ಮತ್ತೊಮ್ಮೆ ಏರಿದ ಈರುಳ್ಳಿ ಬೆಲೆ, ಜನರ ಕಣ್ಣೀರು
ಬೆಂಗಳೂರು, ಅ,22 : ಜನರ ಕಣ್ಣಲ್ಲಿ ನೀರು ಹಾಕಿಸಲು ಈರುಳ್ಳಿ ಮತ್ತೊಮ್ಮೆ ಸಜ್ಜಾಗಿ ನಿಂತಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ 70 ರೂ.ಗಡಿದಾಟಿದೆ. ದೀಪಾವಳಿ ವೇಳೆಗೆ ಕೆಜಿ ಈರುಳ್ಳಿ ಬೆಲೆ ನೂರು ರೂ.ಗಳಾಗಲಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ಈರುಳ್ಳಿ ಹೆಚ್ಚಾಗಿ ಬೆಳೆಯುವ ಆಂಧ್ರಪ್ರದೇಶ, ಮಹಾರಾಷ್ಟ್ರ,ಉತ್ತರ ಪ್ರದೇಶ ಮತ್ತು ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಆದ್ದರಿಂದ ನವದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳ ಮಾರುಕಟ್ಟೆಗಳಿಗೆ ಈರುಳ್ಳಿ ಸರಬರಾಜು ಕಡಿಮೆಯಾಗಿ, ಬೆಲೆ ಏರಿಕೆಯಾಗಿದೆ.

ದೆಹಲಿ, ಮುಂಬೈ, ಕೋಲ್ಕತ್ತಾ ಮುಂತಾದ ನಗರಗಳಲ್ಲಿ ಈರುಳ್ಳಿ ಬೆಲೆ 80 ರೂ. ಆಗಿದೆ. ಬೆಂಗಳೂರಿನಲ್ಲಿ ಮಂಗಳವಾರ ಈರುಳ್ಳಿ ಬೆಲೆ 70 ರೂ. ಗಡಿದಾಟಿದೆ. ಕರ್ನಾಟಕದ ಚಿತ್ರದುರ್ಗ ಸೇರಿದಂತೆ ಇತರ ಜಿಲ್ಲೆಗಳಿಂದ ಬೆಂಗಳೂರಿಗೆ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಆಗಮಿಸುತ್ತಿಲ್ಲ.
ರಾಜಸ್ಥಾನದ ಆಳ್ವಾರ್, ಮಧ್ಯಪ್ರದೇಶದ ಇಂದೋರ್, ವಾರಣಾಸಿ, ಔರಂಗಾಬಾದ್ ಮುಂತಾದ ಪ್ರದೇಶಗಳಿಂದ ಈರುಳ್ಳಿ ರಫ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ದೇಶದ ಪ್ರಮಖ ನಗರಗಳ ಮಾರುಕಟ್ಟೆಗೆ ಈರುಳ್ಳಿ ಆಗಮಿಸುತ್ತಿಲ್ಲ.
ಮುಂದಿನ ವಾರ ಮತ್ತು ದೀಪಾವಳಿ ವೇಳೆಗೆ ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಈರುಳ್ಳಿ ಬೆಲೆ ಸಾವಿರ ರೂ.ಗಳಾಗಿದ್ದು, ಸದ್ಯ ಬೆಲೆ ಇಳಿಯುವ ಸಾಧ್ಯತೆ ಇಲ್ಲ ಎಂದು ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ತಿಳಿಸಿದೆ.
ದೀಪಾವಳಿ ವೇಳೆಗೆ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿ ದರ ಮತ್ತಷ್ಟು ಹೆಚ್ಚಾಗಬಹುದೆಂದು ವ್ಯಾಪಾರಸ್ಥರು ಹೇಳಿದ್ದಾರೆ. ಈ ಪರಿಣಾಮ ಬೆಂಗಳೂರಿಗೆ ತಟ್ಟಲಿದ್ದು, ನಗರದಲ್ಲೂ ಈರುಳ್ಳಿ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಇದೆ.
ಎರಡು ತಿಂಗಳ ಹಿಂದೆ ಈರುಳ್ಳಿ ಬೆಲೆ ನೂರು ರೂ.ಗಡಿದಾಟಿ ಜನರ ಜೇಬಿಗೆ ಕತ್ತರಿ ಹಾಕಿತ್ತು. ಹೋಟೆಲ್ ಗಳಲ್ಲಿ ಸಹ ಈರುಳ್ಳಿ ಹಾಕಿ ಮಾಡುವ ತಿಂಡಿಗಳು ಮೆನುವಿನಿಂದಲೇ ಕಾಣೆಯಾಗಿದ್ದವು. ನಮೆಂಬರ್ ತಿಂಗಳಿನಲ್ಲಿ ಇಂತಹ ಪರಿಸ್ಥಿತಿ ಮತ್ತೆ ಉದ್ಭವವಾದರೂ ಅಚ್ಚರಿಯಿಲ್ಲ. (ಈರುಳ್ಳಿ ಬೆಲೆ ಎಷ್ಟಾದರೂ ಆ ಗ್ರಾಮಸ್ಥರಿಗೆ ಕಣ್ಣೀರು ಬರಲ್ಲ)












Click it and Unblock the Notifications