Bengaluru Road: ಬಿಬಿಎಂಪಿ ₹11.5 ಕೋಟಿ ರಸ್ತೆ ಯೋಜನೆ: ಅಧಿಕಾರಿಯಿಂದಲೇ ಆಕ್ಷೇಪ ಪತ್ರ
ಬೆಂಗಳೂರು, ಮಾರ್ಚ್ 04: ಬೆಂಗಳೂರಿನಲ್ಲಿ ಕೆಲವೇ ವರ್ಷಗಳ ಹಿಂದೆ ಕೋಟಿ ಕೋಟಿ ರೂಪಾಯಿ ಹಣ ಸುರಿದು ಅಭಿವೃದ್ಧಿಗೊಳಿಸಿದ ರಸ್ತೆಗಳನ್ನು ಮತ್ತೆ ಟೆಂಡರ್‌ಶ್ಯೂರ್ ಅಡಿಯಲ್ಲಿ ಪುನರ್ ನವೀಕರಣ ಮಾಡಲು ಯೋಜಿಸಲಾಗಿದೆ. ಈ ನಿರ್ಧಾರಕ್ಕೆ ಸಾರ್ವಜನಿಕರಾಗಲಿ, ವಿಪಕ್ಷ ನಾಯಕರು, ಕಾರ್ಪೋರೇಟರ್‌ಗಳು ಆಕ್ಷೇಪ ವ್ಯಕ್ತಪಡಿಸಿಲ್ಲ. ಬದಲಾಗಿ ಬಿಬಿಎಂಪಿ ಅಧಿಕಾರಿಯೇ ವಾಸ್ತವ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇದೇ ಹಣದಲ್ಲಿ ರಸ್ತೆ ಸಮಸ್ಯೆ, ವಾಟರ್‌ಲಾಗಿಂಗ್, ರಸ್ತೆ ಗುಂಡಿ ಪರಿಹಾರಗಳಿಗೆ ಬಗೆಹರಿಸಬಹುದು ಎಂದಿದ್ದಾರೆ. ಇದು ಪಾಲಿಕೆಯಲ್ಲಿ ಭಿನ್ನ ನಿಲುವು ತಿಳಿಸುತ್ತದೆ.
ಬಿಬಿಎಂಪಿಯು ಟೆಂಡರ್ ಶ್ಯೂರ್ ಗಾಗಿ 11.50 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ವರ್ಷಗಳವರೆಗೆ ರಸ್ತೆ ನಿರ್ವಹಣೆಗೆ ನೀಡಲು ಯೋಜಿಸಿದೆ. ಆದರೆ ಇಷ್ಟು ಹಣ ಅಭಿವೃದ್ಧಿಗೊಂಡ ರಸ್ತೆಗಳಲ್ಲಿ ಕೇವಲ 40ರಷ್ಟು ರಸ್ತೆಗಳ ನಿರ್ವಹಣೆಗೆ ಮಾತ್ರವೇ ಸಾಕಾಗುತ್ತದೆ ಎಂದು ಮುಖ್ಯ ಇಂಜಿನಿಯರ್ ಲೋಕೇಶ್ ಅವರು ತಾವು ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು 'ಡಿಎಚ್' ವರದಿ ಮಾಡಿದೆ.

ರಸ್ತೆ ಅಭಿವೃದ್ಧಿ ಯೋಜನೆಗೆ ನವೆಂಬರ್‌ನಲ್ಲಿ ಒಪ್ಪಿಗೆ
ಬಿಬಿಎಂಪಿಯ 694 ಕೋಟಿ ರೂ. ಅಂದಾಜು ವೆಚ್ಚದಲ್ಲಿ 389.68 ಕಿ.ಮೀ. ರಸ್ತೆಗಳ ಪುನರುಜ್ಜೀವನಕ್ಕೆ ಪ್ಲಾನ್ ಮಾಡಿಕೊಂಡಿದೆ. ಈ ಕ್ರಿಯಾ ಯೋಜನೆಗೆ 2024 ನವೆಂಬರ್‌ಗೆ ಅನುಮೋದನೆ ನೀಡಲಾಗಿದೆ. ಇದರಡಿ ಒಟ್ಟು 218 ರಸ್ತೆಗಳು ಅಭಿವೃದ್ಧಿಗೊಳ್ಳಲಿವೆ. ಈ ಯೋಜನೆಯಲ್ಲಿ ಈಗಾಗಲೇ ಅಭಿವೃದ್ಧಿಗೊಂಡಿರುವ ಹೊಸ ಏಳು ರಸ್ತೆಗಳನ್ನು ಪರಿಗಣಿಸಲಾಗಿದೆ. ಇದು ಬೇಡ, ಆ ಏಳು ರಸ್ತೆಗಳನ್ನು ಪುನರ್ ನವೀಕರಣದಿಂದ ಕೈ ಬಿಡುವಂತೆ ಅವರು ಪತ್ರದಲ್ಲಿ ಶಿಫಾರಸು ಮಾಡಿದ್ದಾರೆ.
ರಸ್ತೆಗಳು ಯಾವುವು?
ಈಗಾಗಲೇ ಅಭಿವೃದ್ಧಿಗೊಂಡಿರುವ ಮ್ಯೂಸಿಯಂ ಕ್ರಾಸ್ ರಸ್ತೆ, ರಿಚ್ಮಂಡ್ ರಸ್ತೆ, ವಿಟ್ಟಲ್ ಮಲ್ಯ ಆಸ್ಪತ್ರೆ ರಸ್ತೆ ,ಕಮಿಷರಿಯಟ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕನ್ನಿಂಗ್ಹ್ಯಾಮ್ ರಸ್ತೆ ಹಾಗೂ ಕೆ.ಜಿ ರಸ್ತೆಗಳು ಇವೆ. ಇವುಗಳು ಸುಸ್ಥಿರವಾಗಿವೆ. ನಿರ್ವಹಣೆ ಮಾಡಲಾಗುತ್ತಿದೆ. ಆದ್ದರಿಂದ ಇವುಗಳನ್ನು ಕೈ ಬಿಡುವಂತೆ ತಿಳಿಸಲಾಗಿದೆ.
ಈ ರಸ್ತೆಗಳು, ಪ್ರದೇಶಗಳನ್ನು ವಿಶ್ವದರ್ಜೆ ಮಟ್ಟದಲ್ಲಿ 2017-18 ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲೆಲ್ಲ ಪಾದಚಾರಿ ಸ್ನೇಹಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ಈ ರಸ್ತೆಗಳು, ಪಾದಾಚಾರಿ ಮಾರ್ಗಗಳು ಅತ್ಯುತ್ತಮ ಸ್ಥಿತಿಯಲ್ಲಿವೆ. ನಂತರದ ವರ್ಷಗಳಾದ 2019-20 ರಲ್ಲಿ ಇವುಗಳ ನಿರ್ವಹಣೆಗೆ 4.10 ಕೋಟಿ ರೂಪಾಯಿ ಹಂಚಿಕೆಗೆ ಆಗ್ರಹಿಸಲಾಗಿತ್ತು. ನಂತರ ಇದೇ ರಸ್ತೆಗಳ ನಿರ್ವಹಣೆಯ ಹೊಣೆಯನ್ನು 2021ರಲ್ಲಿ ರಸ್ತೆ ಮೂಲಸೌಕರ್ಯ ಇಲಾಖೆಗೆ ವರ್ಗಾಯಿಸಲಾಯಿತು.
ಈ ಪತ್ರ ಬರೆದ ಬೆನ್ನಲ್ಲೆ, ಕ್ರಿಯಾ ಯೋಜನೆಯಡಿ ಮತ್ತದೇ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಸೇರ್ಪಡೆ ಮಾಡಿಕೊಂಡಿದ್ದನ್ನು ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಒಪ್ಪಿದರು. ನಾಲ್ಕೈದು ವರ್ಷಗಳ ಹಿಂದೆ ಅವು ಪನರ್ ಅಭಿವೃದ್ಧಿ ಕಂಡಿವೆ. 'ಸಮಗ್ರ ಅಭಿವೃದ್ಧಿ' ಅಡಿ ಮುಖ್ಯ ರಸ್ತೆಯ ಮೈಕ್ರೋ-ಸರ್ಫೇಸಿಂಗ್‌ಗಾಗಿ ಹಣ ಹಂಚಿಕೆ ಮಾಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.
ಸದ್ಯ ಇದೇ ಏಳು ರಸ್ತೆಗಳು ಸುಸ್ಥಿತಿಯಲ್ಲಿ ಇರುವ ಕಾರಣ ಅವುಗಳಿಗೆ 11.5 ಕೋಟಿ ಖುರ್ಚು ಮಾಡುವ ಅಗತ್ಯವಿಲ್ಲ ಎಂದು ಲೋಕೇಶ್ ಅವರು ತಿಳಿಸಿದ್ದಾರೆ. ಇದರ ಬದಲಾಗಿ ನಾಗರಿಕ ಸಮಸ್ಯೆಗಳ ಪರಿಹಾರಕ್ಕೆ ಈ ಹಣ ಬಳಸಿಕೆ ಆಗಲಿದೆ ಎಂದು ಕೋರಿದ್ದಾರೆ.












Click it and Unblock the Notifications