ಬೆಂಗಳೂರು : ಒಂದು ತಿಂಗಳ ಹಸುಗೂಸು ಉಸಿರುಗಟ್ಟಿಸಿ ಕೊಲೆ
ಬೆಂಗಳೂರು, ಡಿಸೆಂಬರ್ 23 : ಅಪಹರಣವಾಗಿದ್ದ ಒಂದು ತಿಂಗಳ ಮಗು ಒಂದೇ ಗಂಟೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿವೇಕ ನಗರ ನಿವಾಸಿ ಕಾರ್ತಿಕ್ ಎಂಬುವವರ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಕೊಲೆ ಮಾಡಲಾಗಿದೆ. ಮಗುವನ್ನು ಉಸಿರುಗಟ್ಟಿಸಿ ಕೊಂದ ಹಂತಕರು, ಟವೆಲ್‌ನಲ್ಲಿ ಸುತ್ತಿ ಮಂಚದ ಕೆಳಗೆ ಎಸೆದಿದ್ದರು. ಶುಕ್ರವಾರ ಈ ಘಟನೆ ನಡೆದಿದೆ.
ಘಟನೆ ವಿವರ : ಒಂದು ತಿಂಗಳ ಹಿಂದೆ ಕಾರ್ತಿಕ್ ದಂಪತಿಗೆ ಅವಳಿ ಮಕ್ಕಳು ಜನಿಸಿದ್ದವು. ಡಿಸೆಂಬರ್ 21ರಂದು ಒಂದು ಮಗುವಿಗೆ ಜ್ವರ ಬಂದಿತ್ತು. ಮಗುವನ್ನು ಹಾಲ್‌ನಲ್ಲಿ ಬೆಡ್ ಮೇಲೆ ಮಲಗಿಸಿ ಔಷಧ ತರಲು ಕಾರ್ತಿಕ್ ಹೊರಗೆ ಹೋಗಿದ್ದರು.

ಮತ್ತೊಂದು ಮಗು ಅಳುತ್ತಿದ್ದರಿಂದ ರೂಂ ನಲ್ಲಿ ತಾಯಿ ಅದಕ್ಕೆ ಹಾಲು ಕುಡಿಸುತ್ತಿದ್ದರು. ಕಾರ್ತಿಕ್ ವಾಪಸ್ ಬಂದ ಬಳಿಕ ನೋಡಿದರೆ ಮಗು ನಾಪತ್ತೆಯಾಗಿತ್ತು. ಎಲ್ಲೂ ಮಗು ಸಿಗದಿದ್ದಾಗ ದಂಪತಿಗಳು ಅಶೋಕ ನಗರ ಪೊಲೀಸರಿಗೆ ದೂರು ನೀಡಿದರು.
ಅಪಹರಣ ಪ್ರಕರಣದ ದಾಖಲು ಮಾಡಿಕೊಂಡ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಏರಿಯಾದಲ್ಲಿ ಎಲ್ಲಿ ಹುಡುಕಿದರೂ ಮಗು ಸಿಕ್ಕಿರಲಿಲ್ಲ. ಪೊಲೀಸರು ವಾಪಸ್ ಕಾರ್ತಿಕ್ ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಮಂಚದ ಕೆಳಗೆ ಮಗು ಶವ ಸಿಕ್ಕಿದೆ.
ಸಹೋದರ ಮತ್ತು ತಂದೆಯಿಂದ ದೂರವಾಗಿದ್ದ ಕಾರ್ತಿಕ್ ಪತ್ನಿ ಜೊತೆ ವಾಸವಾಗಿದ್ದರು. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಗುವನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಶೋಕ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಚಿಕ್ಕಪ್ಪ ಅರವಿಂದ್, ತಾತ ಚಿತ್ತರಾಜುವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.











Click it and Unblock the Notifications