Namma Metro: ಬೇಗ..ಬೇಗ ಕಟ್ರೋ ಎನ್ನುವುದರ ಮಧ್ಯೆ ಸ್ವಲ್ಪ ತಡಿರಿ ಎನ್ನುವ ಕೂಗು...
Namma Metro: ನಮ್ಮ ಬೆಂಗಳೂರು ಮೆಟ್ರೋ ಬೇಗ ಬೇಗ ಕಟ್ರೋ ಅಂತ ಜನ ಅಂತಿದ್ರೆ. ಇರಿ ಇರಿ ಸ್ವಲ್ಪ ಇದನ್ನೂ ನೋಡಿಕೊಂಡು ಮೆಟ್ರೋ ಕಟ್ರೋ ಎನ್ನುತ್ತಿದ್ದಾರೆ ಪರಿಸರವಾದಿಗಳು. ಬೆಂಗಳೂರಿನಲ್ಲಿ ಈಗಾಗಲೇ ಎರಡು ಹಂತದ ಮೆಟ್ರೋ ಅಭಿವೃದ್ಧಿ ಕಾರ್ಯಗಳು ನಡೆದಿದ್ದು. ಮೂರನೇ ಹಂತದ ಮೆಟ್ರೋ ಕಾಮಗಾರಿಗೆ ಸಿದ್ಧತೆ ನಡೆದಿದೆ. ಆದರೆ, ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಈ ಕಾರಣಕ್ಕೆ ವಿರೋಧ ವ್ಯಕ್ತವಾಗಿದೆ.
ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಬರೋಬ್ಬರಿ 2,000 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಶುದ್ಧಗಾಳಿಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ಮೆಟ್ರೋ ಕಾಮಗಾರಿ ವೇಳೆ ಮರಗಳನ್ನು ಕಡಿದರೆ ಭಾರೀ ಅನಾಹುತ ಎದುರಿಸಬೇಕಾಗುತ್ತದೆ ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ. ಹೊರ ವರ್ತುಲ ರಸ್ತೆಯಲ್ಲಿ ನಡೆಯವ ಮೆಟ್ರೋ ಕಾಮಗಾರಿಗಾಗಿ 2,174 ಮರಗಳನ್ನು ಕತ್ತರಿಸಬೇಕಾಗುತ್ತದೆ. ಇದರಿಂದ ಈ ಭಾಗದಲ್ಲಿ ಶುದ್ಧಗಾಳಿಯ ಕೊರತೆ ಉಂಟಾಗಲಿದೆ ಎಂದು ಎಚ್ಚರಿಸಲಾಗಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಸಂಶೋಧಕರು ಪ್ರಕಟಿಸಿರುವ ವರದಿಯಲ್ಲಿ ಮೆಟ್ರೋ ಕಾಮಗಾರಿಯಿಂದ ಎದುರಾಗುವ ಸವಾಲಿನ ಬಗ್ಗೆ ಚರ್ಚಿಸಲಾಗಿದೆ.

ವಾತಾವರಣದ ಮೇಲೆ ಪರಿಣಾಮ
ಈ ಮಾರ್ಗದಲ್ಲಿ ಮೆಟ್ರೋ ನಿಲ್ದಾಣವನ್ನು ನಿರ್ಮಾಣ ಮಾಡಲು 56 ಜಾತಿಯ 2,174 ಮರಗಳಿಗೆ ಕೊಡಲಿ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನ ವಾತಾವರಣದ ಮೇಲೆ ಭಾರೀ ಪರಿಣಾಮ ಬೀರಲಿದೆ. ಈಗಾಗಲೇ ಬೆಂಗಳೂರಿನಲ್ಲಿ ವಾತಾವರಣ ಹದಗೆಡುತ್ತಿದೆ. ಕಳೆದ ವರ್ಷ (2023ನೇ ಸಾಲಿನಲ್ಲಿ) ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿತ್ತು. ಇದು ಹಲವು ವರ್ಷಗಳಲ್ಲಿ ಮೊದಲಾಗಿತ್ತು. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯಲ್ಲಿ ಮಳೆಯಾಗುವುದು, ಮಳೆಗಾಲದಲ್ಲಿ ಬಿಸಿನ ತೀವ್ರತೆ ಹೆಚ್ಚುವುದು ಸೇರಿದಂತೆ ಹಲವು ಪ್ರಕೃತಿ ಸಮಸ್ಯೆಗಳು ಎದುರಾಗುತ್ತಿವೆ. ಇದೀಗ ಇರುವ ಮರಗಳನ್ನೂ ಕಡಿದರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಕೃತಿ ವಿಕೋಪದಂತಹ ಪರಿಸ್ಥಿಗೆ ಎದುರುಗೊಳ್ಳಬೇಕಾಗುತ್ತದೆ ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ.
