ಹೊಸ ವರ್ಷ ಸಂಭ್ರಮಾಚರಣೆ ಸುಸೂತ್ರವಾಗಿ ನಡೆದಿದೆ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಜನವರಿ 01 : ಹೊಸ ವರ್ಷ ದಿನದಂದು ಒಂದಿಲ್ಲೊಂದು ಅಹಿತಕರ ಸಾಕ್ಷಿಯಾಗುತ್ತಿದ್ದ ಬೆಂಗಳೂರಿನ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಈ ಬಾರಿ ಪೊಲೀಸ್ ಸರ್ಪಗಾವಲಿನಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ನಿಜಕ್ಕೂ ಇದು ಸಂತೋಷಕರ ಸಂಗತಿ.
ಈ ಬಗ್ಗೆ ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, "ಹೊಸ ವರ್ಷಾಚರಣೆಗೆಂದು ಬೆಂಗಳೂರಿನ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಸುಮಾರು ಒಂದು ಲಕ್ಷ ಜನ ಸೇರಿದ್ದರೂ ಯಾವುದೇ ಅಹಿತಕರ ಘಟನೆಗೆ ಎಡೆಮಾಡಿಕೊಡದೆ ಪೊಲೀಸರು ಚೆನ್ನಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದಲ್ಲಿ ಪೊಲೀಸ್ ಬಂದೋಬಸ್ತ್ ಚೆನ್ನಾಗಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಹೊಸ ವರ್ಷ ಸಂಭ್ರಮಾಚರಣೆ ಸುಸೂತ್ರವಾಗಿ ನಡೆದಿದೆ. ಇದೂವರೆಗೂ ಎಲ್ಲಿಯೂ ಯಾವ ಕೇಸ್ ಸಹ ದಾಖಲಾಗಿಲ್ಲ ಎಂದು ಹೇಳಿದರು.
ಇನ್ನು ಕೆಲವು ಜನ ಹೆಚ್ಚಿಗೆ ಕುಡಿದ್ದರಿಂದ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಕೆಲವು ಸ್ಥಳಗಳಲ್ಲಿ ಕುಡಿದ ಮಹಿಳೆಯರನ್ನು ಪೊಲೀಸರು ಮನೆಯವರೆಗೂ ಹೋಗಿ ಬಿಟ್ಟುಬಂದಿದ್ದಾರೆ ಎಂದು ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು. ಇದೇ ವೇಳೆ ವಿಕಾಸಸೌಧದ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ತಿಳಿಸಿದರು.












Click it and Unblock the Notifications