Namma Metro: ಮೆಟ್ರೋದಲ್ಲಿ ದಾಖಲೆಯ ದೈನಂದಿನ ಪ್ರಯಾಣಿಕರ ಸಂಚಾರ, ಅಪ್ಡೇಟ್ ಮಾಹಿತಿ
ಬೆಂಗಳೂರು, ಏಪ್ರಿಲ್ 18: ಬೆಂಗಳೂರು ನಮ್ಮ ಮೆಟ್ರೊ (Namma Metro) ಪ್ರಯಾಣಿಕರ ಸಂಚಾರದಲ್ಲಿ ನಿರೀಕ್ಷೆಯ ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ. ಸಂಪೂರ್ಣ ನೇರಳೆ ಮಾರ್ಗ ತೆರೆದ ಬಳಿಕ ದೈನಂದಿನ ಪ್ರಮಾಣಿಕರ ಓಡಾಟದಲ್ಲಿ ದಾಖಲೆ ಬರೆದಿದೆ.
ಇದೇ ತಿಂಗಳ ಸೋಮವಾರ (ಏಪ್ರಿಲ್ 15) ದಂದು ನಮ್ಮ ಮೆಟ್ರೋ ರೈಲುಗಳಲ್ಲಿ 7,92,000 ಕ್ಕೂ ಹೆಚ್ಚು ಜನರು ಪ್ರಯಾಣಿಸಿದ್ದಾರೆ ಎಂದು TOI ವರದಿ ಮಾಡಿದೆ. ನಮ್ಮ ಮೆಟ್ರೋ 73 ಕಿಲೋ ಮೀಟರ್ ಜಾಲದಲ್ಲಿ ನಿರೀಕ್ಷೆಯಷ್ಟು ಪ್ರಯಾಣಿಕರು ಸಂಚಾರ ಮಾಡಿದ್ದಾರೆ.

ಜನವರಿಯಲ್ಲಿ 7.8 ಲಕ್ಷ ಜನರ ಓಡಾಟ
ಇದೇ ವರ್ಷ ಜನವರಿ 25 ರಂದು 7.8 ಲಕ್ಷ ಜನರು ಒಂದೇ ದಿನ ನಮ್ಮ ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸಿದ್ದರು. ಇದೀಗ 7.92 ಲಕ್ಷ ಜನರು ಓಡಾಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ಪ್ರತಿನಿತ್ಯ ಪ್ರಯಾಣಿಕರ ಸಂಖ್ಯೆ 8 ಲಕ್ಷ ದಾಟುವ ಸಾಧ್ಯತೆಗಳು ಇವೆ ಅಧಿಕಾರಿಗಳು ಊಹಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕಾರ್ಯನಿರ್ವಾಹಕ ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಎಎಸ್ ಶಂಕರ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಾಮಾನ್ಯವಾಗಿ ಪ್ರತಿ ಸೋಮವಾರ ಮೆಟ್ರೋ ನಿಲ್ದಾಣಗಳಲ್ಲಿ, ಇಂಟರ್ ಚೇಂಜ್ ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಇರುತ್ತದೆ ಎಂದರು.
