Namma metro: 2026ರ ಡಿಸೆಂಬರ್ ವೇಳೆಗೆ ಈ ಮೂರು ಪ್ರಮುಖ ಮಾರ್ಗಗಳಲ್ಲಿ ಮೆಟ್ರೋ ಸೇವೆ-ಎಲ್ಲೆಲ್ಲಿ? ಮಾಹಿತಿ ಹೀಗಿದೆ
ಬೆಂಗಳೂರು, ಫೆಬ್ರವರಿ, 15: ಬೆಂಗಳೂರಿನ ಬಹುತೇಕ ಜನರ ಜೀವನಾಡಿ ಸಾರಿಗೆಯಾದ ನಮ್ಮ ಮೆಟ್ರೋದಲ್ಲಿ ಏನೆಲ್ಲ ಬದಲಾವಣೆಗಳಾಗಿವೆ, ಯಾವ ವರ್ಷ ದಾಖಲೆ ಮಟ್ಟದಲ್ಲಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ನಮ್ಮ ಮೆಟ್ರೋ ರೈಲು ವರ್ಷಕ್ಕೆ ಒಂದರಂತೆ 2026ರ ಡಿಸೆಂಬರ್ ವೇಳೆಗೆ ಮೂರು ಹೊಸ ಮಾರ್ಗಗಳಲ್ಲಿ ಸಂಚಾಋ ಮಾಡಲಿದೆ. ಹಾಗಾದರೆ ಆ ಮಾರ್ಗಗಳು ಎನ್ನುವ ಮಾಹಿತಿಯನ್ನೂ ಕೂಡ ಇಲ್ಲಿ ಗಮನಿಸಿ.
2026ರ ಡಿಸೆಂಬರ್ ಅಂತ್ಯದ ವೇಳಗೆ ಈ ಎರಡು ಹೊಸ ಮಾರ್ಗಗಗಳಲ್ಲಿ ಮೆಟ್ರೋ ಸೇವೆ ಆರಂಭವಾದರೆ, ಒಟ್ಟು ಮಾರ್ಗಗಳ ಸಂಖ್ಯೆ 5ಕ್ಕೆ ಏರಿಕೆ ಆಗಲಿದೆ. ಮೆಟ್ರೋ ರೈಲಿನಲ್ಲಿ ನಿತ್ಯ ಸಂಚರಿಸುವವರ ಪ್ರಮಾಣ 15 ಲಕ್ಷ ದಾಟಲಿದೆ ಎನ್ನುವ ನಿರೀಕ್ಷೆಯಿದೆ. ಇನ್ನು ಈ ವರ್ಷದ ಅಂತ್ಯದೊಳಗೆ ಹಳದಿ ಮಾರ್ಗ, 2025ರ ಡಿಸೆಂಬರ್ ವೇಳೆಗೆ ಗುಲಾಬಿ ಮತ್ತು 2026ರ ಡಿಸೆಂಬರ್ ವೇಳೆಗೆ ನೀಲಿ ಮಾರ್ಗಗಳು ಸಂಚಾರಕ್ಕೆ ತೆಗೆದುಕೊಳ್ಳಲಿವೆ ಎಂದು ಪ್ರಜಾವಾಣಿಯಲ್ಕಿ ವರದಿಯಾಗಿದೆ.

ಇನ್ನು ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಮಾಡಲಿದೆ. ಪ್ರೊಟೊ ಟೈಪ್ ಎರಡು ರೈಲು ಕೋಚ್‌ಗಳನ್ನು ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೋರೇಷನ್ (ಸಿಆರ್‌ಸಿಆರ್‌ಸಿ) ಡಿಸೆಂಬರ್‌ನಲ್ಲಿ ರವಾನೆ ಮಾಡಿತ್ತು. ಇದು ಫೆಬ್ರವರಿ 15ರ ಬಳಿಕ ಬೆಂಗಳೂರು ತಲುಪಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಾರ್ಗದಲ್ಲಿ ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆಯಲ್ಲಿ (ಸಿಬಿಟಿಸಿ) ಚಾಲಕ ರಹಿತ ರೈಲು ಜೊತೆಗೆ ಈಗಿರುವ "ಡಿಸ್ಟೆನ್ಸ್ ಟು ಗೊ" (ಡಿಟಿಜಿ) ವ್ಯವಸ್ಥೆಯ ಲೋಕೋ ಪೈಲೆಟ್ ಮೆಟ್ರೋ ಕೂಡ ಸಂಚಾರ ಮಾಡಲಿದೆ. 18.82 ಕಿಲೋ ಮೀಟರ್ ಇರುವ ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳಿದ್ದು, ಕಾಮಗಾರಿ ಶೇಕಡಾ 98ರಷ್ಟು ಮುಕ್ತಾಯವಾಗಿದೆ.
