ಶತಮಾನ ಕಂಡ ಸರ್ಕಾರಿ ಶಾಲೆಯ ಅಭಿವೃದ್ಧಿ ಯಾವಾಗ?
ದೊಡ್ಡಬಳ್ಳಾಪುರ, ಫೆಬ್ರವರಿ 02 : ಇದು ಶತಮಾನಗಳನ್ನು ಸರ್ಕಾರಿ ಕಂಡ ಶಾಲೆ. ಶಾಲೆಯಲ್ಲಿ ಓದಿದವರು ಇಂದು ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ದೇಶದ ವಿವಿಧ ಕಡೆ ಇಂಜಿನಿಯರ್, ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಶಾಲೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿನ ಶಾಲೆಯ ದುಸ್ಥಿತಿ ಇದು. ನೂರು ವರ್ಷಗಳ ಹಿಂದೆಯೇ ಈ ಗ್ರಾಮದಲ್ಲಿ ಶಾಲೆ ಆರಂಭವಾಗಿತ್ತು. 1913ರಲ್ಲಿ ಆರಂಭವಾದ ಶಾಲೆ 104 ವರ್ಷಗಳನ್ನು ಕಂಡಿದೆ.
ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ವಿದೇಶ ಮತ್ತು ದೇಶದ ವಿವಿಧೆಡೆ ಉನ್ನತ ಹುದ್ದೆಯಲ್ಲಿದ್ದಾರೆ. 100 ವರ್ಷ ಪೂರೈಸಿದ ಸಂಭ್ರಮಕ್ಕೆ ಹಳೇ ವಿದ್ಯಾರ್ಥಿಗಳೆಲ್ಲ ಸೇರಿ ಶತಮಾನೋತ್ಸವನ್ನು ಆಚರಿಸಿದರು. ನೂರು ವರ್ಷಗಳ ಸಂಭ್ರಮದ ಕ್ಷಣಕ್ಕೆ ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯ್ಲಿ ಅವರು ಸಂಸದರ ಅನುದಾನದಲ್ಲಿ ಶಾಲಾ ಕಟ್ಟಡದ ಕೊಡುಗೆ ನೀಡಿದ್ದರು.

ಆದರೆ, ಕಳಪೆ ಕಾಮಾಗಾರಿಯಿಂದಾಗಿ ಕಟ್ಟದ ಮೇಲ್ಛಾವಣಿ ಕಿತ್ತು ಬಂದಿದೆ. ಅಲ್ಲದೆ ನೆಲಹಾಸು ಸಿದ್ದವಾಗದೆ ಯಾವುದಕ್ಕೂ ಪ್ರಯೋಜನವಿಲ್ಲದಂತಾಗಿ, ಕಟ್ಟಡ ನಿರುಪಯುಕ್ತವಾಗಿದೆ. ಶಾಲಾ ಕಟ್ಟಡ ಸುತ್ತ ಕಾಪೌಂಡ್ ಇಲ್ಲ, ಆದ್ದರಿಂದ, ರಾತ್ರಿ ಹೊತ್ತಿನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.
ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಉಮೇಶ್ ಇವತ್ತು ಇದೇ ಶಾಲೆಯ ಮುಖ್ಯೋಪಾಧ್ಯಯರು. 1913ರಲ್ಲಿ 50 ವಿದ್ಯಾರ್ಥಿಗಳೊಂದಿಗೆ ಶುರುವಾದ ಶಾಲೆಯಲ್ಲಿ ಇವತ್ತು 160ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
2000 ನೇ ಸಾಲಿನಲ್ಲಿ 300ಕ್ಕೂ ಹೆಚ್ಚು ಮಕ್ಕಳು ಇದ್ದರು. ಈಗ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಾಲೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡುತ್ತಿದ್ದು, ಶಾಲೆಗೆ ಬೇಕಾದ ಕಟ್ಟಡ, ಪುಸ್ತಕ ಮತ್ತು ಪಿಠೋಪಕರಣಗಳನ್ನು ದಾನವಾಗಿ ಕೊಡುತ್ತಿದ್ದಾರೆ.

ಶಾಲೆಯ ಸ್ಥಿತಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಾವಿರಾರು ಜನರ ಬಾಳಿಗೆ ದಾರಿ ದೀಪವಾದ ಶಾಲೆ ಕಾಯಕಲ್ಪಕ್ಕಾಗಿ ಕಾದು ಕುಳಿತಿದೆ.












Click it and Unblock the Notifications