Namma Metro Red Line: 'ಕೆಂಪು ಮಾರ್ಗ' ಯೋಜನೆಯ ಆರಂಭ, ನಿಲ್ದಾಣಗಳು? ಅಂದಾಜು ವೆಚ್ಚದ ಮಾಹಿತಿ
ಬೆಂಗಳೂರು, ಆಗಸ್ಟ್ 27: ಬೆಂಗಳೂರು ನಮ್ಮ ಮೆಟ್ರೋ ಯೋಜನೆಗಳು ವಿಸ್ತರಣೆ ಆಗುತ್ತಲೇ ಇವೆ. ಮೆಟ್ರೋ 3ನೇ ಹಂತ 'A' ಯೋಜನೆ ಆರಂಭಕ್ಕೆ ಸಕಲ ಸಿದ್ಧತೆಗಳೂ ನಡೆದಿವೆ. ಈ ಯೋಜನೆಯಡಿ 'ಮೆಟ್ರೋ ಕೆಂಪು ಮಾರ್ಗ'ವು (Namma Metro Red Line) ನಗರದ ಹೃದಯಭಾಗದಲ್ಲಿ ಹಾದು ಹೋಗಲಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ವಿಸ್ತೃತ ಯೋಜನಾ ವರದಿಯನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಿದೆ.
ಬೆಂಗಳೂರಿನ 'ಹೆಬ್ಬಾಳ-ಸರ್ಜಾಪುರ'ವರೆಗೆ (36.59 ಕಿ.ಮೀ) ನಮ್ಮ ಮೆಟ್ರೋ ಕೆಂಪು ಮಾರ್ಗ ನಿರ್ಮಾಣ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಸಿದ್ಧಪಡಿಸಿದ ಡಿಪಿಆರ್ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇದೀಗ ಇದೇ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹಾಗಾದರೆ ಈ ಯೋಜನೆಯಡಿ ಎಷ್ಟು ನಿಲ್ದಾಣಗಳು ಬರಲಿವೆ?, ಯಾರಿಗೆಲ್ಲ ಅನುಕೂಲ ಆಗಲಿದೆ?, ಎಷ್ಟು ಇಂಟರ್‌ಚೆಂಜ್ ನಿಲ್ದಾಣಗಳು ಬರಲಿವೆ, ಒಟ್ಟು ಅಂದಾಜು ವೆಚ್ಚದ ಮಾಹಿತಿ ಇಲ್ಲಿದೆ.

ರಾಜ್ಯ ಸರ್ಕಾರ ಮೆಟ್ರೋ ಕೆಂಪು ಮಾರ್ಗದ ಯೋಜನೆಗೆ ಗ್ರೀನ್ ಸಿಗ್ನಲ್ ಕೊಟ್ಟಂತೆ ಕೇಂದ್ರವು ನೀಡುವ ವಿಶ್ವಾಸವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾರ್ಗ ಕುರಿತು ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಬಜೆಟ್ ನಲ್ಲೂ (2022-23) ಈ ಬಗ್ಗೆ ಘೋಷಣೆ ಮಾಡಲಾಗಿತ್ತು.
ಅದರಂತೆ ಯೋಜನೆ ಆರಂಭದ ಒಂದೊಂದೆ ಕಾರ್ಯಗಳು ಶುರುವಾಗುತ್ತಿವೆ. ಈ ಕೆಂಪು ಮಾರ್ಗ ನಿರ್ಮಾಣದಿಂದ ಹೆಚ್ಚು ಜನದಟ್ಟಣೆ ಇರುವ ಸರ್ಜಾಪುರದಿಂದ ಹೆಬ್ಬಾಳವರೆಗಿನ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಒಟ್ಟು 28 ನಿಲ್ದಾಣಗಳು ಬರಲಿವೆ. ನಾಲ್ಕು ವಿವಿಧ ಮೆಟ್ರೋ ಮಾರ್ಗಗಳಿಗೆ ಈ ಕೆಂಪು ಮಾರ್ಗ ಸಂಧಿಸಲಿದೆ. ಹೀಗಾಗಿ ನಾಲ್ಕು ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳು ಇದರ ವ್ಯಾಪ್ತಿಗೆ ಬರಲಿವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.
ಯೋಜನೆಯ ಅಂದಾಜು ವೆಚ್ಚ ಎಷ್ಟು?
ನಮ್ಮ ಮೆಟ್ರೋ ಮೂರನೇ ಹಂತದ ಎ ಯೋಜನೆಗೆ (ಕೆಂಪು ಮಾರ್ಗ)ಕ್ಕೆ ಸದ್ಯದ ಮಾಹಿತಿ ಪ್ರಕಾರ, ರೂ.28000 ಕೋಟಿ ಗೂ ಹೆಚ್ಚು ವೆಚ್ಚ ತಗುಲಲಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ನಂತರವೇ ಯೋಜನೆ ಆರಂಭವಾಗಲಿವೆ. ಅತೀ ಉದ್ದದ ಕೆಂಪು ಮಾರ್ಗದಲ್ಲಿ ಭೂಮಿ ಗುರುತಿಸುವುದು, ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುತ್ತದೆ.
