ಲಾಕ್ ಡೌನ್ ಮುಗಿಯುತ್ತೋ, ಇಲ್ಲವೋ? ಡಿಸಿಎಂ ಸಿಡಿಸಿದ ಹೊಸ ಬಾಂಬ್
ಬೆಂಗಳೂರು, ಏಪ್ರಿಲ್ 8: ಎಲ್ಲಾ ಸರಿಹೋಗಿ ಏಪ್ರಿಲ್ ಹದಿನಾಲ್ಕರಂದು ಲಾಕ್ ಡೌನ್ ಮುಗಿದು, ದೈನಂದಿನ ಜೀವನ ಮತ್ತೆ ಬರಲಿ ಎಂದು ಆಶಿಸುತ್ತಿರುವವರಿಗೆಲ್ಲರಿಗೂ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಸೂಕ್ಷ್ಮವಾಗಿ ಸಂದೇಶವೊಂದನ್ನು ನೀಡಿದ್ದಾರೆ.
ನಗರದ ಮಲ್ಲೇಶ್ವರ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಬಡಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ಹಂಚಿ ಮಾತನಾಡುತ್ತಿದ್ದ ಅಶ್ವಥ್ ನಾರಾಯಣ, "ಲಾಕ್ ಡೌನ್ ಇರುವ ಈ ಸಂದರ್ಭದಲ್ಲಿ ಅಲ್ಲಲ್ಲಿ ಸಾರ್ವಜನಿಕರು ಸುಮ್ಮನೆ ರಸ್ತೆಗಿಳಿಯುತ್ತಿದ್ದರೂ, ಯಾವುದೇ ಸಭೆ, ಸಮಾರಂಭಗಳನ್ನು ಆಯೋಜಿಸದೇ ಸಹಕರಿಸುತ್ತಿದ್ದಾರೆಂದು" ಹೇಳಿದ್ದಾರೆ.
ಕೊರೊನಾ ವೈರಸ್ ಸಂಪೂರ್ಣ ನಿರ್ನಾಮವಾಗುವ ವರೆಗೂ ನಾವು ಜಾಗರೂಕತೆಯಿಂದ ಇರಬೇಕಾಗುತ್ತದೆ. ಕನಿಷ್ಠವೆಂದರೂ, ಜನರು ಮುಂದಿನ 7-8 ತಿಂಗಳು ಮುನ್ನೆಚ್ಚರಿಕೆಯನ್ನು ವಹಿಸಬೇಕು" ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.

"ಜನರು ಸರಕಾರದ ಆದೇಶವನ್ನು ಪಾಲಿಸಬೇಕು. ಮಾಸ್ಕ್ ಧರಿಸದೇ ರಸ್ತೆಗಿಳಿಯಬೇಡಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ" ಎಂದು ಅಶ್ವಥ್ ನಾರಾಯಣ ಜನರಲ್ಲಿ ಮನವಿಯನ್ನು ಮಾಡಿದ್ದಾರೆ.
"ಸಾರ್ವಜನಿಕರು ಸ್ವಚ್ಚತೆಗೆ ಆದ್ಯತೆಯನ್ನು ನೀಡಬೇಕು. ಸಾರ್ವಜನಿಕರು ಮುಂದಿನ ಏಳೆಂಟು ತಿಂಗಳು ಇದೇ ರೀತಿ ಸಹಕಾರವನ್ನು ನೀಡಬೇಕು" ಎಂದು ಡಿಸಿಎಂ ಅಶ್ವಥ್ ನಾರಾಯಣ ನೀಡಿರುವ ಹೇಳಿಕೆ, ಲಾಕ್ ಡೌನ್ ಮುಗಿಯವ ವಿಚಾರದಲ್ಲಿ ಜನರು ಇನ್ನಷ್ಟು ಗೊಂದಲಕ್ಕೀಡಾಗುವಂತಾಗಿದೆ.
"ಮಲ್ಲೇಶ್ವರದ ಭಾಗದಲ್ಲಿ 12ಕ್ಕೂ ಅಧಿಕ ಸಾವಿರ ಆಹಾರ ಪೊಟ್ಟಣಗಳನ್ನು ದಿನಂಪ್ರತಿ ಅಗತ್ಯ ಇರುವವರಿಗೆ ವಿತರಿಸಲಾಗುತ್ತಿದೆ. ಆಹಾರ ತಯಾರಿಸುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಸ್ವಚ್ಛತೆ ಹಾಗೂ ಗುಣಮಟ್ಟದ ಪರಿಶೀಲನೆ ನಡೆಸುತ್ತಿದ್ದೇನೆ" ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.












Click it and Unblock the Notifications