ಬೆಳ್ಳಂದೂರು ಕೆರೆಗೆ ಮತ್ತೆ ಬೆಂಕಿ: ಶಾಶ್ವತವಾಗಿ ನಂದಿಸುವವರು ಯಾರು?
ಬೆಂಗಳೂರು, ಜನವರಿ 22 : ಬೆಂಗಳೂರು ಮತ್ತೊಮ್ಮೆ ಸುದ್ದಿಯಲ್ಲಿದೆ ಕಳೆದ ಎರಡು ವರ್ಷಗಳಲ್ಲಿ ಸತತ ಎರಡನೇ ಬಾರಿಗೆ ಬೆಂಗಳೂರಿನ ಬೆಳ್ಳಂದೂರು ಕೆರೆ ಬೆಂಕಿಗೆ ಆಹುತಿಯಾಗಿದೆ.
2015 ರಿಂದ ಸತತವಾಗಿ ವರ್ಷಕ್ಕೆ ನಾಲ್ಕು ಬಾರಿ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಅನಾಹುತ ಸಂಭವಿಸುತ್ತಿದೆ. ಈ ಬಾರಿ ಆರ್ಮಿ ಸರ್ವೀಸ್ ಕಾರ್ಪ್ಸ್ ನ ಸರಿ ಸುಮಾರು 5 ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.
ಇವರ ಜತೆ ಸತತ ಏಳು ಗಂಟೆಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಕೈಜೋಡಿಸಿದ್ದರಿಂದ ಸರಿ ಸುಮಾರು 87 ಸಾವಿರ ಸಿಬ್ಬಂದಿ ಸತತ ಪರಿಶ್ರಮದ ಫಲವಾಗಿ ಬೆಂಗಳೂರಿನ ಬೆಳ್ಳಂದೂರು ಕೆರೆಯ ಬೆಂಕಿಯನ್ನು ನಂದಿಸಲಾಯಿತು.
ಆದರೆ ರಾಜ್ಯ ಸರ್ಕಾರ ಬೆಂಕಿ ಬಿದ್ದಾಗ ಮಾತ್ರ ಈ ಬಗ್ಗೆ ಯೋಚಿಸುತ್ತಿದ್ದು, ಇದರ ಶಾಶ್ವತ ಪರಿಹಾರಕ್ಕೆ ಈವರೆಗೂ ಚಿಂತನೆ ನಡೆಸಿಲ್ಲ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಇತ್ತೀಚೆಗೆ ನಡೆಸಿದ ವಿಚಾರಣೆ ವೇಳೆ ಬೆಂಗಳೂರಿನ ಬೆಳ್ಳಂದೂರು, ಅಗ್ರಹಾರ ಹಾಗೂ ವರ್ತೂರು ಕೆರೆಗಳ ನೀರನ್ನು ಶುದ್ಧೀಕರಣಗೊಳಿಸದಿದ್ದರೂ ತ್ಯಾಜ್ಯ ನೀರನ್ನು ಅದರೊಳಗೆ ಬಿಡದಂತೆ ಕಟ್ಟು ನಿಟ್ಟಿನ ಆದೇಶ ನೀಡಿತ್ತು. ಈ ಆದೇಶ ಹೊರತಾಗಿಯೂ ತ್ಯಾಜ್ಯ ನೀರು ನಿರಂತರ ರಾಜಕಾಲುವೆಮೂಲಕ ಕೆರೆಗಳನ್ನು ಪ್ರವೇಶಿಸುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ತ್ಯಾಜ್ಯ ಹಾಗೂ ಚರಂಡಿ ನೀರನ್ನು ನೇರವಾಗಿ ಕೆರೆಗಳಿಗೆ ಬಿಡದಂತೆ ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಸಂಪೂರ್ಣ ವಿಫಲವಾಗಿವೆ.
ಬೆಳ್ಳಂದೂರು ಕೆರೆ ಸೇರಿದಂತೆ ಪ್ರಮುಖ ಕೆರೆಗಳ ರಕ್ಷಣೆಗಾಗಿ ಈವರೆಗೂ ಸಾದ್ಯವಾಗದಿರುವುದುಏಕೆ ಎಂದು ಗಮನಿಸಿದರೆ ರಾಜಕೀಯ ಇಚ್ಛಾಶಕ್ತಿ ಕೊರತೆ , ಬಿಬಿಎಂಪಿಯ ನಿಷ್ಕ್ರಿಯ ಆಡಳಿತ, ಬಿಡಿಎ ನಿರ್ಲಕ್ಷ್ಯ ಹಾಗೂ ಖಾಸಗಿ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ದೂರದೃಷ್ಟಿಕೋನದ ಕೊರತೆ ಪರಿಣಾಮವಾಗಿ ಬೆಂಗಳೂರಿನ ಒಟ್ಟು ಕೆರೆಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ.