ಮೆಟ್ರೋ ಸೇವೆ ಬಳಕೆಯಲ್ಲಿ ಹೆಚ್ಚಳ
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಹೊರ ಹೋಗುವವರು ಹೆಚ್ಚಿರುತ್ತಾರೆ. ಮರಳಿ ಅವರು ಹೆಚ್ಚಾಗಿ ಸೋಮವಾರ ಬರುತ್ತಾರೆ. ಕೆಲಸದ ಧಾವಂತದಲ್ಲಿರುವ ಅವರು ವಿವಿಧ ಸ್ಥಳಗಳನ್ನು ತಲುಪಲು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಮೆಟ್ರೋ ರೈಲುಗಳನ್ನೇ ಬಳಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ವರ್ಕ್ ಫ್ರಂ ಹೋಮ್ ಪದ್ಧತಿ ಕಡಿಮೆ ಆಗಿದೆ. ಹೈಬ್ರಿಡ್ ಸಿಸ್ಟಮ್ ಇದೆ. ಇದು ಒಂದು ರೀತಿಯಲ್ಲಿ ಮೆಟ್ರೋ ಪ್ರಯಾಣಿಕರ ಏರಿಕೆಗೆ ಕಾರಣವಾಗಿದೆ. ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾಗಿರುವ ಮೆಜೆಸ್ಟಿಕ್ ನಿಲ್ದಾಣದಲ್ಲಿ ಹಾಗೂ ನಾಲ್ಕು ದಿಕ್ಕುಗಳಿಂದ ಬೆಳಗ್ಗೆ 5 ಗಂಟೆಗೆ ಸೇವೆ ಆರಂಭವಾಗುತ್ತದೆ. ಇದು ಸಹ ಪ್ರಯಾಣಿಕರಿಗೆ ಭಾರಿ ಅನುಕೂಲ ಒದಗಿಸುತ್ತಿದೆ.
ಮೆಟ್ರೊ ನಿಲ್ದಾಣಗಳಿಗೆ ಆಟೋ, ಬಸ್ ಸೇವೆ
ಬೆಂಗಳೂರಿನ ನಮ್ಮ ಮಟ್ರೋ ಜೊತೆಗೆ ಆಟೋ ರೀಕ್ಷಾಗಳ ಸಂಘ ಒಪ್ಪಂದ ಮಾಡಿಕೊಂಡಿದೆ. ಇದರ ಭಾಗವಾಗಿ ನಮ್ಮ ಯಾತ್ರಿ ಈ ಬೆಂಗಳೂರಿನಲ್ಲೂ ಸೇವೆ ನೀಡುತ್ತಿದೆ. ಮೆಟ್ರೋ ನಿಲ್ದಾಣಗಳಿಗೆ ಸೇವೆ ವಿಸ್ತರಿಸಿದೆ. ಶೂನ್ಯ ಕಮಿಷನ್ ಸಹಿತವಾಗಿ ಪ್ರಯಾಣಿಕರಿಗೆ ಸೇವೆ ನೀಡುತತಿದೆ. ಬೆಂಗಳೂರು, ಕಲಬುರಗಿ ಸೇರಿದಂತೆ ಆರುನಗರಗಳಲ್ಲಿ ಈ ಸೇವೆ ವಿಸ್ತರಣೆ ಆಗಿದೆ.
ಅಲ್ಲದೇ ಮೆಟ್ರೋ ದಿಂದ ಗಮ್ಯಸ್ಥಳಗಳಿಗೆ ಆಟೋ ಜೊತೆಗೆ ಬಿಎಂಟಿಸಿ ಫಿಡರ್ ಬಸ್ ಸೇವೆ ಸಹ ಇದೆ. ಇದೆಲ್ಲ ಕಾರಣಗಳಿಂದ ದೈನಂದಿನ ನಮ್ಮ ಮೆಟ್ರೋ ಸೇವೆಯಲ್ಲಿ ಜನರ ಓಟಾಟ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ಮೆಟ್ರೋದಲ್ಲಿ ಕೊಕೇನ್ ಸಾಗಾಟಾ: ಬಂಧನ
ಚೆನ್ನೈನ ಶೆಣೈ ನಗರ ಮೆಟ್ರೋ ನಿಲ್ದಾಣದಲ್ಲಿ ಮಾಧಕ ವಸ್ತು (ಕೊಕೇನ್) ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಈ ಮಾಧಕ ವಸ್ತು ಬರೋಬ್ಬರಿ ರೂ. 20 ಲಕ್ಷ ಮೌಲ್ಯದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿ ಈತ ಡಾರ್ಕ್ ವೆಬ್-ಮೂಲಕ ಈ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಸದ್ಯ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.












Click it and Unblock the Notifications