ಬೆಂಗಳೂರಿನಲ್ಲಿ ರಾತ್ರಿ 10 ಗಂಟೆಗೆ ಕರ್ಫ್ಯೂ, ಮಾರ್ಗಸೂಚಿಗಳು
ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಶುಕ್ರವಾರ ಹೆಚ್ಚುವರಿ ನಿರ್ಬಂಧಗಳನ್ನು ಹೇರಿದ್ದಾರೆ. ಪರಿಷ್ಕೃತ ಆದೇಶದಂತೆ ಶುಕ್ರವಾರ ಸಂಜೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ರಾತ್ರಿ ಕರ್ಫ್ಯೂ ಸೇರಿದಂತೆ ಈ ಹಿಂದೆ ವಿಧಿಸಿದ್ದ ನಿರ್ಬಂಧಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದರೂ, ಹೊಸ ವರ್ಷವನ್ನು ಆಚರಿಸಲು ಮುಖ್ಯ ರಸ್ತೆಗಳು, ತೆರೆದ ಪ್ರದೇಶಗಳು, ಉದ್ಯಾನವನಗಳು, ಮೈದಾನಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಲು ಪರಿಷ್ಕೃತ ಆದೇಶವನ್ನು ಹೊರಡಿಸಲಾಗಿದೆ.
ಆದಾಗ್ಯೂ ಮಾಲ್‌ಗಳು, ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ರಾತ್ರಿ ಕರ್ಫ್ಯೂ 10 ಗಂಟೆಗೆ ಪ್ರಾರಂಭವಾಗುವವರೆಗೆ, ಅಸ್ತಿತ್ವದಲ್ಲಿರುವ ನಿರ್ಬಂಧಗಳಿಗೆ ಅನುಗುಣವಾಗಿ ಡಿಜೆ ಅಥವಾ ನೃತ್ಯ ಪ್ರದರ್ಶನಗಳಂತಹ ವಿಶೇಷ ಕಾರ್ಯಕ್ರಮಗಳನ್ನು ನಡೆಸದೆ ಕಾರ್ಯನಿರ್ವಹಿಸಬಹುದು. ರಾತ್ರಿ 10 ಗಂಟೆಗೆ ಜನರು ತಮ್ಮ ಮನೆಗಳನ್ನು ತಲುಪಲು ಸಲಹೆ ನೀಡಲಾಗುತ್ತದೆ. ಆದರೆ ರಾತ್ರಿ ಕರ್ಫ್ಯೂ ಜಾರಿಗೆ ಬಂದ ನಂತರ ತುರ್ತು ಸೇವೆ ವದಗಿಸುವ ಸಿಬ್ಬಂದಿಗಳಿಗೆ ಮತ್ತು ಇತರರಂತೆ ರಾತ್ರಿ 10 ಗಂಟೆಗೆ ಹೊರಡುವವರ ಚಲನವಲನವನ್ನು ಸ್ವಲ್ಪ ಸಮಯದವರೆಗೆ ಪರಿಗಣಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸದೆ ಮನೆಯೊಳಗೆ ಆಚರಣೆಗಳನ್ನು ನಡೆಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೊಸ ವರ್ಷದ ಆಚರಣೆ ವೇಳೆ ರಸ್ತೆ ಅಪಘಾತ ಸೇರಿದಂತೆ ಜೀವಹಾನಿ ತಡೆಯುವ ಉದ್ದೇಶದಿಂದ 108 ಆರೋಗ್ಯ ಕವಚ ಆಂಬ್ಯುಲೆನ್ಸ್ ವಿನೂತನ ಸೇವೆಯನ್ನು ಆರಂಭಿಸಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೊಸ ವರ್ಷ ದಿನ ಸಾಮಾನ್ಯವಾಗಿ ಶೇ. 30 ರಿಂದ 35 ರಷ್ಟು ಅಪಘಾತ ಪ್ರಕರಣಗಳು ವರ್ಷದ ಆಚರಣೆ ದಿನವೇ ಸಂಭವಿಸಿವೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಎಷ್ಟೇ ನಿರ್ಬಂಧ ವಿಧಿಸಿದರೂ ಜನ ಸಾಮಾನ್ಯರು ಹೊರಗೆ ಪ್ರಯಾಣ ಹೋಗುತ್ತಾರೆ. ಹೀಗಾಗಿ ಅಪಘಾತಕ್ಕೆ ಈಡಾಗುವವರ ಜೀವ ರಕ್ಷಿಸುವ ಉದ್ದೇಶದಿಂದ ಹೊಸ ವರ್ಷದ ಆಚರಣೆ ದಿನ ವಿನೂತನ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುತ್ತದೆ.

