ಪೆರಿಫೆರಲ್ ವರ್ತುಲ ರಸ್ತೆ: ಈ ಭಾಗದ ಆಸ್ತಿ ಮಾಲೀಕರಿಗೆ ನೋಟಿಸ್!
ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ ಶುರುವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶುರು ಮಾಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ಹೊಸೂರು ರಸ್ತೆ ಹಾಗೂ ಮೈಸೂರು ರಸ್ತೆಯನ್ನು ಬನ್ನೇರುಘಟ್ಟ ಮತ್ತು ಕನಕಪುರ ಮೂಲಕ ಸಂಪರ್ಕಿಸಲಿರುವ 52 ಕಿ.ಮೀ ಉದ್ದದ ಪೆರಿಫೆರಲ್ ರಿಂಗ್ ರಸ್ತೆಗೆ ಭರ್ಜರಿ ಸಿದ್ಧತೆ ಶುರು ಮಾಡಿಕೊಂಡಿದೆ. ಈ ಭಾಗದ ಆಸ್ತಿದಾರರಿಗೆ ನೋಟಿಸ್ ಸಹ ಕೊಡಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಹೇಗಿದೆ ಹಾಗೂ ಇದಕ್ಕೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬಿಡಿಎ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎನ್ನುವ ಹೆಸರಿನಲ್ಲಿ 73 ಕಿ. ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿದೆ. ಇದನ್ನು ಬರೋಬ್ಬರಿ 30,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ತುಮಕೂರು ರಸ್ತೆ- ಹೊಸೂರು ರಸ್ತೆ ಸಂಪರ್ಕಿಸುವ 8 ಪಥದ ರಸ್ತೆ ಯೋಜನೆ ಇದಾಗಿದ್ದು. ಇದನ್ನು 2007ರಲ್ಲಿ ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಹೆಸರಿನಲ್ಲಿ ರಸ್ತೆ ಎನ್ನುವ ಹೆಸರಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಈ ಯೋಜನೆಗೆ ಅಗತ್ಯವಿರುವ ಅಂದಾಜು 1,800 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 9 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು DH ವರದಿ ಮಾಡಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳವಾಗುತ್ತಿದ್ದು. ಟ್ರಾಫಿಕ್ ಜಾಮ್‌ಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ನೈಸ್ ಕಾರಿಡಾರ್‌ಗೆ ಸಮಾನಾಂತರವಾಗಿ ಈ ಮಾರ್ಗ ಸಾಗಲಿದೆ. ಆದರೆ, ಕನಿಷ್ಠ 4 ಕಿ.ಮೀ ಅಂತರ ಇರಲಿದೆ. ನಗರದ ಸುತ್ತಲೂ ಸಂಪೂರ್ಣ ವರ್ತುಲ ರಸ್ತೆಯನ್ನು ರೂಪಿಸುವುದು ಇದರ ಉದ್ದೇಶವಾಗಿದೆ. ಬೆಂಗಳೂರು ಮೂಲಕವಾಗಿ ಸಾಗುವ ವಾಹನಗಳು ವರ್ತುಲ ಮೂಲಕವಾಗಿ ಸಾಗುವುದು ಅಥವಾ ಬೆಂಗಳೂರು ಕೇಂದ್ರವಾಗಿ ಟ್ರಾಫಿಕ್ ಜಾಮ್ ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಭೂಸ್ವಾಧೀನಕ್ಕೆ ತಂಡ: ಈ ಯೋಜನೆಗೆ ಬೆಂಗಳೂರು ದಕ್ಷಿಣ, ಆನೇಕಲ್ ಹಾಗೂ ಬೆಂಗಳೂರು ಉತ್ತರ ತಾಲ್ಲೂಕುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶುರು ಮಾಡಿಕೊಳ್ಳಲಾಗುತ್ತಿದೆ. ಇದೀಗ ಈ ಭಾಗದ ಹಳ್ಳಿಗಳಲ್ಲಿ ಭೂಸ್ವಾಧೀನಕ್ಕಾಗಿ 9 ಜನ ಕೆಎಎಸ್ ಅಧಿಕಾರಿಗಳ ವಿಶೇಷ ತಂಡವನ್ನು ನೇಮಿಸಲಾಗಿದೆ. ಕೆಂಗೇರಿ, ಬೇಗೂರು, ಯಶವಂತಪುರ, ದಾಸನಪುರ, ಜಿಗಣಿ ಹಾಗೂ ಉತ್ತರಹಳ್ಳಿ ಪ್ರದೇಶ ವ್ಯಾಪ್ತಿಯ 53 ಹಳ್ಳಿಗಳ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಲಾಗಿದೆ.
ಭೂಮಾಲೀಕರಿಗೆ ಆತಂಕ: ಇನ್ನು ಭೂಸ್ವಾಧೀನ ಪ್ರಕ್ರಿಯೆ ಶುರುವಾಗುತ್ತಿದ್ದಂತೆಯೇ ಈ ಭಾಗದ ಜನರಲ್ಲಿ ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಅದೇ ಸಂದರ್ಭದಲ್ಲಿ ಬಿಡಿಎ ಭೂಸ್ವಾಧೀನ ಮಾಡಿಕೊಂಡಾಗೆಲ್ಲವೂ ಪರಿಹಾರವನ್ನು ವಿಳಂಬ ಮಾಡುತ್ತದೆ ಎನ್ನುವ ಆರೋಪ ಇದೆ. ಇದು ಭೂಮಾಲೀಕರ / ಆಸ್ತಿದಾರರ ಆತಂಕಕ್ಕೆ ಕಾರಣವಾಗಿದೆ. ಇನ್ನು ಬಿಡಿಎ ಭೂಮಾಲೀಕರಿಗೆ ನೋಟಿಸ್ ಕೊಡುವ ಪ್ರಕ್ರಿಯೆಯನ್ನು ಶುರು ಮಾಡಿಕೊಂಡಿದೆ. ಆದರೆ ಈ ಯೋಜನೆಯ ಬಗ್ಗೆ ಬಿಡಿಎ ಇನ್ನೂ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿಲ್ಲ ಎಂದು ಹೇಳಲಾಗಿದೆ.












Click it and Unblock the Notifications