'ಇದು ಸಂಸತ್ ಚುನಾವಣೆ, ಮುನ್ಸಿಪಾಲ್ಟಿಗೆ ಅಲ್ಲ'

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ 48 ಗಂಟೆ ಬಾಕಿ ಇರುವಾಗ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಭಾಜಪ ಅಭ್ಯರ್ಥಿ ಎಚ್ ಎನ್ ಅನಂತ್ ಕುಮಾರ್ ಅವರೊಂದಿಗೆ ಮುಖಾಮುಖಿ ಆಯ್ತು. ಸೋಮವಾರ ದಿನವಿಡೀ ಕ್ಷೇತ್ರದ ಹಲವು ಕಡೆ ಪ್ರಚಾರ ಪೂರೈಸಿದ ಅನಂತ್ ನಮ್ಮ ವರದಿಗಾರರೊಂದಿಗೆ ರಾತ್ರಿ ಮಾತನಾಡಿದರು. ದಿಢೀರ್ ಮಾತುಕತೆಯಿಂದ ಆಯ್ದ ಕೆಲವು ಸಂಭಾಷಣೆಗಳು ಇಂತಿವೆ.

ಪ್ರಶ್ನೆ : ಗೈರು ಹಾಜರಾಗುವ ಎಂಪಿ ಎಂಬ ಆರೋಪ ನಿಮ್ಮ ಮೇಲಿದೆ?

ಉತ್ತರ : ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದಕ್ಕೆ ಕಾಂಗ್ರೆಸ್‌ ಕುಳಗಳು ಮಾಡುತ್ತಿರುವ ಅಪ್ಪಟ ಅಪಪ್ರಚಾರ ಇದು. ಕಳೆದ ಐದು ವರ್ಷಗಳಲ್ಲಿ 516 ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ವರ್ಷಕ್ಕೆ ಆರು ತಿಂಗಳು ಸಂಸತ್ತು ಅಧಿವೇಶನವಿರುತ್ತದೆ. ಉಳಿದ ಆರು ತಿಂಗಳು, ಅಂದರೆ 258 ದಿನ.. ಹೌದಾ?. ನೀವೇ ಲೆಕ್ಕ ಹಾಕಿ. ಒಬ್ಬ ಸಂಸದನಾಗಿ ನಾನು ಏನೇನು ಕೆಲಸ ಮಾಡಿದ್ದೇನೆ ಎನ್ನುವ ವಿವರ ಕಾಣುವುದಕ್ಕೆ ನನ್ನ ವೆಬ್ ಸೈಟಿಗೆ ಲಾಗಿನ್‌ ಆಗಿ. ಜೊತೆಗೆ ನನ್ನ ಫೇಸ್ ಬುಕ್ ಪುಟ ನೋಡಿ.

Parliament elections are not municipality elections : BJP Ananth Kumar interview

ಪ್ರಶ್ನೆ : ನೀವು ಗೈರು ಹಾಜರು ಅಸಾಮಿ ಎಂಬ ವಿಷಯ ನಮಗೆ ನಂದನ್‌ ನಿಲೇಕಣಿ ಅವರಿಂದ ತಿಳಿದು ಬಂತು.

ಉತ್ತರ : ನಂದನ್‌ ಅವರು ಮಾಡುತ್ತಿರುವುದು ಕ್ಷುಲ್ಲಕ ಅಪಪ್ರಚಾರ. ಕಾಂಗ್ರೆಸ್‌ ಈ ದೇಶಕ್ಕೆ ಮಾಡಿದ ಅಪಚಾರ, ಅನಾಚಾರ, ಭ್ರಷ್ಟಾಚಾರದ ಬ್ಯಾಗೇಜ್‌ ಅವರ ಹೆಗಲ ಮೇಲಿದೆ. ಯುಪಿಎ ಸರಕಾರ ಎಸಗಿದ ಬ್ರಹಾಂಡ ಭ್ರಷ್ಟಾಚಾರದಿಂದ ಭಾರತ ನಲುಗಿದೆ. ಹಾಗಿದ್ದೂ, ಭಾರತ ದೇಶವಾಸಿಗಳು ಅನುಭವಿಸಿದ, ಅನುಭವಿಸುತ್ತಿರುವ ನೋವುಗಳ ನಡುವೆಯೂ ಅವರು ಈ ರೀತಿ ಮಾತನಾಡುತ್ತಿರುವುದನ್ನು ನೋಡಿದರೆ ಖೇದವಾಗುತ್ತದೆ. [ಅಭಿವೃದ್ಧಿ ಮಂತ್ರ ಜಪಿಸುವ ಕನಸುಗಾರ]

ಪ್ರಶ್ನೆ : ಈ ಬಾರಿಯ ಚುನಾವಣೆಯ ಮುಂಚಿನ ಥರ ಇಲ್ಲ! ಸ್ವಲ್ಪ ಡಿಫರೆಂಟ್ ಆಗಿದೆ!