ಇಂಗಾಲದ ಡೈಆಕ್ಸೈಡ್ ಹೆಚ್ಚಾಗಲಿದೆ
ಇನ್ನು ಉದ್ದೇಶಿತ ಮೆಟ್ರೋ ಕಾಮಗಾರಿ ಮಾರ್ಗದಲ್ಲಿ ಈಗಾಗಲೇ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗಿದೆ. ವಾಹನ ಸಂಚಾರ ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗಿದೆ. ಇದೀಗ ಈ ಪ್ರಮಾಣದಲ್ಲಿ ಮರಗಳನ್ನು ಕಡಿದರೆ, ಆಮ್ಲಜನಕದಲ್ಲಿ ಏರುಪೇರಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ, ಮೆಟ್ರೋ ಕಾಮಗಾರಿ ವೇಳೆ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಹಾಗೂ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಇದೀಗ ಕೇಂದ್ರ ಸರ್ಕಾರವು ಅನುಮೋದನೆ ನೀಡಿರುವ ಕಾರಿಡಾರ್-1ರಲ್ಲಿ (ಮೂರನೇ ಹಂತದ ನಮ್ಮ ಮೆಟ್ರೋ ಯೋಜನೆ) ಜೆ.ಪಿ.ನಗರ 4ನೇ ಹಂತದಿಂದ ಪ್ರಾರಂಭವಾಗಿ ಹೊರವರ್ತುಲ ರಸ್ತೆ ಮಾರ್ಗವಾಗಿ ಹೆಬ್ಬಾಳದ ಕೆಂಪಾಪುರ ತಲುಪಲಿದೆ. ಅಂದರೆ 32.15 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಮುಂದಿನ ಕೆಲವೇ ವರ್ಷದಲ್ಲಿ ನಿರ್ಮಾಣವಾಗಲಿದೆ. ಒಟ್ಟು 22 ಮೆಟ್ರೋ ನಿಲ್ದಾಣಗಳು ಇರಲಿವೆ.
ಜೆ.ಪಿ.ನಗರ 4ನೇ ಹಂತ-ಕೆಂಪಾಪುರ ಮೆಟ್ರೋ ಮಾರ್ಗದಿಂದ ಕೃಷ್ಣರಾಜಪುರ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದೊಂದಿಗೆ ಸಂಪರ್ಕ ಕಲ್ಪಿಸಲಿದೆ. ಇದರೊಂದಿಗೆ ಹಸಿರು ಬಣ್ಣದ ಮಾರ್ಗಕ್ಕೂ ಈ ಉದ್ದೇಶಿತ ಮೆಟ್ರೋದಿಂದ ಸಂಪರ್ಕ ಕಲ್ಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದರೊಂದಿಗೆ ಸಾರಕ್ಕಿ ಜಂಕ್ಷನ್‌ನಲ್ಲೂ ಇಂಟರ್‌ಚೇಂಜ್ ನಿಲ್ದಾಣ ಇರಲಿದೆ ಎಂದು ಹೇಳಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ವಿಸ್ತೃತ ಮಾಹಿತಿ ಲಭ್ಯವಾಗಲಿದೆ.












Click it and Unblock the Notifications