ಬೆಂಗಳೂರಿನ ಹಲಸೂರು ಕೆರೆ ಕಲ್ಯಾಣಿಯಲ್ಲಿ ಈ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶ: ಬಿಬಿಎಂಪಿ
ಬೆಂಗಳೂರಿನಲ್ಲಿ ಗೌರಿ - ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಎ) ಕೆಲವೊಂದು ಪ್ರಮುಖ ಹಾಗೂ ಮಹತ್ವದ ಸೂಚನೆಗಳನ್ನು ನೀಡಿದೆ. ಬೆಂಗಳೂರಿನ ಹಲಸೂರು ಕೆರೆ ಕಲ್ಯಾಣಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶ ಇರಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ.
ಪೂರ್ವ ವಲಯ ವ್ಯಾಪ್ತಿಯಲ್ಲಿ ಗೌರಿ - ಗಣೇಶ ಹಬ್ಬದ ಪ್ರಯುಕ್ತ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಓಪಿ), ಥರ್ಮಾಕೋಲ್ ಹಾಗೂ ರಾಸಾಯನಿಕ ಬಣ್ಣಗಳನ್ನು ಬಳಸಿದ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ವಿಸರ್ಜನೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ವಲಯ ಆಯುಕ್ತರು (ಪೂರ್ವ) ಸ್ನೇಹಲ್ ಅವರು ತಿಳಿಸಿದ್ದಾರೆ.

ಹಲಸೂರು ಕೆರೆಯ ಕಲ್ಯಾಣಿಯಲ್ಲಿ 27-08-2025 ರಿಂದ 30-09-2025 ರವರೆಗೆ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಮುಂದುವರಿದಂತೆ, ಈ ಕೆಳಕಂಡ ದಿನಾಂಕಗಳಲ್ಲಿ ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಹೂಳೆತ್ತುವ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ, ದಿನಾಂಕ 01-09-2025, 02-09-2025, 08-09-2025 ಹಾಗೂ 09-09-2025 ರಂದು ಯಾವುದೇ ರೀತಿಯ ಮೂರ್ತಿ ವಿಸರ್ಜನೆಗೆ ಅವಕಾಶ ಇರುವುದಿಲ್ಲ.
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮತ್ತು ನೀರಿನ ಮೂಲಗಳ ಶುದ್ಧತೆಯನ್ನು ಕಾಯ್ದುಕೊಳ್ಳಲು ಸಾರ್ವಜನಿಕರಿಂದ ಸಹಕಾರವನ್ನು ಕೋರಲಾಗಿದೆ. ಎಲ್ಲರೂ ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸಿ ಹಬ್ಬವನ್ನು ಸಂಭ್ರಮದಿಂದ ಮತ್ತು ಜವಾಬ್ದಾರಿಯಿಂದ ಆಚರಿಸಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.

ಶಾಲಾ - ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ
ಬೆಂಗಳೂರಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ತಯಾರಿಕೆ ಕಲಿಕಾ ಕಾರ್ಯಕ್ರಮವನ್ನು ರಾಜರಾಜೇಶ್ವರಿನಗರ ವಲಯ ಆಯುಕ್ತರಾದ ಡಾ. ಸತೀಶ್ ಬಿ.ಸಿ. ಅವರು ಹಾಗೂ ವಲಯ ಜಂಟಿ ಆಯುಕ್ತರಾದ ಆರತಿ ಆನಂದ್ ಉದ್ಘಾಟನೆ ಮಾಡಿದರು.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಹೇರೋಹಳ್ಳಿಯ ಬಿಬಿಎಂಪಿ ಪ್ರೌಢಶಾಲೆ ಮತ್ತು ಪಿಯು ಕಾಲೇಜ್ ಹಾಗೂ ಲಗ್ಗೆರೆಯ ಬಿಬಿಎಂಪಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಿಸುವ ಸಲುವಾಗಿ ಕಲಿಕಾ ಕಾರ್ಯಕ್ರಮವನ್ನು ಬಿಬಿಎಂಪಿ ವತಿಯಿಂದ ಆಯೋಜಿಸಲಾಯಿತು ಎಂದು ವಲಯ ಆಯುಕ್ತರು ತಿಳಿಸಿದ್ದಾರೆ.
ಗಣೇಶ ಮೂರ್ತಿಗಳನ್ನು ತಯಾರಿಸುವಾಗ ಪಿಒಪಿ ಹಾಗೂ ಹಾನಿಕಾರಕ ರಾಸಾಯನಿಕಗಳು, ಬಣ್ಣಗಳನ್ನು ಬಳಸುವುದರಿಂದ ಮೂರ್ತಿಗಳನ್ನು ವಿಸರ್ಜಿಸಿದಾಗ ನೀರಿನಲ್ಲಿ ಕರಗದೆ ಪರಿಸರಕ್ಕೆ ಹಾನಿಯಾಗುತ್ತಿದ್ದು, ಮಣ್ಣಿನ ಗಣೇಶ ಮೂರ್ತಿ ರಚಿಸಿ ಗಣೇಶ ಹಬ್ಬವನ್ನು ಪರಿಸರಕ್ಕೆ ಹಾನಿಯಾಗದಂತೆ ಅರ್ಥಪೂರ್ಣ ರೀತಿಯಲ್ಲಿ ಆಚರಿಸುವುದರಿಂದ ಕೆರೆ ಕೊಳಗಳು ಇನ್ನಿತರೆ ಜಲ ಮೂಲಗಳು ಕಲುಷಿತವಾಗಲ್ಲ ಹಾಗೂ ಜಲಚರಗಳಿಗೆ ಹಾನಿಯಾಗುವುದಿಲ್ಲ ಪರಿಸರ ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದು ವಿದ್ಯಾರ್ಥಿಗಳಿಗೆ ಬಿಬಿಎಂಪಿ ಜಾಗೃತಿ ಮೂಡಿಸಿದೆ.
ಮಣ್ಣಿನ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸುವುದನ್ನು ಕಲಿತುಕೊಂಡ ಮಕ್ಕಳು ತಮ್ಮ ಮನೆಗಳಲ್ಲಿ ಹಾಗೂ ಅಕ್ಕಪಕ್ಕದ ಮನೆಗಳಲ್ಲೂ ಮಣ್ಣಿನ ಗಣೇಶ ಮೂರ್ತಿಯನ್ನು ಹಬ್ಬದಲ್ಲಿ ಕೂರಿಸುವ ಮೂಲಕ ಕೃತಕ ರಾಸಾಯನಿಕಗಳಿಂದ ತಯಾರಿಸಿದ ಮೂರ್ತಿಯಿಂದ ಪರಿಸರ ಹಾಳಾಗದಂತೆ ಕಾಪಾಡುವ ಮೂಲಕ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ವಿದ್ಯಾರ್ಥಿಗಳಿಗೆ ವಲಯ ಜಂಟಿ ಆಯುಕ್ತರು ಹೇಳಿದ್ದಾರೆ.












Click it and Unblock the Notifications