Namma Metro: ಮೆಟ್ರೋ ಮಾರ್ಗದಲ್ಲಿ ಮಳೆನೀರು ಕೊಯ್ಲು ಅನುಷ್ಠಾನಕ್ಕಾಗಿ ಟೆಂಡರ್ ಆಹ್ವಾನ
ಬೆಂಗಳೂರು, ಏಪ್ರಿಲ್ 01: ಬೆಂಗಳೂರಿನಲ್ಲಿ ಸುಮಾರು 73 ಕಿಲೋ ಮೀಟರ್ ಜಾಲ ಹೊಂದಿರುವ ನಮ್ಮ ಮೆಟ್ರೋ (Namma Metro) ಒಂದೆರಡು ಕಡೆಗಳಲ್ಲಿ ಬಿಟ್ಟರೆ ಉಳಿದೆಲ್ಲು ಮಳೆ ನೀರು ಕೊಯ್ಲು ಅಳವಡಿಕೆ ಮಾಡಿಕೊಂಡಿಲ್ಲ. ಇದೀಗ ಮಳೆ ನೀರನ್ನು ಭೂಮಿಗೆ ಹರಿಸಿ ಅಂತರ್ಜಲ ಹೆಚ್ಚಿಸಲು ಮುಂದಾಗಿರುವ BMRLC ಟೆಂಡರ್ ಆಹ್ವಾನಿಸಿದೆ.
ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗುತ್ತಿದೆ. ಕಾವೇರಿ ನೀರು ಸರಬರಾಜು ಆದರೂ, ಅಂತರ್ಜಲ ಕುಸಿತದಿಂದಲೂ ಹಲವೆಡೆ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಹೀಗಾಗಿ ಮಳೆ ನೀರು ಕೊಯ್ಲು ಸಾಮರ್ಥ್ಯ ಹೆಚ್ಚಳಕ್ಕೆ ಮುಂದಾಗಿದೆ. ಈ ಸಂಬಂಧ ಮಳೆನೀರು ಕೊಯ್ಲು ಜಾರಿಗೆ ತರಲು ಯೋಜನೆ ಅನುಷ್ಠಾನ ಸಂಬಂಧ 65 ಕೋಟಿ ರೂಪಾಯಿ ಮೊತ್ತದ ಟೆಂಡರ್ ಆಹ್ವಾನಿಸಲಾಗಿದೆ.

ಹಾಲಿ ಮಾರ್ಗದಲ್ಲಿ ಮಳೆ ನೀರು ಕೊಯ್ಲು
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಹಾಲಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಈ ಮುಂದಿನ ದಿನಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಜಾರಿಗೆ ತರಲಿದೆ. ಈ ಮೊದಲು 2012ರಲ್ಲಿ ಬೈಯಪ್ಪನಹಳ್ಳಿ ಮತ್ತು ಮಹಾತ್ಮಾಗಾಂಧಿ ರಸ್ತೆ ಮಧ್ಯೆ ಈ ಪದ್ಧತಿ ಜಾರಿ ಆಗಿತ್ತು.
ಇಲ್ಲಿ ಮೆಟ್ರೋ ಮಾರ್ಗದ ಮೇಲೆ ಬೀಳುವ ಮಳೆ ನೀರು ಕಾಂಕ್ರೀಟ್ ಪಿಲ್ಲರ್ ಒಳಗೆ ಅಳಡಿಕೆಯಾದ ಪೈಪಿನೊಳಗೆ ಹಾದು ಇಂಗುಗುಂಡಿಗೆ ಹೋಗುತ್ತದೆ. ಇಲ್ಲಿ ಮೂರು ಮೀಟರ್ ಸುತ್ತಳತೆ ಇಂಗು ಗುಂಡಿಮಾಡಲಾಗಿದೆ. ಪ್ರತಿ ಟ್ಯಾಂಕ್ 3000 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದೆ.
ಕಾಂಕ್ರೀಟ್ ಪಿಲ್ಲರ್ ನಲ್ಲಿ ಅಳವಡಿಸಲಾದ 200 ಮಿಲಿ ಮೀಟರ್ ಗಾತ್ರದ ಪೈಪ್‌ನಿಂದ ಬರುವ ಮಳೆ ನೀರು ಈ ಟ್ಯಾಂಕ್ ನೀರು ಸೇರಿ, ಹೆಚ್ಚುವರಿ ನೀರು ಇಂಗುಗುಂಡಿಗೆ ಸೇರುತ್ತದೆ.

