ಬಿಬಿಎಂಪಿ ಅಧಿಕಾರಿಗಳಿಗೆ ಹೊಸ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಮುಕು - ಡುಮುಕು ಕ್ಲಾಸ್!
ಬೆಂಗಳೂರಿನ ಅಭಿವೃದ್ಧಿ ಹಾಗೂ ಜನರ ಸುರಕ್ಷತೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊಸ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಬಿಬಿಎಂಪಿಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದು, ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ನಗರದಲ್ಲಿ ಜನರ ಸುರಕ್ಷಿತ ಮತ್ತು ನಡೆಯಲು ಯೋಗ್ಯವಾದ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವುದು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರಿಗೆ ಸುಗಮ ಸಂಚಾರಕ್ಕೆ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವ ಸಲುವಾಗಿ, ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬರುವ ಕೆಂಪೇಗೌಡ ಬಸ್ ನಿಲ್ದಾಣದ (ಮೆಜೆಸ್ಟಿಕ್) ಬಳಿಯ ಗುಬ್ಬಿ ತೋಟದಪ್ಪ ರಸ್ತೆ, ಧನ್ವಂತರಿ ರಸ್ತೆ, ಟ್ಯಾಂಕ್ ಬಂಡ್ ರಸ್ತೆ ಹಾಗೂ ಬಸ್ ಘಟಕ ಪರಿವೀಕ್ಷಣೆ ನಡೆಸಿದ ವೇಳೆ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಪಾದಚಾರಿಗಳಿಗೆ ಮೊದಲ ಸ್ಥಾನ ನೀಡಿ, ಅವರಿಗೆ ಸುಗಮವಾಗಿ ಸಂಚರಿಸುವಂತಹ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು. ಜೊತೆಗೆ ಪಾದಚಾರಿ ಮಾರ್ಗಗಗಳನ್ನು ಕಾಲ-ಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಾಂತಲಾ ಸಿಲ್ಕ್ ಜಂಕ್ಷನ್ ಬಳಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಪಾದಚಾರಿ ಮಾರ್ಗ ಪರಿಶೀಲಿಸಿದರು. ಈ ವೇಳೆ ಬಸ್ ನಿಲ್ದಾಣ ಒಳಭಾಗದಲ್ಲಿ ಹೆಚ್ಚುವರಿ ಜಾಗ ಇರುವುದನ್ನು ಗಮನಿಸಿ ಪಾದಚಾರಿ ಮಾರ್ಗವನ್ನು ಅಗಲೀಕರಣ ಮಾಡುವ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತಲೂ ಸಾಕಷ್ಟು ಶೌಚಾಲಯಗಳಿವೆ. ಆದರೂ ಕೂಡ ಬಹುತೇಕ ಕಡೆ ಪಾದಚಾರಿ ಮಾರ್ಗಗಳಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ್ದು, ಅದರಿಂದ ದುರ್ವಾಸನೆ ಬರುತ್ತಿದೆ. ಈ ಸಂಬಂಧ ಎಲ್ಲಾ ಕಡೆ ಸ್ವಚ್ಛತೆ ಕಾಪಾಡುವುದರ ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಧನ್ವಂತರಿ ರಸ್ತೆ ಕಡೆ ಹೋಗುವ ಪಾದಚಾರಿ ಮಾರ್ಗದಲ್ಲಿ ಬೃಹತ್ ರಿಂಗ್ ಪೈಪ್ ಇರುವುದನ್ನು ಕಂಡು, ಅದನ್ನು ಈ ಕೂಡಲೆ ತೆರವುಗೊಳಿಸಲು ಕ್ರಮವಹಿಸಬೇಕು. ಇನ್ನು ಅದೇ ರಸ್ತೆಯಲ್ಲಿ ಒಣಗಿರುವ ಮರದ ದಿಮ್ಮಿ ಹಾಗೂ ಕೊಂಬೆಗಳಿರುವುದನ್ನು ಕಂಡು ಅರಣ್ಯ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದು ತೆರವು ಕಾರ್ಯವನ್ನು ನಡೆಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈಲ್ವೆ ನಿಲ್ದಾಣದ ರಸ್ತೆ ಜಲಮಂಡಳಿ ವಾಲ್ ತೆರದ ಸ್ಥಿತಿಯಲ್ಲಿದ್ದು, ಸ್ಲ್ಯಾಬ್ ಅಳವಡಿಸದೆ ಬ್ಯಾರಿಕೇಡ್ ಅಡ್ಡಲಾಗಿ ಹಾಕಲಾಗಿದೆ. ಈ ಸಂಬಂಧ ಸ್ಲ್ಯಾಬ್ ಅಳವಡಿಸಲು ಸೂಚಿಸಿದರು. ಮ್ಯಾನ್ಫೋ ಬೆಲ್ ಕಟ್ಟಡದ ಮುಂಭಾಗ ಪಾದಚಾರಿಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿದ್ದು, ಅದನ್ನು ತೆರವುಗೊಳಿಸಲು ಸೂಚಿಸಿದರು.
