Namma Metro Toilte: ಇನ್ಮುಂದೆ ನಿಲ್ದಾಣದಲ್ಲಿ ಶೌಚಾಲಯ ಬಳಕೆ ಉಚಿತವಲ್ಲ, ಜನಾಕ್ರೋಶ
ಬೆಂಗಳೂರು ಮೇ 22: ಬೆಂಗಳೂರು ನಮ್ಮ ಮೆಟ್ರೋ ಮೇಲಿಂದ ಮೇಲೆ ಪ್ರಯಾಣಿಕರಿಗೆ ಆರ್ಥಿಕ ಹೊರೆ ಹಾಕು ಮೂಲಕ ಆಕ್ರೋಶಕ್ಕೆ ಗುರಿಯಾಗುತ್ತಿದೆ. ಇತ್ತೀಚೆಗಷ್ಟೇ ಗರಿಷ್ಠ ಪ್ರಯಾಣ ಬೆಲೆಯಲ್ಲಿ 100 ರಷ್ಟು ಏರಿಕೆ ಮಾಡಿತ್ತು. ಇದೀಗ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯಕ್ಕೆ ದರ ನಿಗದಿ ಮಾಡಿದೆ. ಇನ್ನು ಮುಂದೆ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೂ ದುಡ್ಡು ನೀಡಬೇಕಿದೆ.
ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇತ್ತೀಚೆಗೆ ಟಿಕೆಟ್ ದರ ಹೆಚ್ಚಿಸಿತ್ತು. ಅದಕ್ಕೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸುವ ಬದಲು 12 ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಪ್ರಯಾಣಿಕರಿಗೆ ದರ ನಿಗದಿ ಮಾಡಿದೆ. ಈ ಸಂಬಂಧ ನಿರ್ವಹಣೆಗಾಗಿ ಸುಲಭ ಶೌಚಾಲಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅವರೇ ನಿರ್ವಹಣೆ ಮಾಡಲು ಸಿಬ್ಬಂದಿ ನೇಮಕಾತಿ ಮಾಡಿದ್ದಾರೆ. ಬಿಎಂಆರ್‌ಸಿಎಲ್ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹೆಚ್ಚಿನ ಸಂಖ್ಯೆ ಕಂಡು ಬರುವ 12 ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯಕ್ಕೆ 2-5 ರೂಪಾಯಿ ವರೆಗೆ ದರ ನಿಗದಿ ಮಾಡಲಾಗಿದೆ. ಮೂತ್ರ ವಿಸರ್ಜನೆಗೆ 02 ರೂಪಾಯಿ ಹಾಗೂ ಮಲ ವಿಸರ್ಜನೆಗೆ 05 ರೂಪಾಯಿ ಶುಲ್ಕ ಹಾಕಲಾಗಿದೆ. ಇದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸಂಬಂಧ ಜೆಡಿಎಸ್ ಸಹ ಟ್ವೀಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ ಮೇಲಿಂದ ಮೇಲೆ ಎಲ್ಲ ಅಗತ್ಯ ವಸ್ತುಗಳ ಮೇಲೆ ದರ ಹೆಚ್ಚಳ ಮಾಡುತ್ತಲೇ ಬಂದಿದೆ. ಇದೀಗ ನಮ್ಮ ಮೆಟ್ರೋ ದರ ಏರಿಕೆ ಮಾಡಿದ್ದು ಸಾಲದು ಎಂಬಂತೆ ಶೌಚಾಲಯಗಳ ಬಳಕೆ ಮೇಲೆ ಹಣ ವಿಧಿಸಿದೆ. ಈ ಮೂಲಕ ಜನರಿಗೆ ಹಣ ವಸೂಲಿಗೆ ಮುಂದಾಗಿರುವುದು ದುರ್ದೈವದ ಸಂಗತಿ. ಇಂತಹ ಆಡಳಿತಕ್ಕೆ ಜನರೇ ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಶುಲ್ಕ ವಿಧಿಸಲಾದ ಮೆಟ್ರೋ ನಿಲ್ದಾಣಗಳು ಇವು
ಶೌಚಾಲಯಗಳನ್ನು ಸುಲಭ್ ಇಂಟರ್‌ನ್ಯಾಷನಲ್‌ಗೆ ಹಸ್ತಾಂತರಿಸಲು ನಿರ್ಧರಿಸಿದ್ದು, ಹೀಗಾಗಿ ಶುಲ್ಕ ವಿಧಿಸಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನೂ ಯಾವೆಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ದರ ನಿಗದಿ ಆಗಿದೆ ಎಂದು ನೋಡುವುದಾದರೆ, ''ಲಾಲ್ ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜೆ.ಪಿ.ನಗರ, ಯಲಚೇನಹಳ್ಳಿ, ಡಾ.ಬಿ.ಆರ್.ಅಂಬೇಡ್ಕರ್ ವಿಧಾನಸೌಧ ನಿಲ್ದಾಣ, ಕಬ್ಬನ್ ಉದ್ಯಾನ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣ, ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ- ಸೆಂಟ್ರಲ್ ಕಾಲೇಜು ಸೇರಿದಂತೆ ಒಟ್ಟು 12 ಸ್ಟೇಷನ್‌ಗಳಲ್ಲಿ ಹಣ ವಿಧಿಸಲಾಗಿದೆ.
ಹಣ ವಸೂಲಿ ವೇಳೆ ಜನಾಕ್ರೋಶ
ಶೌಚಾಲಯ ಬಳಕೆಗೆ ದರ ನಿಗದಿ ಬೋರ್ಡ್ ಸಹ ಹಾಕಲಾಗಿದೆ. ಈಗಾಗಲೇ ಮಲ, ಮೂತ್ರ ವಿಸರ್ಜನಗೆ ಹಣ ವಸೂಲಿ ಮಾಡಲಾಗುತ್ತಿದೆ. ಹೀಗೆ ಹಣ ಕೀಳುವ ವೇಳೆ ಪ್ರಯಾಣಿಕರೊಂದಿಗೆ ಸಿಬ್ಬಂದಿ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಮಾತ್ರವಲ್ಲದೇ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ತೆರಿಗೆ ಹೇರಿಕೆ, ಹಣ ಹೆಚ್ಚಳ ನೀತಿ ವಿರುದ್ಧ ಕಿಡಿ ಕಾರಿದ್ದಾರೆ. BMRCL ಈ ನಡೆಯಿಂದ ಮೆಟ್ರೋ ಪ್ರಯಾಣಿಕರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ.












Click it and Unblock the Notifications