Namma Metro Service Cut: ಜೂನ್ 17ರಂದು ನೇರಳೆ ಮಾರ್ಗದಲ್ಲಿ ರೈಲು ಸಂಚಾರ ರದ್ದು, ಗಮನಿಸಿ
ಬೆಂಗಳೂರು, ಜೂನ್ 15: ಬೆಂಗಳೂರು ಮೆಟ್ರೋ ರೈಲು ಸೇವೆ ವೇಗದ ಮತ್ತು ಸುರಕ್ಷಿತ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪದೇ ಪದೆ ರೈಲು ಸೇವೆಯಲ್ಲಿನ ವ್ಯತ್ಯಯ, ತುರ್ತು ನಿರ್ವಹಣಾ ಕಾಮಗಾರಿ, ರೈಲುಗಳಲ್ಲಿ ದೋಷದ ವಿಚಾರವಾಗಿ ಸುದ್ದಿಗೆ ಬರುತ್ತಿದೆ. ಇದೀಗ ಮತ್ತೆ ಸೋಮವಾರ ಕೆಲ ಮಾರ್ಗದ ಸಂಚಾರ ಸೇವೆಯ ರದ್ದು ಮಾಡಲಾಗಿದೆ.
ಹೌದು, ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರು ಬಿಎಂಟಿಸಿ ಸೇರಿದಂತೆ ಇತರ ಖಾಸಗಿ ಸಾರಿಗೆ ಜೊತೆಯಲ್ಲೆ ಹೆಚ್ಚಿನ ಸಂಖ್ಯೆಯ ಜನರು ನಮ್ಮ ಮಟ್ರೋ ರೈಲಿನ ಸೇವೆಯನ್ನು ಅವಲಂಭಿಸಿದ್ದಾರೆ. ಇದೀಗ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೇಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ಸೇವೆ ರದ್ದು ಬಗ್ಗೆ ಅಪ್ಡೇಟ್ ಮಾಹಿತಿ ನೀಡಿದೆ.

ರೈಲು ಸಂಚಾರ ರದ್ದಿಗೆ ಕಾರಣವೇನು?
ಬೆಂಗಳೂರು ಮೆಟ್ರೋ ರೈಲು ಮಾರ್ಗದಲ್ಲಿ ಆಗಾಗ ದೋಷಗಳು ಕಂಡು ಬರುತ್ತಿವೆ. ಇದೀಗ ಚಲಘಟ್ಟದಿಂದ ವೈಟ್‌ಫಿಲ್ಡ್ ವರೆಗಿನ ಅತೀ ಉದ್ದದ ಮೆಟ್ರೋ ನೇರಳೆ ಮಾರ್ಗದಲ್ಲಿ ಜೂನ್ 17ರಂದು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು ಇದೆಲ್ಲ ಗಮನಿಸಿ ಸಂಚರಿಸಬೇಕಿದೆ.
ಸೋಮವಾರ ಜೂನ್ 17ರಂದು ಬೆಳಗ್ಗೆ 05 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ನೇರಳೆ ಮಾರ್ಗದ ಕೆಂಗೇರಿ ಮತ್ತು ಚಲಘಟ್ಟ ಮಧ್ಯ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚಾರ ಸೇವೆ ಭಾಗಶಃ ಸ್ಥಗತಗೊಳ್ಳಲಿದೆ.
ಬೆಳಗ್ಗೆ ಕೆಂಗೇರಿಯಿಂದ ವೈಟ್‌ಫಿಲ್ಡ್ ವರೆಗೆ ಎಂದಿನಂತೆ ಪ್ರಯಾಣಿಕರು ಸಂಚರಿಸಬಹುದು. ಮಧ್ಯಾಹ್ನ 1 ಗಂಟೆ ಬಳಿಕ ಎಂದಿನಂತೆ ಚಲಘಟ್ಟದಿಂದ ವೈಟ್‌ಫಿಲ್ಡ್‌ವರೆಗೆ ಪೂರ್ಣ ಮಾರ್ಗದಲ್ಲಿ ಪ್ರಯಾಣಿಕರಿಗೆ ಮೆಟ್ರೋ ಸಂಚಾರ ಸೇವೆ ಲಭ್ಯವಾಗಲಿದೆ.

ಹಸಿರು ಮಾರ್ಗದಲ್ಲಿ ಯಾವ ತೊಂದರೆ ಇಲ್ಲ
ಈ ಅವಧಿಯಲ್ಲಿ ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆಗಳು ಇರುವುದಿಲ್ಲ. ನಾಗಸಂದ್ರ-ರೇಷ್ಮೆ ಸಂಸ್ಥೆವರೆಗೆ ಎಂದಿನಂತೆ ಹಾಲಿ ಸಮಯದಲ್ಲಿ ರೈಲುಗಳು ಕಾರ್ಯ ನಿರ್ವಹಿಸುತ್ತವೇ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.
ಮೊನ್ನೆಯಷ್ಟೇ ರೈಲಿನಲ್ಲಿ ತಾಂತ್ರಿಕ ದೋಷ, ಸೇವೆ ವ್ಯತ್ಯಯ
ಮೊನ್ನೆಯಷ್ಟೇ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನೇರಳೆ ಮಾರ್ಗದ ರೈಲನ್ನು ಸುಸೂತ್ರವಾಗಿ ತಂದು ಕೆಂಪೇಗೌಡ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಹೆಚ್ಚುವರಿ ಪಾಕೇಟ್ ಟ್ರ್ಯಾಕ್‌ಗೆ ತರಲಾಗಿದೆ. ಕೆಲವು ಗಂಟೆಗಳಲ್ಲಿಯೇ ಮೆಟ್ರೋ ರೈಲಿನಲ್ಲಿ ಉಂಟಾಗಿದ್ದ ದೋಷವನ್ನು ಸರಿಪಡಿಸಿ ಪುನಃ ಸುಸೂತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಹೀಗೆ ಆಗಾಗ ಮೆಟ್ರೋ ರೈಲು, ಮಾರ್ಗಗಳಲ್ಲಿ ದೋಷಗಳು ಕಂಡು ಬರುತ್ತಿವೆ. ಈ ಮಧ್ಯೆ ನಮ್ಮ ಮೆಟ್ರೋ ಅಧಿಕಾರಿಗಳು ಚಾಲಕರಹಿತ ಮೆಟ್ರೋ ಓಡಿಸಲು ತೀರ್ಮಾನಿಸಿದ್ದಾರೆ. ಅದು ಇನ್ನು ಪ್ರಾಯೋಗಿಕ ಚಾಲನೆಯ ಹಂತದಲ್ಲಿದೆ.












Click it and Unblock the Notifications