ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನಿರಾಕರಣೆ: ಕೇಂದ್ರ ಸರ್ಕಾರಕ್ಕೆ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್
2017-2018ನೇ ಸಾಲಿನ ಜೀವಿತ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂಬ ಕಾರಣ ನೀಡಿ 2017ರ ನವೆಂಬರ್‌ನಲ್ಲಿ ಪಿಂಚಣಿ ಸ್ಥಗಿತಗೊಳಿಸಲಾಗಿತ್ತು.
ಬೆಂಗಳೂರು, ಫೆಬ್ರವರಿ. 19: ಜೀವನ ಪ್ರಮಾಣಪತ್ರ ನೀಡದ ಕಾರಣಕ್ಕಾಗಿ ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪಿಂಚಣಿ ತಡೆಹಿಡಿದಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾಗಿರುವ ಅರ್ಜಿದಾರರಾದ ಶತಾಯುಷಿ ಎಚ್.ನಾಗಭೂಷಣ ರಾವ್ (102) ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವತಂತ್ರ ಸೈನಿಕ ಸಮ್ಮಾನ್ ಗೌರವ ಧನ (ಗೌರವ ಪಿಂಚಣಿ) ನೀಡುತ್ತಿದ್ದವು. ಆದರೆ, ಜೀವನ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಪಿಂಚಣಿ ತಡೆಹಿಡಿದಿದ್ದವು. ಇಳಿ ವಯಸ್ಸಿನಲ್ಲಿ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ದಂಡ ವಿಧಿಸಿ ಆದೇಶಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ದಂಡ ವಿಧಿಸಿ ಆದೇಶ ಹೊರಡಿಸಿದೆ.

2017-2018ನೇ ಸಾಲಿನ ಜೀವಿತ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂಬ ಕಾರಣ ನೀಡಿ 2017ರ ನವೆಂಬರ್‌ನಲ್ಲಿ ಪಿಂಚಣಿ ಸ್ಥಗಿತಗೊಳಿಸಲಾಗಿತ್ತು. ಜೀವಿತ ಪ್ರಮಾಣ ಪತ್ರ ಸಲ್ಲಿಸಿದ ಬಳಿಕ ಪಿಂಚಣಿ ಮರುಸ್ಥಾಪನೆಗೊಂಡರೂ ಬಾಕಿ ಉಳಿಸಿಕೊಂಡಿರುವ 3.71 ಲಕ್ಷ ರೂಪಾಯಿ ಪಾವತಿಸಿಲ್ಲ.
ಅರ್ಜಿದಾರರು ಮೊದಲು 2020 ರಲ್ಲಿ ಅರ್ಜಿ ಸಲ್ಲಿಸಿದ್ದು, ಎರಡು ವಾರಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಏನೂ ಪ್ರಯೋಜನವಾಗದ ಕಾರಣ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು. ಮತ್ತೆ 2021 ರಲ್ಲಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ನ್ಯಾಯಾಲಯದ ಆದೇಶದ ಅನ್ವಯ ಅರ್ಜಿದಾರರು ಜೀವಿತ ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಬಾಕಿ ಹಣ ಪಡೆಯಲು ಅರ್ಹರಲ್ಲ ಎಂದು ಹೇಳುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.
"ಅರ್ಜಿದಾರರು 97 ವರ್ಷ ವಯಸ್ಸಿನವರಾಗಿದ್ದು, ಯೋಜನೆಯಡಿ ದೀರ್ಘಕಾಲ ಪಿಂಚಣಿ ಪಡೆಯುತ್ತಿದ್ದರಿಂದ ಜೀವ ಪ್ರಮಾಣಪತ್ರವನ್ನು ಸಲ್ಲಿಸದ ಕಾರಣಕ್ಕೆ ಅಧಿಕಾರಿಗಳು ನಿರಾಸಕ್ತಿ ಪ್ರದರ್ಶಿಸಿದ್ದಾರೆ. ಮಾರ್ಗಸೂಚಿಗಳ ಪ್ರಕಾರ ಅರ್ಜಿದಾರರ ಕೈಯಿಂದ ಜೀವನ ಪ್ರಮಾಣಪತ್ರವನ್ನು ಸಂಗ್ರಹಿಸಲು ಬ್ಯಾಂಕ್ ವಿಫಲವಾದ ಕಾರಣ ಅರ್ಜಿದಾರರು ಬಡ್ಡಿಯೊಂದಿಗೆ ಎಲ್ಲಾ ಬಾಕಿ ಹಣ ಪಡೆಯಲು ಅರ್ಹರಾಗಿರುತ್ತಾರೆ. ಬ್ಯಾಂಕ್ ಅರ್ಜಿದಾರರನ್ನು ಭೇಟಿ ಮಾಡಿ ಜೀವನ ಪ್ರಮಾಣ ಪತ್ರ ಸಂಗ್ರಹಿಸಬೇಕಿತ್ತು' 'ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದ್ದಾರೆ.

ಇನ್ನು, ಡಿಸೆಂಬರ್ 24, 2018 ರಿಂದ ಇಲ್ಲಿಯವರೆಗೆ ಶೇಕಡಾ 6 ಬಡ್ಡಿಯೊಂದಿಗೆ 3.71 ಲಕ್ಷ ಪಿಂಚಣಿ ಬಾಕಿಯನ್ನು ಎರಡು ವಾರಗಳ ಅವಧಿಯಲ್ಲಿ ಪಾವತಿಸಲು ನ್ಯಾಯಾಲಯವು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ದಂಡದ ಮೊತ್ತವನ್ನು ಎರಡು ವಾರದೊಳಗೆ ಅರ್ಜಿದಾರರಿಗೆ ಪಾವತಿಸಬೇಕು. ತಪ್ಪಿದರೆ, ವಾರ್ಷಿಕ ಶೇ.18 ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.
"ಬ್ಯಾಂಕ್‌ಗೆ ಭೇಟಿ ನೀಡಲು ಸಾಧ್ಯವಾಗದ ಪಿಂಚಣಿದಾರರ ನಿಜವಾದ ಸಮಸ್ಯೆಗಳಿದ್ದಲ್ಲಿ, ಆ ವ್ಯಕ್ತಿಗಳನ್ನು ಭೇಟಿ ಮಾಡಿ ಜೀವನ ಪ್ರಮಾಣಪತ್ರವನ್ನು ತೆಗೆದುಕೊಂಡು ವ್ಯವಸ್ಥೆಯಲ್ಲಿ ನವೀಕರಿಸುವುದು ಬ್ಯಾಂಕ್ ಅಧಿಕಾರಿಗಳ ಕರ್ತವ್ಯವಾಗಿದೆ" ಎಂದು ನ್ಯಾಯಾಲಯ ಹೇಳಿದೆ.
ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿಗಳ ಪ್ರಕಾರ 70 ರಿಂದ 99 ವರ್ಷದೊಳಗಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಜೀವನ ಪ್ರಮಾಣ ಪತ್ರವನ್ನು ಪಡೆಯುವುದಕ್ಕಾಗಿ ಬ್ಯಾಂಕ್ ಸಿಬಂದಿಯೇ ಅರ್ಜಿದಾರರ ಮನೆಗೆ ಹೋಗಬೇಕು. ಜೀವನ ಪ್ರಮಾಣ ಪತ್ರ ಪಡೆದ ಆನ್ಲೈನ್ನಲ್ಲಿ ನವೀಕರಿಸಿಕೊಳ್ಳಬೇಕು.












Click it and Unblock the Notifications