ಬೆಂಗಳೂರಿಗೆ ನ.11ಕ್ಕೆ ಪ್ರಧಾನಿ ಆಗಮನ: ಸೂಕ್ತ ಸಂಚಾರ ವ್ಯವಸ್ಥೆಗೆ ಸಿಎಂ ಸೂಚನೆ
ಬೆಂಗಳೂರು, ಅಕ್ಟೋಬರ್ 20: ವಿವಿಧ ಕಾಮಗಾರಿ ಲೋಕಾರ್ಪಣೆಗೊಳಿಸಲು ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಸಂಬಂಧ ಸಾರ್ವಜನಿಕ ಸಂಚಾರಕ್ಕೆ ತೊಡಕಾಗದಂತೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ನವೆಂಬರ್ 11 ರಂದು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಂಗಳೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಕೆಐಎ ಟರ್ಮಿನಲ್ 2 ಮತ್ತು ಥೀಮ್‌ಪಾರ್ಕ್ ಅನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾದ ನಾಡಪ್ರಭು ಕೆಂಪೇಗೌಡರ ಬೃಹತ್ 108 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರಧಾನಿಗಳು ಅನಾವರಣಗೊಳಿಸಲಿದ್ದಾರೆ.
ಪ್ರಧಾನಿಗಳು ಭಾಗವಹಿಸುವ ಸಮಾರಂಭ ಕುರಿತು ಅಗತ್ಯ ಸಿದ್ಧತೆಗಳ ಬಗ್ಗೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರ್ವಭಾವಿ ಸಭೆ ನಡೆಸಿದರು. ಈ ಕಾರ್ಯಕ್ರಮದಿಂದ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಯಾವುದೇ ತೊಂದರೆ ಆಗದಂತೆ ಕಾರ್ಯಕ್ರಮ ಆಯೋಜಿಸಬೇಕು. ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅವರು ಸೂಚಿಸಿದರು.

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಅವರ ಪ್ರತಿಮೆ ಲೋಕಾರ್ಪಣೆಗೂ ಮುನ್ನ ಎಲ್ಲ ಜಿಲ್ಲೆಗಳಿಂದ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸುವ 'ಬನ್ನಿ ನಾಡ ಕಟ್ಟೋಣ' ಎಂಬ ಅಭಿಯಾನ ನಾಳೆಯಿಂದ (ಶುಕ್ರವಾರ) ಪ್ರಾರಂಭವಾಗಲಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮ ಯಶಸ್ವಿಗೆ ಸಹಕಾರ ಪಡೆಯಿರಿ
ಈ ಹಿನ್ನೆಲೆಯಲ್ಲಿ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಪಿಡಿಓಗಳ ಸಹಕಾರ ಪಡೆಯುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು.
ಮೃತ್ತಿಕೆ ಸಂಗ್ರಹಿಸಲು 20 ರಥಗಳನ್ನು (ವಾಹನ) ವ್ಯವಸ್ಥೆ ಮಾಡಲಾಗಿದ್ದು, ಅವುಗಳ 15 ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ, ಮೃತ್ತಿಕೆ ಸಂಗ್ರಹಿಸಲಿವೆ. ಮೃತ್ತಿಕೆ ಸಂಗ್ರಹ ಅಭಿಯಾನವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನಡೆಸಬೇಕಿದೆ. ಸಂಚಾರ, ಅಗತ್ಯ ಕ್ರಮ, ಅಭಿಯಾನದ ಮೃತ್ತಿಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾಣ ನಿಲ್ದಾನ ತಲುಪುವವರೆಗೂ ಅಗತ್ಯ ಎಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಆರ್. ಅಶೋಕ, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಡಾ.ಕೆ.ಸುಧಾಕರ್, ಬಿ.ಎ.ಬಸವರಾಜ, ಕೆ. ಗೋಪಾಲಯ್ಯ, ಕೆ.ಸಿ. ನಾರಾಯಣ ಗೌಡ, ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಕೃಷ್ಣಪ್ಪ, ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications