Operation Hasta: ಬಿಬಿಎಂಪಿ ಕಾರ್ಪೊರೇಟರ್‌ಗಳಿಗೆ ಕಾಂಗ್ರೆಸ್ ಗಾಳ- ಬೆಂಗಳೂರಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಡಿಕೆಶಿ ತಂತ್ರ
ಬೆಂಗಳೂರು, ಆಗಸ್ಟ್ 25: 2019 ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ ಬೆಂಗಳೂರಿನ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರಲು 'ಕೈ' ಪಾಳಯ ಯತ್ನ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಬಿಬಿಎಂಪಿಯ ಬಿಜೆಪಿ ಕಾರ್ಪೋರೇಟ್‌ರ್‌ಗಳಿಗೆ ಗಾಳ ಹಾಕಲು ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಬೆಂಗಳೂರಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಆಡಳಿತಾರೂಢ ಪಕ್ಷವು ತಂತ್ರ ರೂಪಿಸಿದೆ.
ಶಾಸಕ ಬೈರತಿ ಬಸವರಾಜ್ ಆಪ್ತರಾಗಿರುವ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳು ಕಾಂಗ್ರೆಸ್‌ನ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾರೆ. ಕಾರ್ಪೋರೇಟರ್‌ಗಳಾದ ಬಂಡೆ ರಾಜು ಮತ್ತು ಪದ್ಮಾವತಿ ಶ್ರೀನಿವಾಸ್ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಈ ವಿಚಾರವನ್ನು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ದೃಢಪಡಿಸಿರುವ ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಿಕೆ ಮೋಹನ್, 'ವಿಜಿನಾಪುರ ವಾರ್ಡ್‌ನ ಬಂಡೆರಾಜು, ರಾಮಮೂರ್ತಿ ವಾರ್ಡ್‌ನಿಂದ ಪದ್ಮಾವತಿ ಶ್ರೀನಿವಾಸ್ ಮತ್ತು ಕೆಆರ್ ಪುರಂನ ವೀರಣ್ಣ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕಾರ್ಪೋರೇಟರ್‌ಗಳು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ' ಎಂದು ಹೇಳಿದ್ದಾರೆ.
ಈ ವಿಚಾರವನ್ನು ಸ್ವತಃ ಬಂಡೆ ರಾಜು ಸಹ ಖಚಿತಪಡಿಸಿದ್ದಾರೆ. 'ನಾನು ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿದ್ದೆ. ಆದರೆ ಬೈರತಿ ಬಸವರಾಜ್ ಬಿಜೆಪಿ ಸೇರಿದ ನಂತರ ನನ್ನನ್ನು ಕಡೆಗಣಿಸಲಾಗುತ್ತಿದೆ. ನಾನು ನನ್ನ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದೇನೆ. ನಾನು ಕಾಂಗ್ರೆಸ್ ಸೇರಬೇಕೆಂದು ಅವರು ಬಯಸುತ್ತಾರೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇತರ ನಾಯಕರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್‌ಗಾಗಿ ಸೇವೆ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದೇನೆ' ಎಂದು ರಾಜು ತಿಳಿಸಿದ್ದಾರೆ.
ಬಸವನಪುರ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಮತ್ತು ಬೈರತಿ ಬಸವರಾಜ್ ಅವರ ಆಪ್ತರಾಗಿರುವ ಬಿಎನ್ ಜಯಪ್ರಕಾಶ್ ಅವರನ್ನೂ ಸಂಪರ್ಕಿಸಲಾಗಿದ್ದು, ಮಾತುಕತೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೇ ಕೆಆರ್ ಪುರಂನ ಮಾಜಿ ಶಾಸಕ ನಂದೀಶ್ ರೆಡ್ಡಿ ಜತೆಗಿನ ಹಲವು ಮುಖಂಡರು ಕೂಡ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ.
'ಕೆಆರ್ ಪುರಂ, ಯಶವಂತಪುರ ಮತ್ತು ಆರ್‌ಆರ್‌ನಗರದಲ್ಲಿ ಹಲವು ಬಿಬಿಎಂಪಿ ವಾರ್ಡ್‌ಗಳಿವೆ. ಅಲ್ಲಿ ಗೆಲ್ಲಬಹುದಾದ ನಾಯಕರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ತಂತ್ರ ಮಾಡಿದೆ. ಅಲ್ಲದೆ, ಬಿಜೆಪಿ ಸೇರಿದ ಹಲವು ಕಾರ್ಪೊರೇಟರ್‌ಗಳು ಈ ಬಾರಿ ಮತ ಸೆಳೆಯಲು ಸಫಲರಾಗುವ ಸಾಧ್ಯತೆಗಳು ಕಡಿಮೆ ಇವೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications