ಎಲೆಕ್ಟ್ರಾನಿಕ್ ಸಿಟಿ ಸಮೀಪ ಮೋದಿ ಮಿಂಚು
ಬೆಂಗಳೂರು, ಏ.8 : ದೇವರ ನಾಡು ಕೇರಳದಲ್ಲಿ ಭಾರತ್ ವಿಜಯ್ ಸಮಾವೇಶ ಮುಗಿಸಿಕೊಂಡು ಕರ್ನಾಟಕದ ಕೊಪ್ಪಳ, ಬಾಗಲಕೋಟೆ ಹಾಗೂ ಮೈಸೂರಿನಲ್ಲಿ ಚುಟುಕಾಗಿ ಭಾಷಣ ಮುಗಿಸಿದ ನಂತರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಭಾಷಣ ಮಾಡುತ್ತಾ, ಐಟಿ ಕಾಯ್ದೆ ತಂದಿದ್ದು ಅಟಲ್ ವಾಜಪೇಯಿ ಸರ್ಕಾರ ಎಂಬುದು ರಾಹುಲ್ ಮರೆತ್ತಿದ್ದಾರೆ ಎಂದು ತರಾಟೆ ತೆಗೆದುಕೊಂಡರು.
ನಿಗದಿತ ವೇಳೆಗಿಂತ ಮೋದಿ ಅವರು ತಡವಾಗಿ ಬೆಂಗಳೂರಿಗೆ ಆಗಮಿಸಿದ್ದು, ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೊಸ ರೋಡಿನ ಬಳಿಯ ಮೈದಾನದಲ್ಲಿ ಮೋದಿ ಅವರು ಭಾರತ್ ವಿಜಯ್ ಸಮಾವೇಶದಲ್ಲಿ ಪಾಲ್ಗೊಂಡರು.

ಭಾರತ್ ವಿಜಯ್ ಸಮಾವೇಶದ ಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶಗಳು:
* ಐಟಿ ಕಾಯ್ದೆ, ಆಧಾರ್ ಕಾರ್ಡ್, ಉದ್ಯೋಗ ಸಮಸ್ಯೆ, ಸಾಫ್ಟ್ ವೇರ್ ರಫ್ತು, ಕೌಶಲ್ಯ ಅಭಿವೃದ್ಧಿ, ಬ್ರಾಂಡ್ ಇಂಡಿಯಾ, ದೇಶಿ ಉತ್ಪನ್ನಗಳ ಬಳಕೆ, ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ತಮ್ಮ ಭಾಷಣದಲ್ಲಿ ಮೋದಿ ಹೆಚ್ಚಿನ ಒತ್ತು ನೀಡಿದರು.
* ಆಧಾರ್ ಕಾರ್ಡ್ ದುರ್ಬಳಕೆ ರಾಷ್ಟ್ರೀಯ ಸುರಕ್ಷತೆ ಬಗ್ಗೆ ನಾನು ಕೇಳಿದ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸಾವಿರಾರು ಕೋಟಿ ವ್ಯರ್ಥ ಮಾಡಿಬಿಟ್ಟಿದ್ದಾರೆ.
* * ಕಾಂಗ್ರೆಸ್ ದುಃಸ್ಥಿತಿ ಹೇಗಿದೆ ಎಂದರೆ ಆಧಾರ ರಹಿತ ಸಾವಿರಾರು ಕೋಟಿ ಬೆಲೆ ಬಾಳುವ ಅಭ್ಯರ್ಥಿಯನ್ನು ಈ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ.
* ದೇಶಕ್ಕೆ ಶಾಸಕರಿಗಿಂತ ಸೇವಕರ ಅವಶ್ಯಕತೆ ಇದೆ. ನಾನು ಸೇವಕನಾಗಿ ನಾನು ನಿಮ್ಮ ಆಶೀರ್ವಾದ ಬೇಡುತ್ತಿದ್ದೇನೆ. ನನ್ನನ್ನು ಒಮ್ಮೆ ಹರಿಸಿ ನಾನು ನಿಮ್ಮ ನಿರಾಶೆಗೊಳಿಸುವುದಿಲ್ಲ. ಕೆಲ ತಿಂಗಳುಗಳ ಅಧಿಕಾರ ಕೊಟ್ಟು ನೋಡಿ.
* ಎನ್ ಡಿಎ ಅಧಿಕಾರ ಅವಧಿಯಲ್ಲಿ ಸಾಫ್ಟ್ ವೇರ್ ರಫ್ತು ಪ್ರಮಾಣ ಶೇ 40ರಷ್ಟಿತ್ತು. ಯುಪಿಎ 1 ರಲ್ಲಿ ಇದ್ದು ಶೇ 30 ಹಾಗೂ ಯುಪಿಎ 2 ರಲ್ಲಿ ಶೇ 9ರಷ್ಟು ಕುಸಿಯಿತು.
* ತಮ್ಮ ತಂದೆ ಐಟಿ ಕ್ರಾಂತಿ ತಂದರು ಎಂದು ಷೆಹಜಾದ(ರಾಹುಲ್ ಗಾಂಧಿ) ಅವರು ಹೇಳಿಕೊಳ್ಳುತ್ತಾರೆ. ಆದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಐಟಿ ಕಾಯ್ದೆ ಮಾಡಿದ್ದು ಎಂಬುದು ಅವರಿಗೆ ಮರೆತು ಹೋಗಿರಬೇಕು.
* ನಾನು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಏಕೆ ಆಮದು ಮಾಡಿಕೊಳ್ಳಬೇಕು. ನಮ್ಮಲ್ಲಿ ಸ್ವಂತವಾಗಿ ಹೊಸ ಉತ್ಪನ್ನಗಳನ್ನು ನೀಡುವ ಶಕ್ತಿ ಇಲ್ಲವೇ? ದೇಶಿ ಉತ್ಪನ್ನಗಳ ಬಳಕೆ ಮಾಡುವುದು ಅವಶ್ಯವಲ್ಲವೇ?
* ಸೋನಿಯಾ ಹಾಗೂ ಷೆಹಜಾದ ಅವರ ಟೇಪ್ ರೆಕಾರ್ಡರ್ ಕೇಳಿರುತ್ತೀರಿ.ಒಮ್ಮೆ ನನ್ನ ಟ್ರ್ಯಾಕ್ ರೆಕಾರ್ಡ್ ತೆಗೆದುನೋಡಿ.
ಮೋದಿ ಅವರಿಗೆ ಪೇಟ ಇಟ್ಟು, ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು. ಗಂಧದ ಹಾರವನ್ನು ಮೋದಿ ಸ್ವೀಕರಿಸಲಿಲ್ಲ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ಮೋದಿ ಅವರಿಗೆ ಬೃಹತ್ ಅಂಜನೇಯ ಮೂರ್ತಿ ನೀಡಿದರು. ಸಮಾವೇಶದಲ್ಲಿ ಬೆಂಗಳೂರಿನ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್, ಬೆಂಗಳೂರು ಉತ್ತರ ಕ್ಷೇತ್ರದ ಡಿವಿ ಸದಾನಂದ ಗೌಡ, ಗ್ರಾಮಾಂತರ ಕ್ಷೇತ್ರದ ಮುನಿರಾಜು, ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಉಪಸ್ಥಿತರಿದ್ದರು. ಇದೇ ವೇಳೆ ಡಾ. ಎಂಆರ್ ವಿ ಪ್ರಸಾದ್ ಅವರು ಬಿಜೆಪಿ ಸೇರ್ಪಡೆಗೊಂಡರು. ಭಾರತ್ ವಿಜಯ್ ಸಮಾವೇಶದ ವಿಡಿಯೋ ಇಲ್ಲಿದೆ ನೋಡಿ...


Click it and Unblock the Notifications