ಎಲ್ಲವು ಅಂದುಕೊಂಡಂತೆ ಆದರೆ ಯೋಜನೆ 2025ರಲ್ಲಿ ಆರಂಭವಾಗಲಿದೆ. ಅಲ್ಲಿಂದ ಯೋಜನೆ ಪೂರ್ಣಗೊಳ್ಳಲು ಐದು ವರ್ಷ ಹಿಡಿಯಬಹುದು. 2030ರ ಹೊತ್ತಿಗೆ ಯೋಜನೆ ಪೂರ್ಣಗೊಂಡು, ವಾಣಿಜ್ಯ ಕಾರ್ಯಾಚರಣೆ ನಡೆಯುವ ನಿರೀಕ್ಷೆಗಳು ಇವೆ.
ಕೆಂಪು ಮಾರ್ಗದಲ್ಲಿ 28 ನಿಲ್ದಾಣಗಳು
ಈ ಉದ್ದೇಶಿತ ಮಾರ್ಗದಲ್ಲಿ ''ಹೆಬ್ಬಾಳ, ಗಂಗಾನಗರ, ಪಶುವೈದ್ಯಕೀಯ ಮಹಾವಿದ್ಯಾಲಯ, ಮೇಖ್ರಿ ಸರ್ಕಲ್, ಗಾಲ್ಫ ಕ್ಲಬ್, ಪ್ಯಾಲೇಸ್ ಗುಟ್ಟಹಳ್ಳಿ, ಬಸವೇಶ್ವರ ವೃತ್ತ, ಕೆಆರ್ ಸರ್ಕಲ್, ಟೌನ್ ಹಾಲ್, ಶಾಂತಿನಗರ, ನಿಮ್ಹಾನ್ಸ್, ಡೈರಿ ಸರ್ಕಲ್, ಕೋರಮಂಗಲ 2ನೇ ಬ್ಲಾಕ್, ಕೋರಮಂಗಲ 3ನೇ ಬ್ಲಾಕ್, ಜಕ್ಕಸಂದ್ರ, ಅಗರ, ಇಬ್ಬಲೂರು, ಬೆಳ್ಳಂದೂರು ಗೇಟ್, ಕೈಕೊಂಡೂರು, ದೊಡ್ಡಕನ್ನಳ್ಳಿ, ಕೆರ್ಮಲಾರಂ, ದೊಡ್ಡಕನ್ನಳ್ಳಿ, ಅಗ್ರಹಾರ ರಸ್ತೆ ಮತ್ತು ಸರ್ಜಾಪುರ'' ಸೇರಿದಂತೆ ಒಟ್ಟು 28ನಿಲ್ದಾಣ ನಿರ್ಮಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ..
ಎಲ್ಲೆಲ್ಲಿ 04 ಇಂಟರ್‌ಚೇಂಜ್ ನಿಲ್ದಾಣ?
ಈ ಕೆಂಪು ಮೆಟ್ರೋ ಮಾರ್ಗವು ಹೆಬ್ಬಾಳದಲ್ಲಿ ಮೆಟ್ರೋ 'ನೀಲಿ ಮಾರ್ಗ', ಕೆಆರ್ ವೃತ್ತದಲ್ಲಿ 'ನೇರಳೆ ಮಾರ್ಗ' ಸಂಧಿಸಲಿದೆ. ಇನ್ನೂ ಡೈರಿ ವೃತ್ತದಲ್ಲಿ 'ಗುಲಾಬಿ ಮಾರ್ಗ' ಹಾಗೂ ಆಗರದಲ್ಲಿ ಮೆಟ್ರೋ 'ನೀಲಿ ಮಾರ್ಗ'ವನ್ನು ಸಂಧಿಸುತ್ತದೆ. ಹೀಗಾಗಿ ಇಲ್ಲೆಲ್ಲ ನಾಲ್ಕು ಇಂಟರ್‌ಚೇಂಜ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ..
ಬೆಂಗಳೂರು ಆರ್.ವಿ ರಸ್ತೆ ಹಾಗೂ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗವು ಇದೇ ಡಿಸೆಂಬರ್ ನಲ್ಲಿ ಪ್ರಯಾಣಿಕರಿಗೆ ಮುಕ್ತವಾಗಲಿದೆ. ಇನ್ನೂ ವಿಸ್ತರಣೆಯ ಹಸಿರು ಮಾರ್ಗ ಮಾದಾವರದಿಂದ ನಾಗಸಂದ್ರವರೆಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ. ಮುಂದಿನ ತಿಂಗಳು ಸೆಪ್ಟಂಬರ್‌ನಲ್ಲಿ ಈ ವಿಸ್ತರಣೆ ಮಾರ್ಗದಲ್ಲಿ ಮೆಟ್ರೋ ಓಡಾಡಲಿವೆ.












Click it and Unblock the Notifications