ವಯಡಕ್ಟ್‌ನಿಂದ ಮಳೆ ನೀರು ಇಂಗುಗುಂಡಿಗೆ
ನಮ್ಮ ಮೆಟ್ರೋ ಹಾಲಿ ಜಾಲದಲ್ಲಿ ಒಟ್ಟು 60ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಿವೆ. ಸಮೀಕ್ಷೆಯೊಂದರ ಪ್ರಕಾರ, ಮೆಟ್ರೋ ವಯಡಕ್ಟ್‌ನಿಂದ ಮಳೆ ನೀರನ್ನು ಇಂಗುಗುಂಡಿಗೆ ಹರಿಸಬಹುದಾಗಿದೆ. ನಮ್ಮ ಮೆಟ್ರೋ ಹಾಲಿ ಮಾರ್ಗದ ಎಲ್ಲ ವಯಡಕ್ಟ್‌ಗಳಿಂದ ನೀರು ಭೂಮಿಗೆ ಇಳಿಸಲು ಆರಂಭಿಸಿದರೆ, ವಾರ್ಷಿಕವಾಗಿ ಲಕ್ಷಾಂತರ ಲೀಟರ್ ನೀರನ್ನು ಸಂಗ್ರಹಿಸಬಹುದು.
ಭವಿಷ್ಯಕ್ಕೆ ಮಳೆನೀರು ಕೊಯ್ಲು ಆಸರೆ
ಕಾಂಕ್ರೀಟ್ ರಸ್ತೆಗಳೇ ತುಂಬಿರುವ ಈ ಬೆಂಗಳೂರಿನಲ್ಲಿ ಅಂತರ್ಜಲ ಕುಸಿದಿದೆ. ಕರೆ ಕಟ್ಟೆಗಳು ಬತ್ತಿ ಹೋಗಿವೆ, ಒತ್ತುವರಿ ಆಗಿವೆ. ಬೋರ್ ವೆಲ್ ನಲ್ಲಿ ನೀರು ಕಡಿಮೆ ಆಗುತ್ತಿದೆ. ಇಂಗುಗುಂಡಿ ಮೂಲಕ ಮಳೆ ನೀರನ್ನು ಇಂಗಿಸಿದರೆ, ಅಂತರ್ಜಲ ಹೆಚ್ಚಾಗುತ್ತದೆ. ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾದಾಗ ಬೋರ್ವೆಲ್ ಮೂಲಕ ನೀರು ಪಡೆಯಬಹುದು. ಮುಖ್ಯವಾಗಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ತಡೆಯಲು ಮಳೆನೀರು ಕೊಯ್ಲು ಮಹತ್ವದ ಮಾರ್ಗ ಎನ್ನಲಾಗಿದೆ.
ಆದ್ದರಿಂದ ನಮ್ಮ ಮೆಟ್ರೋ ರೈಲು ನಿಲ್ದಾಣಗಳನ್ನು ಬಿಟ್ಟು ಎತ್ತರಿಸಿದ ಮೆಟ್ರೋ ಮಾರ್ಗಗಳ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಲು, ಮಳೆ ನೀರು ಕೊಯ್ಲ ಮಾಡಲು ಮುಂದಾಗಿದೆ. ಈ ಸಂಬಂಧ ಅನುಷ್ಠಾನಕ್ಕಾಗಿ ಟೆಂಡರ್ ಆಹ್ವಾನಿಸಿದೆ. ಎಲ್ಲವು ಅಂದುಕೊಂಡಂತೆ ಆದರೆ ಮುಂದಿನ ಮಳೆಗಾಲದಿಂದಲೇ ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರು ಸಂಗ್ರಹ, ಇಂಗಿಸುವ ಕಾರ್ಯಕ್ಕೆ ಚಾಲನೆ ಸಿಗುವ ನಿರೀಕ್ಷೆ ಇದೆ.












Click it and Unblock the Notifications