ಉತ್ತರ : ಕಳೆದ 40 ವರ್ಷಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ವಿರೋಧಿ ನಿಲುವಿನ ಭದ್ರ ಕೋಟೆ. ಎರಡು ವರ್ಷ ಆರ್‌. ಗುಂಡೂರಾವ್‌ ಇಲ್ಲಿಂದ ಸಂಸತ್‌ ಸದಸ್ಯರಾಗಿದ್ದನ್ನು ಬಿಟ್ಟರೆ, ಕಾಂಗ್ರೆಸ್‌ಗೆ ಈ ಕ್ಷೇತ್ರದಲ್ಲಿ ಜನ ಮಣೆ ಹಾಕಿದ ಉದಾಹರಣೆ ತೀರ ಅತ್ಯಲ್ಪ.

ಪ್ರಶ್ನೆ : ಬೆಂಗಳೂರು ದಕ್ಷಿಣವನ್ನು ನಂದನವನ ಮಾಡುವ ಭರವಸೆಯನ್ನು ನಂದನ್‌ ನಿಲೇಕಣಿ ಕೊಟ್ಟಿದ್ದಾರೆ?

ಉತ್ತರ : ಅಯ್ಯೋ, ಇದೇನು ಮುನ್ಸಿಪಾಲಿಟಿ ಎಲೆಕ್ಷನ್ನಾ? ನೇಷನ್‌ ಫಸ್ಟ್‌ ಎನ್ನುತ್ತೇವೆ. ಭಾರತ ಮುಖ್ಯವೋ ಲೋಕಲ್‌ ಸಮಸ್ಯೆಗಳು ಮುಖ್ಯವೋ? ನಿರ್ಧರಿಸಬೇಕಾದ ಸಮಯ ಬಂದಿದೆ. ವಿವೇಚನಾಶೀಲ ಮತದಾರರು ಪರಿಶೀಲಿಸಿ ನೋಡಬೇಕು.

ಪ್ರಶ್ನೆ : "ಉತ್ತಮ ಬೆಂಗಳೂರು" ಮಾಡುವುದಾಗಿ ನಂದನ್‌ ಹೇಳುತ್ತಿದ್ದಾರೆ?

ಉತ್ತರ : ಬೆಂಗಳೂರು ದಕ್ಷಿಣ ಬೆಂಗಳೂರು ಅಲ್ಲ. ಸಮಗ್ರ ಬೆಂಗಳೂರಿನ ಕಲ್ಪನೆ ಇರಬೇಕಾದುದು ಬೆಂಗಳೂರಿನ ಸಂಸತ್‌ ಸದಸ್ಯನ ಧ್ಯೇಯ ವಾಕ್ಯವಾಗಬೇಕು. ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರದ ಒಳಚರಂಡಿಗಳು ಮೇಲ್ಸೇತುವೆಗಳು, ಕೆಳ ಸೇತುವೆಗಳು, ಲಿಂಕ್‌ ರಸ್ತೆಗಳ ನರ ನಾಡಿಗಳು ಬೃಹತ್‌ ಬೆಂಗಳೂರನ್ನು ವ್ಯಾಪಿಸಿದೆ. ಬೆಂಗಳೂರು ದಕ್ಷಿಣದ ಸಂಸತ್‌ ಸದಸ್ಯನಾಗಿ "ನನ್ನ ಕ್ಷೇತ್ರಕ್ಕೆ ಮಾತ್ರ" ಕನಸುಗಳನ್ನು ಹೆಣೆಯುವುದು ಬೃಹತ್‌ ಬೆಂಗಳೂರಿಗೆ ಮಾಡುವ ದ್ರೋಹ. ಬೆಂಗಳೂರು ನನ್ನದು, ಬೆಂಗಳೂರಿನ ಎಲ್ಲಾ ಸಮಸ್ಯೆಗಳು ನನ್ನವು.

ಪ್ರಶ್ನೆ : ಬೆಂಗಳೂರಿನ ನಾಗರಿಕ ಸಮಸ್ಯೆಗಳಿಗೆ ಕ್ಯಾರೇ ಎನ್ನುವುದಿಲ್ಲ ಎನ್ನುವ ಆರೋಪ ನಿಮ್ಮ ಮೇಲಿದೆ.

