ರೈತರಿಂದ ಒಂದಿಂಚೂ ಭೂಮಿ ಕಸಿಯಲು ನಾವು ಬಿಡಲ್ಲ: ನಿಖಿಲ್ ಎಚ್ಚರಿಕೆ
ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ (ಜಿಬಿಐಟಿ) ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಸ್ಥಾಪನೆಯಾಗಿದ್ದು, ಉಪ ಮುಖ್ಯಮಂತ್ರಿಗಳ ಸಹೋದರರನ್ನು ನೇಮಕಾತಿ ಮಾಡಿದ್ದಾರೆ. ಈಗ ಸದಸ್ಯ ಮುಂದೇ ಅವರೇ ಅಧ್ಯಕ್ಷ. ಇದು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಮಾಫಿಯಾ ನಡೆಸಲು ಮಾಡಿರುವ ಹುನ್ನಾರ ಎಂದು ದೂರಿದ್ದಾರೆ.
ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆಯನ್ನು ಯಾರಿಗಾಗಿ ಮಾಡುತ್ತಿದ್ದೀರಿ? ಜಿಬಿಡಿಎ ಮೂಲಕ ಜಿಬಿಐಟಿ 2000 ಎಕರೆ ಪ್ರದೇಶದಲ್ಲಿ ಎಐ ಸಿಟಿ ಮಾಡಲು ಹೋಗುತ್ತಿದ್ದೀರ? ನಿಮ್ಮ ಯೋಗ್ಯತೆಗೆ ಆರು ತಿಂಗಳಿನಿಂದ ಬೆಂಗಳೂರಿನ ಗುಂಡಿಗಳನ್ನ ಮುಚ್ಚಲು ನಿಮ್ಮತ್ರ ದುಡ್ಡಿಲ್ಲ. ಇನ್ನೇನು ಎಐ ಸಿಟಿ ನಿರ್ಮಾಣ ಮಾಡುತ್ತೀರಿ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡದಿಯಲ್ಲಿ ಮಾಡುತ್ತಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ಹಿಂಪಡೆಯುವಂತೆ ರಾಮನಗರ ಜಿಲ್ಲೆಯ ಬೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಹೋರಾಟ 200ನೇ ದಿನಕ್ಕೆ ಕಾಲಿಟ್ಟಿದೆ. ಬೃಹತ್ ಪ್ರತಿಭಟನೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದರು.

ಜೆಡಿಎಸ್ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆಯ ಸಾಧಕ- ಬಾಧಕಗಳ ಬಗ್ಗೆ ವಿಚಾರ ಮಾಡದೇ ರೈತರ ಮೇಲೆ ದಬ್ಬಾಳಿಕೆ ಮಾಡಿ ಭೂಮಿ ಕಸಿದುಕೊಳ್ಳುತ್ತಿರುವುದು ಯಾವ ಉದ್ದೇಶಕ್ಕಾಗಿ? ರಿಯಲ್ ಎಸ್ಟೇಟ್ ಮಾಫಿಯಾ ನಡೆಸುವುದಕ್ಕಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ರೈತರ ಜಮೀನು ಮಾರಾಟ ಮಾಡದಂತೆ ಆದೇಶ ಮಾಡಿದ್ದೀರಾ? ಅವರ ಮಕ್ಕಳ ಜೀವನಕ್ಕೆ ಏನು ಮಾಡಬೇಕು? ರೈತ ಬೀದಿಗೆ ಬರ್ತಾನೆ. ಅದಕ್ಕೆ ಸಾಮಾಜಿಕ ಸಮೀಕ್ಷೆ ಮಾಡಿದ್ದೀರಾ? ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರು ಇದ್ದಾರೆ. 10 ಹಳ್ಳಿಗಳ ರೈತರ ಜೊತೆ ಮಾತನಾಡಿದ್ದೀರಾ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಶೇ 80ರಷ್ಟು ರೈತರು ಭೂಮಿಯನ್ನು ನೀಡುವುದಿಲ್ಲ ಎಂದು ಹೇಳಿದರು. ರೈತರ ಮೇಲೆ ದಿನನಿತ್ಯ ಅಧಿಕಾರಿಗಳ ಮೂಲಕ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿರುವುದು ಯಾವ ಉದ್ದೇಶಕ್ಕೆ? ರಾಜ್ಯದ ಉಪ ಮುಖ್ಯಮಂತ್ರಿಗಳು ರೈತರ ವಿರುದ್ಧ ತೊಡೆ ತಟ್ಟಿದ್ದಾರೆ. ಆದರೆ ಅವರಿಗೆ ರೈತರ ತಾಕತ್ತಿನ ಬಗ್ಗೆ ಅರಿವಿಲ್ಲ.ರೈತರಿಗೆ ಅಧಿಕಾರ ಕೊಡುವುದು ಗೊತ್ತು ತೊಡೆ ಮುರಿಯುವುದು ಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಎಷ್ಟೇ ದಬ್ಬಾಳಿಕೆ ಮಾಡಿದರೂ ರೈತರಿಂದ ಒಂದಿಂಚೂ ಭೂಮಿಯನ್ನ ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ಸರ್ಕಾರ ಈ ಯೋಜನೆಯನ್ನು ಹಿಂಪಡೆಯದಿದ್ದರೇ ಭೈರಮಂಗಲ ಗ್ರಾಮದಿಂದ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಹಾಗೂ ಮುಖ್ಯಮಂತ್ರಿಗಳ ನಿವಾಸ ಕೃಷ್ಣ ಕಛೇರಿಗೆ ಮುತ್ತಿಗೆ ಹಾಕುತ್ತೇವೆ. ಅಲ್ಲದೇ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಈ ಯೋಜನೆಯನ್ನ ಕೈ ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕೊನೆಯ ಹಂತದವರೆಗೂ ರೈತರ ಧ್ವನಿಯಾಗಿ ನಿಲ್ಲುತ್ತೇವೆ ಎಂದಿದ್ದಾರೆ.












Click it and Unblock the Notifications