ಬೆಂಗಳೂರಿನಲ್ಲಿ ಏ.8ರಿಂದ 18ರವರೆಗೆ ರಾಷ್ಟ್ರೀಯ 'ಸಂಜೀವಿನಿ ಸರಸ್' ಮೇಳ
ಬೆಂಗಳೂರು, ಏಪ್ರಿಲ್ 7: ಮಹಿಳೆಯರ ಆರ್ಥಿಕ ಸಬಲೀಕರಣದ ಆಶಯವನ್ನುಳ್ಳ ರಾಷ್ಟ್ರೀಯ 'ಸಂಜೀವಿನಿ ಸರಸ್ ಮೇಳ'ವು ಏ.8ರಿಂದ 18ರವರೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಸಂಜೀವಿನಿ ಸರಸ್ ಮೇಳವನ್ನು ಏ.8ರಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, 300ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಸಂಯುಕ್ತ ಆಶ್ರಯದಲ್ಲಿ 'ಸಂಜೀವಿನಿ ಸರಸ್' ಮೇಳ ನಡೆಯುತ್ತಿದ್ದು, ಇದರಲ್ಲಿ ಅಖಿಲ ಭಾರತ ಮಟ್ಟದ ಉತ್ಪನ್ನಗಳು ಗ್ರಾಹಕರಿಗೆ ಸಿಗಲಿವೆ. ರಾಷ್ಟ್ರೀಯ ಗ್ರಾಮೀಣ ಮತ್ತು ನಗರ ಜೀವನೋಪಾಯ ಅಭಿಯಾನದಡಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಇದೇ ಸಂದರ್ಭದಲ್ಲಿ ಅವರು ಮೇಳದ ಲಾಂಛನವನ್ನು ಅನಾವರಣಗೊಳಿಸಿದರು.
ಮುಖ್ಯವಾಗಿ ಈ ಮೇಳದಲ್ಲಿ ಕೈಮಗ್ಗದ ಉತ್ಪನ್ನಗಳು, ಕರಕುಶಲ ವಸ್ತುಗಳು, ಬುಡಕಟ್ಟು ಮತ್ತು ಸಾವಯವ ಉತ್ಪನ್ನಗಳು, ಅಲಂಕಾರಿಕ ವಸ್ತುಗಳು, ಮಣ್ಣಿನಿಂದ ತಯಾರಿಸಿದ ಪಾತ್ರೆಗಳು, ಮರದಿಂದ ಮಾಡಿದ ವಸ್ತುಗಳು, ಬಿದಿರು ಮತ್ತು ಸೆಣಬಿನ ವಸ್ತುಗಳು, ಸಾಂಬಾರ ಪದಾರ್ಥಗಳು, ಸಾಂಪ್ರದಾಯಿಕ ವಸ್ತ್ರಗಳು, ಕಲಾಕೃತಿಗಳು, ವರ್ಣಚಿತ್ರಗಳು, ಟೆರ್ರಾಕೋಟ ಮತ್ತು ಪಾರಂಪರಿಕ ಉತ್ಪನ್ನಗಳು ಹಾಗೂ ಸಂಸ್ಕರಿತ ಆಹಾರ ಪದಾರ್ಥಗಳು ಮುಂತಾದವು ಸಿಗಲಿವೆ ಎಂದು ಸಚಿವರು ಮಾಹಿತಿ ನೀಡಿದರು.

ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಇಲ್ಲಿ ತಮ್ಮ ಕೌಶಲಗಳನ್ನು ಪ್ರದರ್ಶಿಸುವ ಜತೆಗೆ ಗ್ರಾಹಕರೊಂದಿಗೆ ನೇರ ಸಂವಾದ ಮಾಡಬಹುದು. ಅಲ್ಲದೆ, ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣ, ಕಾರ್ಪೊರೇಟ್ ಪ್ರಮುಖರ ಮಾತುಕತೆ ಸಿಎಸ್ಆರ್ ದುಂಡು ಮೇಜಿನ ಸಭೆಗಳು ಮತ್ತು ನವೋದ್ಯಮ ಹಾಗೂ ಎನ್‌ಜಿಒ ಅಧಿವೇಶನಗಳನ್ನು ಕೂಡ ಏರ್ಪಡಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಉದ್ಯಮಶೀಲ ಮಹಿಳೆಯರಿಗೆ ಸರಕಾರದ ನಾನಾ ಇಲಾಖೆಗಳು ಮತ್ತು ಬ್ಯಾಂಕುಗಳು ವಿವಿಧ ಸಾಲ ಸೌಲಭ್ಯ ಹಾಗೂ ಸೇವಾ ಉಪಕ್ರಮಗಳನ್ನು ಹೊಂದಿವೆ. ಮೇಳದಲ್ಲಿ ಈ ಬಗ್ಗೆಯೂ ಮಾಹಿತಿ ಒದಗಿಸುವ ಏರ್ಪಾಡು ಕೂಡ ಮಾಡಲಾಗಿದೆ ಎಂದು ಕೌಶಲಾಭಿವೃದ್ಧಿ ಸಚಿವರು ಮಾಹಿತಿ ನೀಡಿದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಮಂಜುಶ್ರೀ, ಜಂಟಿ ನಿರ್ದೇಶಕಿ ಸ್ವರೂಪಾ, ಉಪ ನಿರ್ದೇಶಕಿ ನಯನಾ ಮತ್ತಿತರರು ಇದ್ದರು.
Recommended Video













Click it and Unblock the Notifications