Namma Metro: ಬರೋಬ್ಬರಿ 216 ಬೋಗಿ ಪೂರೈಕೆ: 'ಟಿಟಾಗರ್' ಕಂಪನಿಯಿಂದ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ
ಬೆಂಗಳೂರು, ಫೆಬ್ರವರಿ 20: ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಬೋಗಿಗಳಿಗಾಗಿ ಚೀನಾ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಹಳದಿ ಮಾರ್ಗದ ಕಾರ್ಯಾಚರಣೆಗಾಗಿ ಈಗಾಗಲೇ ಒಂದು ಸೆಟ್ ರೈಲು (06 ಬೋಗಿ) ಆಗಮಿಸಿವೆ. ಇದೇ ವೇಳೆ 'ಟಿಟಾಗರ್ ಸಂಸ್ಥೆ'ಯ ಮೆಟ್ರೋ ಬೋಗಿ ಪೂರೈಕೆ ಬಗ್ಗೆ ಅಪ್ಡೇಟ್ ನೀಡಿದೆ.
ಬೆಂಗಳೂರಿನ ಆರ್‌ವಿ ರಸ್ತೆ-ಬೊಮ್ಮಸಂದ್ರವರೆಗಿನ ನಮ್ಮ ಮೆಟ್ರೊದ ಹಳದಿ ಮಾರ್ಗಕ್ಕೆ (Namma Metro Yellow Line) ಚಾಲಕ ರಹಿತ ಮೊದಲು ಒಂದು ರೈಲು ಸೆಟ್‌ಗಳು ಆಗಮಿಸಿವೆ. ಇದೀಗ ಕೊಲ್ಕತ್ತಾದಲ್ಲಿ ಮುಖ್ಯ ಕಚೇರಿ ಹೊಂದಿರುವ ಟಿಟಾಗರ್ ರೈಲ್ ಸಿಸ್ಟಮ್ಸ್ ಕಂಪನಿಯು ನಮ್ಮ ಮೆಟ್ರೋಗೆ ಬೋಗಿ ಪೂರೈಕೆಯ ರೇಸಿನಲ್ಲಿದೆ ಎಂದು 'ಮನಿ ಕಂಟ್ರೋಲ್' ವರದಿ ಮಾಡಿದೆ.

ಈ ಕುರಿತು ಮನಿ ಕಂಟ್ರೋಲ್ ಜತೆಗೆ ಮಾತನಾಡಿರುವ 'ಟಿಟಾಗರ್ ಕಂಪನಿ' ಅಧಿಕಾರಿಗಳು, ಮೆಟ್ರೋ ಬೋಗಿ ತಯಾರಿಕೆಯ ಅಸೆಂಬ್ಲಿ ಲೈನ್ ಬಹುತೇಕ ಕಾರ್ಯಾರಂಭಗೊಂಡಿದೆ. ಯಂತ್ರಗಳು ನಮ್ಮಲ್ಲಿವೆ, ಆರಂಭಿಕ ಪ್ರಕ್ರಿಯೆಗಳು ಮುಗಿದಿವೆ. ಮುಂದಿನ 45 ರಿಂದ 60 ದಿನಗಳಲ್ಲಿ ಕಮಿಷನಿಂಗ್ ಪೂರ್ಣಗೊಳ್ಳಬೇಕು. ಇದಾದ ಬಳಿಕ ಉತ್ಪಾದನೆ ಆರಂಭವಾಗುತ್ತವೆ ಎಂದು ತಿಳಿಸಿದರು.
ತಿಂಗಳಿಗೊಮ್ಮೆ 2 ಸೆಟ್ ರೈಲು ಪೂರೈಕೆ
ಎಲ್ಲವು ಅಂದುಕೊಂಡಂತೆ ಆದರೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಮುಂದಿನ ಏಪ್ರಿಲ್‌ನಿಂದ ಪ್ರತಿ ತಿಂಗಳು 6 ಕೋಚ್‌ಗಳ 1 ಸೆಟ್ ರೈಲುಗಳಂತೆ ಎರೆಡೆರಡು ಸೆಟ್ ಒಂದೇ ಭಾರಿಗೆ ಪೂರೈಕೆ ಮಾಡಬಹುದು ಎಂದು ಹೇಳಿದರು.
BMRCL ಮೊದಲ ಎರಡು ಸೆಟ್‌ಗಳ ಆರು ಬೋಗಿಗಳ ರೈಲುಗಳನ್ನು (12 ಕೋಚ್‌ಗಳು) ಚೀನಾದಿಂದ ಆಮದು ಮಾಡಿಕೊಳ್ಳಲಿದೆ. ಬಳಿಕ 204 ಕೋಚ್‌ಗಳನ್ನು ಭಾರತದಲ್ಲಿ ಟಿಟಾಗರ್ ಕಂಪನಿಯಿಂದ ಪಡೆಯಲಿದೆ. ಒಪ್ಪಂದಂತೆ ಚೀನಾ ಕಂಪನಿಯು ಒಟ್ಟು 216 ಬೋಗಿ ಪೂರೈಸಲು ಮೆಟ್ರೋ ಜತೆ ಒಪ್ಪಂದ ಮಾಡಿಕೊಂಡಿದೆ. ಬೋಗಿಗಳು ಭವಿಷ್ಯದ ವಿವಿಧ ಯೋಜನೆಗಳಿಗೆ ಬಳಕೆ ಆಗಲಿವೆ.
2025ಕ್ಕೆ ಎಲ್ಲ 204 ಮೆಟ್ರೋ ಕೋಚ್ ಆಗಮನ?
ಇದೇ ಮಾರ್ಚ್‌ನಲ್ಲಿ ಬೋಗಿ ತಯಾರಿಕೆಯಲ್ಲಿ ಅಸೆಂಬ್ಲಿ ಮಾರ್ಗದ ಕಾರ್ಯಾರಂಭವು ಪೂರ್ಣಗೊಳ್ಳುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಏಪ್ರಿಲ್‌ನಲ್ಲಿ ನಾವು ತಿಂಗಳಿಗೆ ಎರಡು ರೈಲು ಸೆಟ್‌ಗಳನ್ನು ಪೂರೈಸಲಾಗುವುದು. ಮುಂದಿನ ವರ್ಷ 2025ರ ಮಾರ್ಚ್ ವೇಳಗೆ ಒಪ್ಪಂದಂತೆ ಎಲ್ಲ ಕೋಚ್‌ಗಳನ್ನು ಪೂರೈಸಲಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊನ್ನೆಯಷ್ಟೇ ಚಾಲಕ ರಹಿತ ಸಿಗ್ನಲ್ ಆಧಾರದಲ್ಲಿ ಚಲಿಸಬಹುದಾದ ಒಂದು ರೈಲು ಸೆಟ್ (ಆರು)ನ ಬೋಗಿಗಳನ್ನು ಚೀನಾದಿಂದ ಬೆಂಗಳೂರಿಗೆ ಆಗಮಿಸಿವೆ. ಅಲ್ಲಿಂದ ಹೊರಟು ಸುಮಾರು 20 ದಿನಗಳ ಬಳಿಕ ಬೆಂಗಳೂರಿನ ಹೆಬ್ಬಗೋಡಿಗೆ ಮೆಟ್ರೋ ಕೋಚ್ ತಲುಪಿವೆ.

