ಗುತ್ತಿಗೆ ಪೌರ ಕಾರ್ಮಿಕರ ವೇತನ ನೇರವಾಗಿ ಬ್ಯಾಂಕ್ ಖಾತೆಗೆ!
ಬೆಂಗಳೂರು, ಡಿಸೆಂಬರ್ 29 : ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ವೇತನವು ಜನವರಿ 1 ರಿಂದ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲು ಬಿಬಿಎಂಪಿ ಆದೇಶ ಹೊರಡಿಸಿದೆ.
ಪೌರ ಕಾರ್ಮಿಕರಿಗೆ ಕನಿಷ್ಠ ವೇತನ ವನ್ನು ಜನವರಿಯಿಂದ ಆಯಾ ತಿಂಗಳ 7 ರ ಒಳಗೆ ಬ್ಯಾಂಕ್ ಮೂಲಕ ಪಾವತಿಸಬೇಕು. ಅದರ ಜತೆಗೆ ಶೂಗಳು, ಕೈಗವಸು, ಎರಡು ಜತೆ ಸಮವಸ್ತ್ರ, ನೀರು ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಬೇಕು. ಭವಿಷ್ಯ ನಿಧಿ, ಇಎಸ್ ಐ ಸೌಲಭ್ಯ ಕಲ್ಪಿಸಬೇಕು.

ಪೌರಕಾರ್ಮಿಕರಿಗೆ ಸಂಬಂಧಿಸಿದ ಆಧಾರ್ ಸಂಖ್ಯೆ, ಸೇವೆ ವಿವರಗಳ ನಿಖರ ಮಾಹಿತಿಯನ್ನು ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತ ಎಸ್. ಮಂಜುನಾಥ್ ಪ್ರಸಾದ್, ಮುಖ್ಯ ಎಂಜಿನಿಯರ್, ವಲಯಗಳ ಜಂಟಿ ಆಯುಕ್ತರು, ಸಹಾಯಕ ಕಾರ್ಯಪಾಲಕರ ಎಂಜಿನಿಯರ್ ಗಳಿಗೆ ಸೂಚಿಸಿದ್ದಾರೆ.
ಪ್ರಸ್ತುತ 700 ಜನರಿಗೆ ಒಬ್ಬರು ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಕಾರ್ಮಿಕರ ಅಗತ್ಯವಿದ್ದರೆ ವಲಯ ಆಯುಕ್ತರ ಮೂಲಕ ಪಾಲಿಕೆಯ ಗಮನಕ್ಕೆ ತರಬಹುದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈಗಿರುವ ಪೌರಕಾರ್ಮಿಕರ ಬದಲಿಗೆ ಬೇರೆ ವ್ಯಕ್ತಿಗಳ ಕೆಲಸಕ್ಕೆ ತೆಗೆದುಕೊಳ್ಳುವ ಅಧಿಕಾರಿಗಳು, ಸಿಬ್ಬಂದಿ ಮತ್ತು ಬೇನಾಮಿ ಪೌರ ಕಾರ್ಮಿಕರ ವಿರುದ್ಧ ಏಪ್ ಐ ಆರ್ ದಾಖಲಿಸಲಾಗುತ್ತದೆ. ಗೈರು ಹಾಜರಾಗುವ ಕೆಲಸ ಮಾಡದಿರುವ ಪೌರಕಾರ್ಮಿಕರಿಗೆ ವೇತನ ರಹಿತ ರಜೆ, ಕೆಲಸದಿಂದ ವಜಾಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.












Click it and Unblock the Notifications