ಆದರೆ, ರೈಲು ಕೋಚ್ ಪೂರೈಕೆ ತಡ ಆಗಿರುವುದರಿಂದ ಸಂಚಾರ ಪರೀಕ್ಷೆ ಸಿಗ್ನಲಿಂಗ್ ಪರೀಕ್ಷೆ ಸಹಿತ ತಾಂತ್ರಿಕ ಕೆಲಸಗಳು ಬಾಕಿ ಉಳಿದಿವೆ. ಏಪ್ರಿಲ್-ಮೇನಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ವಿವಿಧ ಪರೀಕ್ಷೆಗಳು ನಡೆಯಲಿವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಗುಲಾಬಿ ಮಾರ್ಗ: ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗವು ಅತಿ ಉದ್ದದ ಸುರಂಗ ಮಾರ್ಗವನ್ನು ಹೊಂದಿದೆ. ಒಟ್ಟು 21 ಕಿಲೋ ಮೀಟರ್ ಇರುವ ಈ ಮಾರ್ಗದಲ್ಲಿ 13.76 ಕಿ.ಮೀ. ಸುರಂಗ ಮಾರ್ಗವಾಗಿದೆ. ಹೋಗುವ ಮತ್ತು ಬರುವ ಸುರಂಗಗಳ ಒಟ್ಟು ಉದ್ದ 20.99 ಕಿ.ಮೀಟರ್ ಆಗಿದ್ದು, ಅದರಲ್ಲಿ 19.08 ಕಿ.ಮೀ. ಸುರಂಗ ಕೊರೆಯುವ ಕಾರ್ಯ ಮುಕ್ತಾಯಗೊಂಡಿದೆ.
ಎರಡು ತಿಂಗಳಲ್ಲಿ ಸುರಂಗ ಕೊರೆಯುವ ಕಾರ್ಯ ಮುಗಿಯಲಿದ್ದು, ಬಳಿಕ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ.
ನೀಲಿ ಮಾರ್ಗ: ಕಸ್ತೂರಿನಗರ ರೇಷ್ಮೆ ಮಂಡಳಿಯಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಈ ಮಾರ್ಗವು ಎರಡು ಹಂತಗಳಲ್ಲಿ ನಿರ್ಮಾಣ ಆಗಲಿದೆ. ಈ ಮಾರ್ಗ 58.19 ಕಿ.ಮೀ. ಉದ್ದವಿದ್ದು, 30 ನಿಲ್ದಾಣಗಳಿರಲಿವೆ. 2026ರ ಡಿಸೆಂಬರ್ ಒಳಗೆ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ನಮ್ಮ ಮೆಟ್ರೋ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 11 ವರ್ಷಗಳಲ್ಲಿ ಪ್ರಯಾಣ ಮಾಡಿದವರ ಸಂಖ್ಯೆ 100 ಕೋಟಿ ದಾಟಿದೆ. ವರ್ಷದಿಂದ ವರ್ಷಕ್ಕೆ ಮೆಟ್ರೋ ವ್ಯಾಪ್ತಿ ಕೂಡ ವಿಸ್ತಣೆ ಆಗುತ್ತಲಿದ್ದು, ಪ್ರಾರಂಭದಲ್ಲಿ 6.7 ಕಿಲೋ ಮೀಟರ್ ಕಾರ್ಯಾಚರಣೆ ನಡೆಸುತ್ತಿದ್ದ ಮೆಟ್ರೋ ಇದೀಗ 73.81 ಕಿ.ಮೀಟರ್ ಮುಟ್ಟಿದೆ. ಪ್ರಯಾಣಿಕರು ಜನದಟ್ಟಣೆ ಮತ್ತು ವಾಹನದಟ್ಟಣೆಯಿಂದ ತಪ್ಪಿಸಿಕೊಂಡು ಸಮಯ ಉಳಿತಾಯ ಮಾಡಲು ಮೆಟ್ರೋವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಯಾವ್ಯಾವಾಗ ಯಾವ ಮಾರ್ಗದಲ್ಲಿ ಮೆಟ್ರೋ ಆರಂಭ?