ಕರ್ಬ್ಸ್/ಸ್ಲ್ಯಾಬ್ಸ್/ಬೊಲಾರ್ಡ್ಸ್ ಅಳವಡಿಕೆ: ಪಾದಚಾರಿ ಮಾರ್ಗಗಳಲ್ಲಿ ಬಹುತೇಕ ಕಡೆ ಕರ್ಬ್ಸ್ ಹಾಳಾಗಿದೆ. ಅವುಗಳನ್ನು ಕೂಡಲೇ ದುರಸ್ತಿಪಡಿಸಬೇಕು. ಇನ್ನು ಕೆಲವೆಡೆಯ ಪಾದಚಾರಿ ಮಾರ್ಗಗಳಲ್ಲಿ ಸ್ಲ್ಯಾಬ್ಸ್ ಹಾಳಾಗಿದ್ದು, ಅವುಗಳನ್ನು ಬದಲಿಸಬೇಕು. ಬೊಲಾರ್ಡ್ಸ್ ಅಗತ್ಯವಿರುವ ಕಡೆ ಕೂಡಲೇ ಅಳವಡಿಸಬೇಕು. ಒಳಚರಂಡಿಗೆ ಅಳವಡಿಸಿರುವ ಡಕ್ಟ್ ಗಳ ಮೂಲಕ ಕೊಳಚೆ ನೀರು ಹೊರಬರುತ್ತಿರುವುದನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸರಿಪಡಿಸಲು ಸೂಚಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಕಡಿವಾಣ: ಮೆಜೆಸ್ಟಿಕ್ ಸುತ್ತ-ಮುತ್ತಲಿನ ಪ್ರದೇಶದ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳು ಪಾದಚಾರಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ವ್ಯಾಪಾರ ಮಾಡಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕು. ಬೀದಿ ಬದಿ ವ್ಯಾಪಾರ ಮಾಡಲು ಗುರುತಿನ ಚೀಟಿ ನೀಡಿದಂತಹ ವ್ಯಾಪಾರಿಗಳನ್ನು ಬಿಟ್ಟು ಉಳಿದವರಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಗುಂಡಿಗಳನ್ನು ಮುಚ್ಚಿ: ಮೆಜೆಸ್ಟಿಕ್ ಒಳಗಿನಿಂದ ಬರುವ ಮಾರ್ಗದಲ್ಲಿ ರಸ್ತೆ ಗುಂಡಿಗಳನ್ನು ಕಂಡು ಅದನ್ನು ಕೂಡಲೆ ಮುಚ್ಚಲು ತಿಳಿಸಿದರು. ಈ ವೇಳೆ ಅಧಿಕಾರಿಯೊಬ್ಬರು ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಈ ರಸ್ತೆಗಳನ್ನು ದುರಸ್ತಿಪಡಿಸಲಾಗುವುದೆಂದು ತಿಳಿಸಿದರು.
ಪಾದಚಾರಿ ಮಾರ್ಗ ಒತ್ತುವರಿ ತೆರವು: ಉಪ್ಪಾರಪೇಟೆ ಪೊಲೀಸ್ ಠಾಣೆಯ ಬಳಿ ಇರುವ ಶೌಚಾಲಯದ ಪಕ್ಕದಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿದ್ದ ಗೋಡೆ ಭಾಗವನ್ನು ಕಂಡು ಕೂಡಲೇ ತೆರವುಗೊಳಿಸಲು ಸೂಚಿಸಲಾಗಿತ್ತು. ಅದರಂತೆ, ಗಾಂಧಿನಗರ ವಾರ್ಡ್ ಕಾರ್ಯಪಾಲಕ ಅಭಿಯಂತರರಾದ ಮುನಿಯಪ್ಪ ರವರು ಜೆ.ಸಿ.ಬಿ. ಯನ್ನು ಕರೆಸಿ ತಕ್ಷಣ ತೆರವುಗೊಳಿರುತ್ತಾರೆ. ಮತ್ತೆ ಈ ರೀತಿ ಒತ್ತುವರಿ ಮಾಡದಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಿರುತ್ತಾರೆ.