ಹೊಸ ವರ್ಷಾಚರಣೆಯ ಮಾರ್ಗಸೂಚಿಗಳು:
ಹೊಸ ವರ್ಷಾಚರಣೆಯ ಮಾರ್ಗಸೂಚಿಗಳು ಡಿ.30ರಿಂದ 2022ರ ಜ.2ರವರೆಗೆ ಜಾರಿಯಲ್ಲಿರುತ್ತವೆ.
* ಕ್ಲಬ್, ಪಬ್, ರೆಸ್ಟೋರಂಟ್‌ಗಳು, ಹೋಟೆಲ್, ಉದ್ಯಾನಗಳು ಅಥವಾ ಖಾಸಗಿ ಸ್ಥಳಗಳಲ್ಲಿ ಡಿಜೆ, ಆರ್ಕೆಸ್ಟ್ರಾ, ಸಮೂಹ ನೃತ್ಯ ಮುಂತಾದ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇರುವುದಿಲ್ಲ.
ಡಿ.31ರಿಂದ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಜಿಲ್ಲಾಧಿಕಾರಿಡಿ.31ರಿಂದ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ ಜಿಲ್ಲಾಧಿಕಾರಿ
* ಹೊಸ ವರ್ಷವನ್ನು ಆಚರಿಸಲು ಸಾರ್ವಜನಿಕ ಸ್ಥಳಗಳು ಸೇರಿದಂತೆ ರಸ್ತೆಗಳು, ಉದ್ಯಾನಗಳು, ಆಟದ ಮೈದಾನಗಳನ್ನು ಬಳಸಬಾರದು
* ರೆಸ್ಟೋರಂಟ್, ಹೋಟೆಲ್, ಕ್ಲಬ್, ಪಬ್‌ಗಳು ಎಂದಿನಂತೆ ಕಾರ್ಯನಿರ್ವಹಿಸಬಹುದು. ಆದರೆ, ಅಲ್ಲಿನ ಸಿಬ್ಬಂದಿ RTPCR ನೆಗೆಟಿವ್ ಹೊಂದಿರಬೇಕು ಹಾಗೂ ಎರಡು ಡೋಸ್ ಲಸಿಕೆ ಪಡೆದಿರಬೇಕು
* ರೆಸ್ಟೋರಂಟ್, ಹೋಟೆಲ್, ಕ್ಲಬ್, ಪಬ್‌ಗಳಿಗೆ ಹೋಗುವವರು ಕಡ್ಡಾಯವಾಗ ಎರಡು ಡೋಸ್ ಲಸಿಕೆ ಪಡೆದಿರಬೇಕು. ಇದನ್ನು ಪರಿಶೀಲಿಸಿಯೇ ಪ್ರವೇಶಕ್ಕೆ ಅವಕಾಶ ನೀಡಬೇಕು
* ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು ಸಾಮಾಜಿಕ ಅಂತರ ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸಿ ತಮ್ಮ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕು. ಆದರೆ, ಗುಂಪು ನೃತ್ಯಕ್ಕಾಗಿ ಡಿಜೆ/ ಡ್ಯಾನ್ಸ್‌ಫ್ಲೋರ್‌ನಂತಹ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಈ ಕ್ರಮಗಳನ್ನು ಅನುಸರಿಸದಿದ್ದರೆ ಸಂಘಟಕರೇ ಜವಾಬ್ದಾರರಾಗುತ್ತಾರೆ.
* ಈ ಹಿಂದಿನ ಮಾರ್ಗಸೂಚಿಯ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಹೋಟೆಲ್, ಪಬ್, ರೆಸ್ಟೋರಂಟ್, ಮಾಲ್‌ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಿರಬೇಕು.
* ಕೋವಿಡ್ 19 ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೆ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಹಾಗೂ ಇತರೆ ಇಲಾಖೆ, ಕಾರ್ಪೊರೇಷನ್, ಪ್ರಾಧಿಕಾರಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನೂ ಪಾಲಿಸಬೇಕು.
ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು ಉಲ್ಲಂಘಿಸಿದಲ್ಲಿ ಕಾನೂನು ಕ್ರಮದ ಜೊತೆಗೆ ವಿಪತ್ತು ನಿರ್ವಹಣಾ ಅಧಿನಿಯಮದ ಅನ್ವಯವೂ ಕ್ರಮಕ್ಕೆ ಒಳಗಾಗುತ್ತಾತೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.












Click it and Unblock the Notifications