ಇದಲ್ಲದೆ ಕೆರೆಗಳನ್ನು ಯಾವುದೇ ಪರಿಸ್ಥಿತಿಯಲ್ಲೂ ಉಳಿಸಿಕೊಳ್ಳಬಾರದು ಎಂಬ ರಿಯಲ್ ಎಸ್ಟೇಟ್ ಮಾಫಿಯಾದ ಸ್ವಾರ್ಥ ಕೂಡ ಈ ಕೆರೆಗಳ ಸಂರಕ್ಷಣೆಗೆ ಆಡಳಿತರೂಢ ಸರ್ಕಾರಗಳು ಹಿಂದೆ ಬೀಳುವಂತೆ ಮಾಡಿದೆ. ಈ ಹಿಂದೆ1990 ರ ದಶಕದಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ವಿಳಂಬವಾದಾಗ ಬೆಂಗಳೂರಿನ ಅನೇಕ ಐಟಿ ಸಂಸ್ಥೆಗಳು ಹಾಗೂ ಅದರ ನೌಕರರು ದೊಡ್ಡ ಸಂಖ್ಯೆಯಲ್ಲಿ ರಸ್ತೆಗಿಳಿದು ಭಾರಿ ಪ್ರತಿಭಟನೆ ನಡೆಸಿದರು.
ಅಷ್ಟೇ ಅಲ್ಲ ಬೆಂಗಳೂರಿನ ಎಚ್ ಎಎಲ್ ಏರ್ ಪೋರ್ಟ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಗೊಂಡಾಗ, ದೇವನಹಳ್ಳಿ ರಸ್ತೆಗಳ ಸಂಪರ್ಕ ಸರಿಯಿಲ್ಲ ಎಂಬ ಕಾರಣ ಮುಂದೊಡ್ಡಿ ಎಚ್.ಎ.ಎಲ್ ವಿಮಾನ ನಿಲ್ದಾಣವನ್ನೇ ಮುಂದುವರೆಸುವಂತೆ ಆಗ್ರಹಿಸಿ ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು, ಕಂಪನಿಗಳ ಮುಖ್ಯಸ್ಥರು ಕೂಡ ಬೀದಿಗಿಳಿದು ಹೋರಾಟ ನಡೆಸಿದ್ದರು.
ಐಟಿ ಕಂಪನಿಗಳಿಗೆ ನೆರವಾಗಲೆಂದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಿಬಿಎಂಪಿ, ಬಿಎಂಆರ್ ಡಿಎ ಸಂಸ್ಥೆಗಳು ಹಲವಾರು ಯೋಜನೆಗಳನ್ನು ರೂಪಿಸಿದೆ. ಆ ಪೈಕಿ ಬೆಳ್ಳಂದೂರು, ಮಾರತ್ತಹಳ್ಳಿ ಮಹಾದೇವಪುರ ಔಟರ್ ರಿಂಗ್ ರೋಡ್ ರಸ್ತೆ, ಪ್ರಮುಖ ಐಟಿ ಕಂಪನಿಗಳಾದ ಆಕ್ಸೆಂಚರ್,ಇಂಟೆಲ್, ಸಿಸ್ಕೊ, ಸೋನಿ, ನೋಕಿಯಾ, ಹನಿವೆಲ್, ಚೇಸ್, ಎಂಫಸಿಸ್ ನಂತಹ ಅನೇಕ ಕಂಪನಿಗಳಿಗೆ ನೆರವಾಗಲೆಂದೇ ಈ ಔಟರ್ ರಿಂಗ್ ರಸ್ತೆ ನಿರ್ಮಾಣ ಮಾಡಲಾಗಿದೆ.
ಸ್ಥಳೀಯ ಸರ್ಕಾರದಿಂದ ನೆರವು ಪಡೆದುಕೊಂಡಿರುವ ಐಟಿ ಕಂಪನಿಗಳ ಮಾಲೀಕರು, ನೌಕರರು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸರ್ಕಾರಕ್ಕೆ ಉತ್ತರದಾಯಿತ್ವ ಹೊಂದಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಬೆಳ್ಳಂದೂರು ಕೆರೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಆರೋಗ್ಯಕರವಾಗಿ ಮಾನವ ವಸತಿಗೆ ಸಹ್ಯವಾಗುವಂತೆ ನಿರೂಪಿಸುವಲ್ಲಿ ಕೈಜೋಡಿಸಲು ಇಂತಹ ಕಂಪನಿಗಳಿಗೆ ಸಾಮಾಜಿಕ ಜವಾಬ್ದಾರಿ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರು ಕೇಳುವಂತಾಗಿದೆ.












Click it and Unblock the Notifications