಪ ಬೈಪಾಸ್‌ನಲ್ಲಿ ಬಲತಿರುವು ಪಡೆದು ಸೊಂಡೇಕೊಪ್ಪ-ತಾವರೆಕೆರೆ-ಹೆಮ್ಮಿಗೆಪುರ-ಕೊಮ್ಮಘಟ್ಟ-ಕೆಂಗೇರಿ ಮೂಲಕ ಮೈಸೂರು ರಸ್ತೆಯಲ್ಲಿ ಸಂಚರಿಸಬಹುದು.
* ಬೆಂಗಳೂರು ನಗರ ಒಳಭಾಗದಿಂದ ಮಾಗಡಿ ಕಡೆಗೆ ಸಂಚರಿಸುವ ವಾಹನಗಳು ಎಂಸಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಮೈಸೂರು ರಸ್ತೆ-ಕೆಂಗೇರಿ-ಕೊಮ್ಮಘಟ್ಟ-ಹೆಮ್ಮಿಗೆಪುರ-ತಾವರೆಕೆರೆ ಮೂಲಕ ಸಂಚರಿಸಬಹುದು.

* ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮೈಸೂರು ರಸ್ತೆಗೆ ಚಲಿಸಿ ಕೆಂಗೇರಿ-ಆರ್‌ಆರ್ ಕಾಲೇಜು ಮೂಲಕ ರಾಮೋಹಳ್ಳಿ, ಚಂದ್ರಪ್ಪ ಸರ್ಕಲ್-ತಾವರೆಕೆರೆ ಮೂಲಕ ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಗೆ ಸಂಚರಿಸಬಹುದು.
* ಸಿಎಂಟಿಐ ಜಂಕ್ಷನ್‌ನಿಂದ ನಾಯಂಡಹಳ್ಳಿ-ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಗೊರಗುಂಟೆಪಾಳ್ಯ-ವೆಸ್ಟ್ ಆಫ್ ಕಾರ್ಡ್ ರಸ್ತೆ- ಎಂಸಿ ಸರ್ಕಲ್-ವಿಜಯನಗರ ಮೂಲಕ ಮೈಸೂರು ರಸ್ತೆಗೆ ಸಂಚರಿಸಬೇಕು.
* ಹಳೇ ರಿಂಗ್ ರೋಡ್‌ನಲ್ಲಿ ಕೆಂಗೇರಿ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಬರುವ ವಾಹನಗಳು ಉಲ್ಲಾಳ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಉಲ್ಲಾಳ ವಿಲೇಜ್-ರಾಮಸಂದ್ರ ಬ್ರಿಡ್ಜ್-ಹೆಮ್ಮಿಗೆಪುರ-ತಾವರೆಕೆರೆ ಮೂಲಕ ತುಮಕೂರು ರಸ್ತೆಯಲ್ಲಿ ಸಂಚರಿಸಬಹುದು.
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ರೋಡ್ ಶೋ ನಡೆಯುವ ರಸ್ತೆಯಲ್ಲಿ ಭದ್ರತೆ ಕುರಿತು ಎನ್ಎಸ್‌ಜಿ ಹಾಗೂ ಬೆಂಗಳೂರು ನಗರ ಪೊಲೀಸರು ಸಮಾಲೋಚನೆ ನಡೆಸಿದ್ದಾರೆ. ರೋಡ್ ಶೋಗೆ ಪೊಲೀಸರು ಈಗಾಗಲೇ ಭದ್ರತೆಯ ನೀಲನಕ್ಷೆ ತಯಾರಿಸಿದ್ದು, ಎನ್ಎಸ್‌ಜಿ ಮತ್ತು ಪೊಲೀಸರು ರೋಡ್ ಶೋ ನಡೆಸುವ ಮಾರ್ಗ ಪರಿಶೀಲನೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭದ್ರತೆಗಾಗಿ ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ 3 ಡಿಸಿಪಿಗಳು, 20 ಎಸಿಪಿಗಳು, 40 ಇನ್ಸ್‌ಪೆಕ್ಟರ್, 80 ಪಿಎಸ್ಐ ಸೇರಿ ಮೂರು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರೋಡ್ ಶೋ ವೇಳೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದ್ದು, ನೈಸ್ ರಸ್ತೆ ಜಂಕ್ಷನ್‌ನಿಂದ ಸುಮನಹಳ್ಳಿವರೆಗೆ ಬಿಗಿ ಬಂದೋಬಸ್ತ್ ಇರಲಿದೆ.












Click it and Unblock the Notifications