ಬಿಬಿಎಂಪಿ ಚುನಾವಣೆ ಮುಂದೂಡಲು ಸರ್ಕಾರದಿಂದ ಹೊಸ ಅಸ್ತ್ರ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡುವುದಕ್ಕೆ ರಾಜ್ಯ ಸರ್ಕಾರವು ಒಂದಿಲ್ಲೊಂದು ಉಪಾಯಗಳನ್ನು ಹುಡುಕುತ್ತಿದೆ. ಈ ಬಗ್ಗೆ ಗಂಭೀರ ಆರೋಪಗಳು ಸಾರ್ವಜನಿಕರಿಂದ ನಿರಂತರವಾಗಿ ಕೇಳಿ ಬರುತ್ತಲ್ಲೇ ಇದೆ. ಬಿಬಿಎಂಪಿ ಚುನಾವಣೆ ಈ ವರ್ಷವಾದರೂ ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ವರ್ಷವೂ ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮೂಂದೂಡಬಹುದು ಎಂದು ಹೇಳಲಾಗುತ್ತಿದೆ. ಅದಕ್ಕೆ ತಕ್ಕಂತೆ ಬೆಳವಣಿಗೆಗಳು ನಡೆಯುತ್ತಿವೆ. ಇದೀಗ ಬಿಬಿಎಂಪಿ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರವು ಹೊಸ ಅಸ್ತ್ರವೊಂದನ್ನು ಹುಡುಕಿಕೊಂಡಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಪ್ರಮುಖ ಸ್ಥಳೀಯ ಆಡಳಿತಗಳಲ್ಲಿ ಒಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ನಡೆಸಿ ಬರೋಬ್ಬರಿ 5 ವರ್ಷಗಳೇ ಆಗಿವೆ. 2020ರಲ್ಲಿ ಬಿಬಿಎಂಪಿಯ ಮೇಯರ್, ಉಪ ಮೇಯರ್ ಹಾಗೂ ಪಾಲಿಕೆ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿದೆ. ಆದರೆ ಆಗಿನಿಂದಲೂ ಚುನಾವಣೆಯನ್ನು ಮುಂದೂಡಿಕೊಂಡೇ ಬರಲಾಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಸಹ ಬಿಬಿಎಂಪಿಯ ಚುನಾವಣೆಯನ್ನು ಬೇರೆ ಬೇರೆ ಕಾರಣಕ್ಕೆ ಮುಂದೂಡಿತ್ತು.

ಬಿಬಿಎಂಪಿ ವಿಭಜನೆ ಮತ್ತೆ ಮುನ್ನೆಲೆಗೆ: ರಾಜ್ಯ ಸರ್ಕಾರವು ಬಿಬಿಎಂಪಿಯ ವಿಭಜನೆಗೆ ತೆರೆಮರೆಯ ಸಿದ್ಧತೆ ಪ್ರಾರಂಭಿಸಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿತ್ತು. ಈಗ ಒಂದೇ ಪಾಲಿಕೆ ಹಾಗೂ ಮೇಯರ್ ಇದ್ದಾರೆ. ಹಲವು ಭಾಗವಾಗಿ ಪಾಲಿಕೆಯನ್ನು ವಿಭಜನೆ ಮಾಡಿದರೆ ಸುಗಮ ಆಡಳಿತ ಹಾಗೂ ಒತ್ತಡ ಕಡಿಮೆ ಆಗಲಿದೆ ಎಂದು ರಾಜ್ಯ ಸರ್ಕಾರವು ವಾದ ಮಾಡುತ್ತಿದೆ. ಆದರೆ, ಈ ರೀತಿ ವಿಭಜನೆ ಮಾಡಿದರೆ ಕನ್ನಡಿಗರ ಅಸ್ತಿತ್ವದ ಪ್ರಶ್ನೆ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.
ನಮ್ಮ ನಾಡು ನಮ್ಮ ಆಳ್ವಿಕೆ ಎನ್ನುವ ಸೋಷಿಯಲ್ ಮೀಡಿಯಾ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು. ಈ ಟ್ವೀಟ್ ವೈರಲ್ ಆಗುತ್ತಿದೆ. ನಾಲ್ಕು ವರ್ಷ 198 ಜನ ಕಾರ್ಪೊರೇಟರ್ ಗಳು, ಮೇಯರ್ ಇಲ್ಲದೆ ಇದೇ ಕಮಿಷನರ್ ಹೆಸರಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿ ಆಡಳಿತ ಮಾಡಿದೆ. ಈಗ ಎಲೆಕ್ಷನ್ ಮತ್ತೆ ಮುಂದೂಡಲು ಒಂದಕ್ಕಿಂತ ಹೆಚ್ಚು ಮೇಯರ್ ಅನ್ನೋ ಪ್ರಹಸನ ಶುರು ಮಾಡಿದೆ ರಾಜ್ಯ ಕಾಂಗ್ರೆಸ್ ಹಿಂದಿ ಹೈಕಮಾಂಡ್ ಪಕ್ಷಗಳಲ್ಲಿ ಬೆಂಗಳೂರನ್ನು ಕನ್ನಡಿಗರ ಕೈತಪ್ಪಿಸುವ ದುರುದ್ದೇಶ ಕಾಣುತ್ತಿದೆ. ನಾವು ಕನ್ನಡಿಗರು, ನೀವು ಬೆಂಗಳೂರನ್ನು ಒಡೆದು ಆಳುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ. ಈ ರೀತಿ ಹಲವು ಟ್ವೀಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಬಿಬಿಎಂಪಿ ವಿಭಜನೆ ಟ್ರೆಂಡ್‌ಗೆ ಕಾರಣವೇನು ?
ಬೆಂಗಳೂರು / ಬಿಬಿಎಂಪಿಯ ವಿಭಜನೆಯ ಬಗ್ಗೆ ಕಾಂಗ್ರೆಸ್ ಶಾಸಕ ಶಾಸಕ ರಿಜ್ವಾನ್ ಅರ್ಷದ್ ಅವರು ಮಾತನಾಡಿದ ಮೇಲೆ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಟ್ರೆಂಡ್ ಆಗುತ್ತಿದೆ. ಬೆಂಗಳೂರು ಬೃಹತ್ ಆಗಿ ಬೆಳೆಯುತ್ತಿದೆ. ಈ ರೀತಿ ಬೆಳೆಯುತ್ತಿರುವ ಬೆಂಗಳೂರಿಗೆ ಒಬ್ಬರೇ ಮೇಯರ್ ಹಾಗೂ ಒಬ್ಬರೇ ಆಯುಕ್ತರಿಂದ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗಲಿದೆ ಎಂದು ಗ್ರೇಟರ್ ಬೆಂಗಳೂರು ಸಭೆಯಲ್ಲಿ ಅವರು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.












Click it and Unblock the Notifications