ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿ ಪೂರ್ಣ ಯಾವಾಗ?
ಬೆಂಗಳೂರು,ಫೆಬ್ರವರಿ 12: ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.
ಹಾಗೆಯೇ ಮೂರು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಭೂಸ್ವಾಧೀನ ಹಾಗೂ ಜಲಮಂಡಳಿ ನೀರಿನ ಕೊಳವೆ ಸ್ಥಳಾಂತರದಿಂದ ಕಾಮಗಾರಿ ವಿಳಂಬವಾಗಿತ್ತು,ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಮೇಲ್ಸೇತುವೆ ವಿವರ
*ಉದ್ದ-493 ಮೀಟರ್
*ಅಗಲ-16 ಮೀಟರ್
*ಒಟ್ಟು ಪಥ-4
*ಒಟ್ಟು ಪಿಲ್ಲರ್ 16
*ವೆಚ್ಚ 600 ಕೋಟಿ ರೂ.
*ಕಾಮಗಾರಿ ಆರಂಭ 2017 ಜೂನ್ 30.
ಕಾಮಗಾರಿ ಸ್ಥಳದಲ್ಲಿ 30 ಮರಗಳಿದ್ದು,ಇದರಲ್ಲಿ 12 ಮರಗಳನ್ನು ಸ್ಥಳಾಂತರ ಮಾಡಲು ಉದ್ದೇಶಿಸಲಾಗಿದೆ. ಇನ್ನುಳಿದ ಹಳೆಯ ಮರಗಳನ್ನು ಕತ್ತರಿಸುವುದಕ್ಕೆ ಸೂಚನೆ ನೀಡಲಾಗಿದೆ.

ಏನೇನು ಕಾಮಗಾರಿ ಬಾಕಿ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಒಂದು ಪಿಲ್ಲರ್ ಕಾಮಗಾರಿ ಬಾಕಿ ಇದೆ. ಈ ಸಂಬಂಧ ಸಂಚಾರ ಪೊಲೀಸರಿಂದ ಏಳು ದಿನಗಳ ಕಾಲ ಮಾರ್ಗ ಬದಲಾವಣೆಗೆ ಅನುಮತಿ ಪಡೆದು ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸೂಚನೆ ನೀಡಲಾಗಿದೆ.

ರೈಲ್ವೆ ಅಂಡರ್ ಪಾಸ್ ಹೆಚ್ಚುವರಿ ಬಾಕ್ಸ್ ಅಳವಡಿಕೆ
ಇನ್ನು ರೈಲ್ವೆ ಅಂಡರ್‌ಪಾಸ್ ಬಳಿ ಮತ್ತೊಂದು ವಾಹನ ಸಂಚಾರಕ್ಕೆ ಹೆಚ್ಚುವರಿ ಬಾಕ್ಸ್ ಅಳವಡಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ಪಾದಚಾರಿ ಮಾರ್ಗ ಹಾಳು
ಮೇಲ್ಸೇತುವೆ ನಿರ್ಮಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಪಾದಚಾರಿ ಮಾರ್ಗ ಹಾಳಾಗಿರುವುದಕ್ಕೆ ಆಡಳಿತಾಧಿಕಾರಿ ಪಾಲಿಕೆಯ ಅಧಿಕಾರಿಗಳ ಮೇಲೆ ಕಿಡಿಕಾರಿದ್ದಾರೆ.ರೈಲ್ವೆ ಹಳಿ ಕೆಳಗೆ ಪಾದಚಾರಿ ಮಾರ್ಗ ಹಾಳಾಗಿದ್ದು, ಸರಿಪಡಿಸುವಂತೆ ಸೂಚಿಸಿದ್ದಾರೆ.

ಭೂಸ್ವಾಧೀನಕ್ಕೆ 25 ಕೋಟಿ ರೂ
ಭೂಸ್ವಾಧೀನ ಪ್ರಕ್ರಿಯೆಗೆ ಸ್ಥಳೀಯ ಟಿಡಿಆರ್ ಒಪ್ಪಿಗೆ ನೀಡದಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ದರ ಆಧಾರದ ಮೇಲೆ ಆರ್ಥಿಕ ಪರಿಹಾರ ನೀಡುವುದಕ್ಕೆ ಚರ್ಚೆ ನಡೆದಿದೆ. ಏಳು ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಬೇಕಿದೆ. 25 ಕೋಟಿ ರೂ. ಪರಿಹಾರ ನೀಡಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.