ಉತ್ತರ : ಸಮಸ್ಯೆಗಳ ನಿವಾರಣೆಗೆ ಲೋಕಲ್‌ ಹಾಗೂ ಮತ್ತು ನ್ಯಾಷನಲ್‌ ಪರಿಹಾರಗಳಿವೆ. ನಾನು ಆಗಲೇ ಹೇಳಿದಂತೆ ಸ್ಥಳೀಯ ಸಮಸ್ಯೆಗಳು ಕೇವಲ ಸ್ಥಳೀಯ ಸಮಸ್ಯೆಗಳಲ್ಲ. ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಸ್ಥಳೀಯ ಪ್ರಜ್ಞೆ ಮತ್ತು ರಾಷ್ಟ್ರೀಯ ಚಿಂತನೆ ಅಗತ್ಯ ಎನ್ನುವುದು ಈ ಲೋಕಲ್‌ ಕ್ಯಾಂಡಿಡೇಟ್‌ಗಳಿಗೆ ಯಾಕೆ ಅರ್ಥವಾಗುವುದಿಲ್ಲ?

ಪ್ರಶ್ನೆ : ಈ ಸಲದ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಯಾರ್ ಬೇಕಾದ್ರೂ ಗೆಲ್ಲಬಹುದು!

ಉತ್ತರ : ಎಲ್ಲಾ ಚುನಾವಣೆಗಳು ಹಾಗೇ ಇರುತ್ತವೆ. ಐದು ಚುನಾವಣೆಗಳಲ್ಲಿ ಜನಮನ ಗೆದ್ದ ನನಗೆ ಆರನೇ ಚುನಾವಣೆ ಎದುರಿಸುವ ಆತ್ಮವಿಶ್ವಾಸವಿದೆ.

ಪ್ರಶ್ನೆ : ನಿಮ್ಮ ಸಾಧನೆಗಳ ಆಧಾರದ ಮೇಲೆ ಮತ ಕೇಳುತ್ತಿದ್ದಿರೋ? ನರೇಂದ್ರ ಮೋದಿ ಪ್ರಭಾವಳಿಯಲ್ಲಿ ಮತ ಕೇಳುತ್ತಿದ್ದಿರೋ?

ಉತ್ತರ : ನನ್ನ ಸಾಧನೆ ಏನು ಎನ್ನುವುದು ಮತದಾರರಿಗೆ ಗೊತ್ತಿದೆ. ನರೇಂದ್ರ ಮೋದಿಯ ಅವಶ್ಯಕತೆ ಭಾರತಕ್ಕೆ ಇವತ್ತು ಎಷ್ಟಿದೆ ಎನ್ನುವುದು ಇಡೀ ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರಿಗೂ ಗೊತ್ತಿದೆ. ಇದನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಮೋದಿಯನ್ನು ಪ್ರಧಾನಮಂತ್ರಿ ಮಾಡುವ ದಿಶೆಯಲ್ಲಿ ನನ್ನ ಸೀಟೂ ಮುಖ್ಯ!

ಪ್ರಶ್ನೆ : ಆಮ್‌ಅದ್ಮಿ ಪಕ್ಷದ ನೀನಾ ನಾಯಕ್, ಜೆಡಿಎಸ್‌ ಅಭ್ಯರ್ಥಿ ರೂತ್ ಮನೋರಮಾ ಸವಾಲಿಗೆ ನಿಮ್ಮ ಜವಾಬು?

ಉತ್ತರ : ಅವರಿಬ್ಬರ ಸ್ಫರ್ಧೆ ನಗಣ್ಯ. ನೇರ ಸ್ಪರ್ಧೆ ಇರುವುದು ನನ್ನ ಮತ್ತು ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ನಡುವೆ. ಬೆಂಗಳೂರನ್ನೂ ಒಳಗೊಂಡು ಭಾರತದ ಬಗ್ಗೆ ಕಳಕಳಿ, ಆತಂಕ ಇಟ್ಟುಕೊಂಡಿರುವ ಎಲ್ಲಾ ಮತದಾರರಲ್ಲಿ ನನ್ನ ಮನವಿ ಇಷ್ಟೇ : ಬೆಂಗಳೂರು ದಕ್ಷಿಣ 543ರಲ್ಲಿ ಒಂದು ಕ್ಷೇತ್ರ ಮಾತ್ರ. ಸಮಗ್ರ ಭಾರತ ಎಂದರೆ ಸಮಗ್ರ ಭಾರತದ ಅಭಿವೃದ್ಧಿ. ನನ್ನನ್ನು ಗೆಲ್ಲಿಸುವುದರ ಮೂಲಕ ಬಿಜೆಪಿಯನ್ನು ಗೆಲ್ಲಿಸಿ. ಬಿಜೆಪಿಯನ್ನು ಗೆಲ್ಲಿಸುವುದರ ಮೂಲಕ ಭಾರತ ಗೆಲ್ಲಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+