ಭಾರತದಲ್ಲೇ ಮೆಟ್ರೊ ಕೋಚ್ ಉತ್ಪಾದನೆ
ಮೂಲಮಾದರಿ ರೈಲನ್ನು ಚೀನಾ ಮೂಲದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಕಂಪನಿ ತಯಾರಿಸಿದೆ. ಉಳಿದ ಕೋಚ್‌ಗಳನ್ನು ಮೇಕ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ದೇಶೀಯ ಪಾಲುದಾರ ಟಿಟಾಗರ್ ಕಂಪನಿಯ ಸಹಕಾರ ಪಡೆದಿದ್ದು, ಕೊಲ್ಕತ್ತಾದಲ್ಲಿ ತಯಾರಾಗಲಿವೆ.
ಡಿಸೆಂಬರ್ 2019 ಬೆಂಗಳೂರು ಮೆಟ್ರೋ ಹಾಗೂ ಚೀನಾದ ಸಿಆರ್‌ಆರ್‌ಸಿ ಕಂಪನಿ ಜತೆ ಮಾಡಿಕೊಂಡ ಒಪ್ಪಂದದಂತೆ 216 ಕೋಚ್‌ಗಳನ್ನು ಪೂರೈಸಬೇಕಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಈ ಮೆಟ್ರೋ ಕೋಚ್ ಗಳನ್ನು ಟಿಟಾಗರ್ ಪೂರೈಸುವುದಾಗಿ ಮಾತು ನೀಡಿದೆ.
ಹಳದಿ ಮಾರ್ಗದಲ್ಲಿ 8-10 ರೈಲು ಸಂಚಾರ?
ಸದ್ಯ ಚಾಲಕ ರಹಿತ ನಮ್ಮ ಮೆಟ್ರೋ ರೈಲುಗಳು ಹಳದಿ ಮಾರ್ಗದಲ್ಲಿ ಸಂಚರಿಸಲಿವೆ. ಈ ಮಾರ್ಗವು ಒಟ್ಟು 19 ಕಿಲೋ ಮೀಟರ್ ದೂರವಿದ್ದು, ಪ್ರಮುಖ ಐಟಿ ಕಾರಿಡಾರ್ ಅನ್ನು ಸಂಪರ್ಕಿಸುತ್ತದೆ. ಬೆಂಗಳೂರಿನ ಮಟ್ಟಿಗೆ ನೀರ್ಣಾಯಕ ಮೆಟ್ರೋ ಮಾರ್ಗದಲ್ಲಿ ಹಳದಿ ಲೈನ್ ಸಹ ಒಂದಾಗಿದೆ. ಇಲ್ಲಿ ಸಂಚರಿಸಲು ಒಟ್ಟು 8-10 ರೈಲುಗಳ ಅಗತ್ಯವಿದೆ.
ಹಳದಿ ಮೆಟ್ರೋ ಮಾರ್ಗವು ನಿಗದಿಯಂತೆ 2021ರ ವೇಳೆಗೆ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಕೊರೊನಾ ಮತ್ತಿತರರ ಕಾರಣಾಂತರಗಳಿಂದ ಕೆಲವು ಬಾರಿ ಗಡುವು ಪಡೆದಿದ್ದು, ಇದೀಗ 2024ರಲ್ಲಿ ಮಾರ್ಗ ಸಂಚಾರ ಮುಕ್ತಗೊಳ್ಳಲಿದೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.
ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಆರ್‌ವಿ ರಸ್ತೆ ಸೇರಿದಂತೆ ಐಟಿ ಕೇಂದ್ರದ ಉದ್ಯೋಗಿಗಳಿಗೆ, ಸಾರ್ವಜನಿಕರಿಗೆ ಈ ಮಾರ್ಗವು ನೀರ್ಣಾಯಕವಾಗಿದೆ. ಆದಷ್ಟು ಶೀಘ್ರವೇ ಹಳದಿ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ.












Click it and Unblock the Notifications