ವಾರ್ಡ್ ರಸ್ತೆಗಳ ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಳ್ಳಿ: ವಾರ್ಡ್ ಇಂಜಿನಿಯರ್ ಗಳು ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರಸ್ತೆಗಳನ್ನು ಪರಿಶೀಲನೆ ಮಾಡಿ, ಪಾದಚಾರಿ ಮಾರ್ಗಗಳ ಒತ್ತುವರಿ, ಬ್ಲಾಕೇಜ್, ಸ್ಲ್ಯಾಬ್ಸ್ ದುರಸ್ತಿ, ಕರ್ಬ್ಲ್ ಹಾಳಾಗಿರುವುದನ್ನು ಪಟ್ಟಿ ಮಾಡಿ, ದುರಸ್ತಿ ಕಾರ್ಯ ಕೈಗೊಳ್ಳಬೇಕು. ಅನಂತರ ವಲಯ ಜಂಟಿ ಆಯುಕ್ತರು ರ‍್ಯಾಂಡಮ್ ಆಗಿ ಕೆಲಸ ಸ್ಥಳಗಳಿಗೆ ಭೇಟಿ ದುರಸ್ತಿಪಡಿಸಿರುವ ಕುರಿತು ಖಾತರಿಪಡಿಸಿಕೊಳ್ಳಲು ಸೂಚಿಸಿದರು.
2.5 ಕಿ.ಮೀ ಪಾದಚಾರಿ ಮಾರ್ಗ ಪರಿಶೀಲನೆ: ಇಂದು ಮುಂಜಾನೆ 6.30 ರಿಂದ 8.30 ರವರೆಗೆ ಮೆಜೆಸ್ಟಿಕ್ ಸುತ್ತಮುತ್ತಲಿನ ಗುಬ್ಬಿ ತೋಟದಪ್ಪ ರಸ್ತೆ, ಧನ್ವಂತರಿ ರಸ್ತೆ, ಟ್ಯಾಂಕ್ ಬಂಡ್ ರಸ್ತೆ ಹಾಗೂ ಬಸ್ ಘಟಕ ಸೇರಿದಂತೆ 2.5 ಕಿ.ಮೀ ರಷ್ಟು ಪಾದಚಾರಿ ಮಾರ್ಗವನ್ನು ನಡಿಗೆಯ ಮೂಲಕ ಪರಿಶೀಲಿಸಿದ್ದು, ಇರುವ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಶ್ಚಿಮ ವಲಯ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಜಂಟಿ ಆಯುಕ್ತರಾದ ಸಂಗಪ್ಪ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.
ಮುಂಗಾರು ಪೂರ್ವ ಮಳೆ ಸಿದ್ಧತೆಗೆ ಸೂಚನೆ: ಇನ್ನು ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆಯೂ ಇದೇ ಸಂದರ್ಭದಲ್ಲಿ ಸೂಚನೆ ನೀಡಲಾಗಿದೆ. ಮುಂಗಾರು ಮಳೆ ಆರಂಭವಾಗುತ್ತಿದೆ. ನಗರದಲ್ಲಿ ಸಂಭವನೀಯ ಪ್ರವಾಹ, ಮಳೆ ಅನಾಹುತಗಳನ್ನು ತಡೆಗಟ್ಟಲು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ವಿಕಾಸಸೌಧದ ಕೊಠಡಿ ಸಂಖ್ಯೆ 317 ರಲ್ಲಿ ವಿವಿಧ ಇಲಾಖೆಗಳ ಜೊತೆ ನಡೆದ ಸಭೆಯನ್ನು ನಡೆಸಲಾಗಿತ್ತು.
ಈ ವೇಳೆ ನಗರದಲ್ಲಿ ಮಳೆಗಾಲದ ವೇಳೆ ಸದಾ ಸನ್ನದ್ಧರಾಗಿರಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತಗಾರರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications