12 Line Highway Project: ನೆಲಮಂಗಲ-ತುಮಕೂರು ಹೈವೇ ಕಾಮಗಾರಿ ಪೂರ್ಣ ಯಾವಾಗ? ಇಲ್ಲಿದೆ ಅಪ್ಡೇಟ್
Bengaluru New Highway Project: ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ನಗರದಲ್ಲಿ ಒತ್ತಡ ಕಡಿಮೆ ಮಾಡಲು ರಸ್ತೆ, ರೈಲ್ವೆ, ನಮ್ಮ ಮೆಟ್ರೋ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ತುಮಕೂರುವರೆಗೆ ಕೈಗೊಳ್ಳಲಾದ 12 ಪಥಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ವಿಳಂಬವಾಗುತ್ತಿದೆ. ಇದಕ್ಕೆ ಕಾರಣವೇನು, ಯೋಜನೆ ಪೂರ್ಣ ಯಾವಾಗ, ಎಲ್ಲಿಂದ ಎಲ್ಲಿಗೆ ಹೆದ್ದಾರಿ ನಿರ್ಮಾಣ?, ಇದರ ಪ್ರಯೋಜನಗಳ ವಿವರ ಇಲ್ಲಿದೆ.
ಬೆಂಗಳೂರಿನ ಮೇಲಾಗುತ್ತಿರುವ ದಟ್ಟಣೆ ಕಡಿಮೆ ಮಾಡಲು ಸರ್ಕಾರವು ಈಗಾಗಲೇ ತುಮಕೂರು ವರೆಗೆ ಮೆಟ್ರೋ ವಿಸ್ತರಣೆಗೆ ಅನುಮೋದನೆ ನೀಡಿದೆ. ಅಲ್ಲದೇ ಬೆಂಗಳೂರಿನಿಂದ ತುಮಕೂರುವರೆಗೆ ಇರುವ ಹಾಲಿ ರೈಲು ಮಾರ್ಗವನ್ನು ನಾಲ್ಕು ಪಥಗಳಿಗೆ ವಿಸ್ತರಿಸುವ ಯೋಜನೆ ಇದೆ. ಅದರೊಂದಿಗೆ ಕೇಂದ್ರ ಸರ್ಕಾರದ ಭಾರತ್ ಮಾಲಾ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಗೆ ನೆಲಮಂಗಲ-ತುಮಕೂರುವರೆಗೆ ಬೃಹತ್ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಈ ಮೂಲಕ ನಗರದಲ್ಲಿ ಒತ್ತಡ ಕಡಿಮೆ ಆಗಲು, ನಗರದಿಂದ ಹೊರ ಹೋಗುವ ಪ್ರಯಾಣಿಕರಿಗೆ, ವಾಹನಗಳಿಗೆ ಸಲೀಸಾಗುವಂತೆ ಈ ಯೋಜನೆಗಳನ್ನು ರೂಪಿಸಲಾಗಿದೆ.

₹2,000 ಕೋಟಿ ವೆಚ್ಚದ ಬೃಹತ್ ಯೋಜನೆ
ಸುಮಾರು ₹2,000 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ 44 ಕಿಲೋ ಮೀಟರ್ ಉದ್ದದ ನೆಲಮಂಗಲ-ತುಮಕೂರು ಹೆದ್ದಾರಿಯು 12 ಲೈನ್‌ಗಳನ್ನು ಹೊಂದಿರಲಿದೆ. ಪಥಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಶನಿವಾರ ಸಂಸದ ಡಾ.ಕೆ.ಸುಧಾಕರ್ ಅವರು ಪರಿಶೀಲಿಸಿದರು. ಇದೇ ವೇಳೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳಿಗೆ ಮಹತ್ವ ಸೂಚನೆ ನೀಡಿದರು.
2027ಕ್ಕೆ ಹೆದ್ದಾರಿ ಯೋಜನೆ ಪೂರ್ಣ ಭರವಸೆ
ಉತ್ತರ ಕರ್ನಾಟಕ ಸೇರಿದಂತೆ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹದ್ದಾರಿ ಇದಾಗಿದೆ. ಆದರೆ ಕಾಮಗಾರಿ ಮಾತ್ರ ನಿರೀಕ್ಷಿತ ವೇಗದಲ್ಲಿ ಸಾಗದೇ ವಿಳಂಬವಾಗಿದ್ದ ಕುರಿತು ಸಂಸದರು ಪ್ರಶ್ನಿಸಿದ್ದಾರೆ. ಅದಕ್ಕೆ ಅಧಿಕಾರಿಗಳು, ಭೂಸ್ವಾಧೀನ ಪ್ರಕ್ರಿಯೆಯಲ್ಲಿದ್ದ ತೊಡಕುಗಳಿಂದ ಕಾಮಗಾರಿ ವಿಳಂಬವಾಗಿದೆ. 2027ರ ಮಾರ್ಚ್ ತಿಂಗಳೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಮಾಹಿತಿ ನೀಡಿದರು.
ಅಪಘಾತವಾಗದಂತೆ ಈ ಕ್ರಮ ಕೈಗೊಳ್ಳಿ..
ನಿರ್ಮಾಣ ಹಂತದಲ್ಲಿರುವ ಈ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ. ಈ ನಿಟ್ಟಿನಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ, ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು. ಅಗತ್ಯ ಎಚ್ಚರಿಕೆ ಫಲಕಗಳು, ಪೇಂಟಿಂಗ್ ಹಾಗೂ ಸುರಕ್ಷತಾ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು. ಅಲ್ಲದೇ ಅಪಘಾತ ನಿಯಂತ್ರಣ ಕ್ರಮಗಳನ್ನು ಕೂಡ ಕೈಗೊಳ್ಳಬೇಕು ಎಂದು ಸಂಸದರು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರು.
ಗ್ರಾಮಗಳಿಗೆ ಅಂಡರ್ ಪಾಸ್, ಸರ್ವಿಸ್ ರಸ್ತೆ ನಿರ್ಮಾಣ ಕುರಿತಂತೆ ಅಧಿಕಾರಿಗಳಿಗೆ ಅಗತ್ಯ ಸಲಹೆ ನೀಡಿ ಒಟ್ಟಾರೆ ಈ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಸದ ಸುಧಾಕರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಹೆದ್ದಾರಿಯಿಂದ ಪ್ರಯೋಜನವೇನು?
ಬೆಂಗಳೂರಿನಿಂದ ಉತ್ತರ ಕರ್ನಾಟಕ, ಮಲೆನಾಡಿನ ಶಿವಮೊಗ್ಗ ಹಾಗೂ ಮುಂಬೈ, ಗೋವಾ ಕಡೆಗೆ ಹೋಗುವವರಿಗೆ ಲಕ್ಷಾಂತರ ವಾಹನಗಳಿಗೆ ಶೀಘ್ರ ಸಂಚಾರಕ್ಕೆ ಸಹಾಯವಾಗುತ್ತದೆ. ನೆಲಮಂಗಲದಲ್ಲಿ ಹಬ್ಬಗಳ ಸಂದರ್ಭದಲ್ಲಿ, ವಾರಾಂತ್ಯ ಸಂಚಾರ ಸರಾಗವಾಗುತ್ತದೆ. ವಾಹನಗಳು ದಟ್ಟಣೆಯಲ್ಲಿ ನಿಲ್ಲುವುದು ತಪ್ಪುತ್ತದೆ. ನಗರದಿಂದ ಬಸ್, ಕಾರು ಇತರ ವಾಹನಗಳು ದಾಬಾಸ್ ಪೇಟೆ ವರೆಗೆ ಹೋಗಲು ಸುಮಾರು ಎರಡು ಗಂಟೆ ಹಿಡಿಯುತ್ತದೆ. ಈ 12 ಪಥದ ಹೆದ್ದಾರಿ ನಿರ್ಮಾಣವಾದರೆ ಬೆಂಗಳೂರು ಹಾಗೂ ಇತರ ಊರುಗಳಿಗೆ ಸಂಪರ್ಕ ಮತ್ತಷ್ಟು ಪರಿಣಾಮಕಾರಿ, ಸಂಚಾರ ಸರಳವಾಗಲಿದೆ. ಸಂಚಾರ ಸಮಯ ಇಳಿಕೆ ಆಗುತ್ತದೆ.












Click it and Unblock the Notifications