1. 2011ರ ಅಕ್ಟೋಬರ್‌ನಲ್ಲಿ ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ-ಎಂ.ಜಿ.ರಸ್ತೆ ನಡುವೆ ಮೊದಲ ಬಾರಿಗೆ ನಮ್ಮ ಮೆಟ್ರೋ ರೈಲು ಸಂಚರ ಆರಂಭಿಸಿತ್ತು.
2. 2014ರಲ್ಲಿ ಹಸಿರು ಮಾರ್ಗದಲ್ಲಿ ಪೀಣ್ಯ ಇಂಡಸ್ಟ್ರಿ-ಸಂಪಿಗೆ ರಸ್ತೆ ನಡುವೆ ಮೆಟ್ರೋ ರೈಲು ಸಂಚಾರ ಆರಂಭವಾಯಿತು.
3. 2015ರಲ್ಲಿ ನೇರಳೆ ಮಾರ್ಗದಲ್ಲಿ ಮಾಗಡಿ ರಸ್ತೆಯಿಂದ ಕೆಂಗೇರಿವರೆಗೆ ಮೆಟ್ರೋ ಸೇವೆ ಪ್ರಾರಂಭವಾಯಿತು.
4. 2016ರ ಏಪ್ರಿಲ್‌ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಕಬ್ಬನ್ ಪಾರ್ಕ್ ಸುರಂಗಮಾರ್ಗ ಪೂರ್ಣಗೊಂಡು ಸಂಚಾರಕ್ಕೆ ತೆರೆದುಕೊಂಡಿತು.
5. 2017ರಲ್ಲಿ ಹಸಿರು ಮಾರ್ಗವು ಮೆಜೆಸ್ಟಿಕ್‌ನಿಂದ ಯಲಚೇನಹಳ್ಳಿವರೆಗೆ ಹಾಗೂ ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರವರೆಗೆ ವಿಸ್ತರಣೆ ಆಯಿತು.
6. 2021ರಲ್ಲಿ ಹಸಿರು ಮಾರ್ಗವು ಯಲಚೇನಹಳ್ಳಯಿಂದ ರೇಷ್ಮೆ ಸಂಸ್ಥೆವರೆಗೆ ವಿಸ್ತರಣೆ ಆಯಿತು.
7. 2023ರ ಆರಂಭದಲ್ಲಿ ನೇರಳೆ ಮಾರ್ಗದ ವೈಟ್‌ಫೀಲ್ಡ್ (ಕಾಡುಗೋಡಿ)-ಕೆ.ಆರ್.ಪುರ ಹಾಗೂ ವರ್ಷದ ಕೊನೆಗೆ ಕೆ.ಆರ್.ಪುರ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ನಡುವೆ ಮೆಟ್ರೋ ಸಂಚಾರ ಆರಂಭ.
ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ
1. 2012ರಲ್ಲಿ 69.80 ಲಕ್ಷ ಪ್ರಯಾಣಿಕರ ಪ್ರಯಾಣ
2. 2013ರಲ್ಲಿ 63.89 ಲಕ್ಷ ಪ್ರಯಾಣಿಕರ ಪ್ರಯಾಣ
ಹೀಗೆ 2014ರಲ್ಲಿ 1.11 ಕೋಟಿ ಪ್ರಯಾಣಿಕರ ಪ್ರಯಾಣ, 2015 1.48 ಕೋಟಿ ಪ್ರಯಾಣಿಕರು, 2016ರಲ್ಲಿ 4.39 ಕೋಟಿ ಪ್ರಯಾಣಿಕರ ಪ್ರಯಾಣ, 2017 10.39 ಕೋಟಿ, 2018 16.06 ಕೋಟಿ, 2019 17.62 ಕೋಟಿ, 2020 4.61 ಕೋಟಿ, 2021 5.56 ಕೋಟಿ, 2022 15.58 ಕೋಟಿ, ಇನ್ನು 2023ರಲ್ಲಿ 21.75 ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಇದು ಅತೀ ದೊಡ್ಡ ದಾಖಲೆಯಾಗಿದೆ.
ಇನ್ನು ಹಸಿರು ಮತ್ತು ನೇರಳೆ ಮಾರ್ಗದಲ್ಲಿ 57 ರೈಲುಗಳ ಸಂಖ್ಯೆಯುದ್ದು, ಪ್ರತಿದಿನ 618 ಟ್ರಿಪ್‌ಗಳನ್ನು ಓಡಿಸಲಾಗುತ್ತದೆ. ಹಾಗೆಯೇ ಇನ್ನು 21 ರೈಲುಗಳ ಸೇರ್ಪಡೆಗೊಳ್ಳಲು ಸಜ್ಜಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications