BMRCL: ಸಾವಿರಾರು 'ಸಸಿ' ನೆಡಲು ಸಜ್ಜಾದ 'ನಮ್ಮ ಮೆಟ್ರೋ': ಖರ್ಚು-ಅಂಕಿ ಸಂಖ್ಯೆ ಮಾಹಿತಿ
ಬೆಂಗಳೂರು, ಫೆಬ್ರವರಿ 24: ಬೆಂಗಳೂರಿನಲ್ಲಿ ವೇಗದ ಮತ್ತು ಸುರಕ್ಷಿತ ಸೇವೆ ಒದಗಿಸುತ್ತಿರುವ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಯೋಜನೆಗಾಗಿ ಸಾವಿರಾರು ಮರಗಳಿಗೆ ಕತ್ತರಿ ಹಾಕಿತ್ತು. ಇದೀಗ ಇದರ ಪ್ರತಿಯಾಗಿ ಬೆಂಗಳೂರು ಹಾಗೂ ಸುತ್ತಮುತ್ತ ಸಸಿ ನೆಡಲು ಯೋಜನೆ ರೂಪಿಸಿದೆ. ಈ ಮೂಲಕ ಪರಿಸರಕ್ಕೆ ಕೊಡುಗೆ ನೀಡಲು ನಮ್ಮ ಮೆಟ್ರೋ (Namma Metro) ಸಜ್ಜಾಗಿದೆ.
BMRCL ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿವಿಧ ಹಂತಗಳಲ್ಲಿ 15,000 ಸಸಿಗಳನ್ನು ನೆಡಲು ಪ್ಲಾನ್ ಮಾಡಿಕೊಂಡಿದೆ. ಮೂರು ಹಂತಗಳಲ್ಲಿ ತಲಾ 5 ಸಾವಿರದಂತೆ ಒಟ್ಟು 15 ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಿದೆ. ಈ ಯೋಜನೆಗಾಗಿ ನಮ್ಮ ಮೆಟ್ರೋ ಒಟ್ಟು ಸುಮಾರು 7 ಕೋಟಿ ರೂಪಾಯಿ ಖರ್ಚು ಮಾಡಲಿದೆ ಎಂದು 'ವಿಜಯ ಕರ್ನಾಟಕ' ವರದಿ ಮಾಡಿದೆ. ಹಾಗಾದರೆ ಎಲ್ಲೆಲ್ಲಿ ಎಷ್ಟು ಸಸಿ ಬೆಳೆಸಲಾಗುವುದು ಎಂಬ ಮಾಹಿತಿ ಇಲ್ಲಿದೆ.

ಪ್ರತಿ ಹಂತಕ್ಕೆ 2.03 ಕೋಟಿ ರೂಪಾಯಿಯಂತೆ ಉದ್ದೇಶಿತ ಸುಮಾರು ಏಳು ಕೋಟಿ ಹಣ ಖರ್ಚು ಮಾಡಲಿದೆ. ಮೊದಲ ಹಂತದಲ್ಲಿ ದಾಬಸ್‌ಪೇಟೆ 4ನೇ ಕೈಗಾರಿಕಾ ಪ್ರದೇಶ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸುತ್ತಮುತ್ತ ಇರುವ ಇತರ ಸರ್ಕಾರಿ ಜಾಗಗಳಲ್ಲಿ 5 ಸಾವಿರ ಗಿಡಗಳನ್ನು BMRCL ನೆಡಲಿದೆ.
ಇನ್ನೂ ಎರಡನೇ ಹಂತದಲ್ಲಿ ದೊಡ್ಡಬಳ್ಳಾಪುರ ಕೆಐಎಡಿಬಿಯ 2, 12 ಮತ್ತು 13ನೇ ಉದ್ಯಾನ ಮತ್ತು ಬಫರ್ ವಲಯ ಜೊತೆಗೆ ಸುತ್ತಮುತ್ತಲಿನ ಇತರ ಸರಕಾರಿ ಖಾಲಿ ಜಾಗಗಳಲ್ಲಿ ಸಸಿ ನೆಟ್ಟು ಪೋಷಿಸಲು ಜಾಗ ಗುರುತಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BMRCL ಕತ್ತರಿಸಿದ ಮರಗಳ ಡಿಟೇಲ್ಸ್
ಬೆಂಗಳೂರು ನಮ್ಮ ಮೆಟ್ರೋ 73 ಕಿಲೋ ಮೀಟರ್ ಜಾಲ ವ್ಯಾಪ್ತಿಸಿದೆ. ತನ್ನ ಯೋಜನೆಗಳಿಗಾಗಿ 2021 ರಿಂದ 2023 ರ ನಡುವೆ 3,600ಕ್ಕೂ ಅಧಿಕ ಮರಗಳಿಗೆ ಕೊಡಲಿ ಹಾಕಿತ್ತು. ಈ ಬಗ್ಗೆ ಎಂದು ಕಳೆದ ವರ್ಷವೇ ಮಾಹಿತಿ ನೀಡಲಾಗಿದೆ. ಇನ್ನೂ ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿಗಳ ಪ್ರಕಾರ, ನಮ್ಮ ಮೆಟ್ರೋ ಯೋಜನೆ ಹಂತ-2 ಮತ್ತು 2ಎ ಹಾಗೂ ಹಂತ-2ಬಿ ಯೋಜನೆಗಳಿಗಾಗಿ ಬೆಳೆದುನಿಂತ 3,626 ಮರಗಳನ್ನು ತೆರವುಗೊಳಿಸಿದೆ.

ಕೆಲವು ಮರಗಳ ಯಶಸ್ವಿ ಸ್ಥಳಾಂತರ
ಈ ಎಲ್ಲ ಮರಗಳ ಪೈಕಿ 856 ಮರಗಳನ್ನು 2021 ರಿಂದ 2022 ರಲ್ಲಿ ಬೆಂಗಳೂರು ವಿವಿಧ ಭಾಗಗಳು ಮತ್ತು ಹೊರ ವಲಯಕ್ಕೆ ಸ್ಥಳಾಂತರಿಸಲಾಗಿದೆ. ಹಂತ-2 ಮತ್ತು 2ಎ ಗಾಗಿ 2,461 ಮರಗಳನ್ನು ಕಡಿಯಲಾಗಿದೆ. ಅದೇ ರೀತಿ, 2022 ರಿಂದ ಜನವರಿ 2023 ರವರೆಗೆ ನಗರದಲ್ಲಿ 107 ಮರಗಳನ್ನು ಸ್ಥಳಾಂತರಿಸಲಾಗಿದ್ದು, 1,193 ಮರಗಳನ್ನು ಬೇರೆಡೆ ಸ್ಥಳಾಂತರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ಮರ ಕಡಿದರೆ ಹತ್ತು ಸಸಿ ನೆಡಲು ಸೂಚನೆ
ಒಂದು ಮರಕ್ಕೆ ಹತ್ತು ಗಿಡ ನೆಡಲು ನಮ್ಮ ಮೆಟ್ರೋಗೆ ಹೈಕೋರ್ಟ್ ಸೂಚನೆ ಇದೆ. ಈ ಬಗ್ಗೆ ಎರಡು ವರ್ಷಗಳ ಹಿಂದೆ (2022) ರಲ್ಲಿ ಷರತ್ತು ವಿಧಿಸಿತ್ತು. ಮರ ಕಡಿದರೆ ಒಂದು ಮರಕ್ಕೆ ಬದಲಾಗಿ ಹತ್ತು ಮರಗಳನ್ನು ನೆಡುವಂತೆ ಹೇಳಲಾಗಿದೆ. ಇದರಿಂದ ಬೆಂಗಳೂರಿನ ಹಸಿರಿಗೆ ತೊಂದರೆ ಆಗುವುದಿಲ್ಲ ಎಂದು ತಿಳಿಸಿತ್ತು. ಈ ಯೋಜನೆ, ಕಟ್ಟಡ ನಿರ್ಮಾಣದಿಂದ ಉದ್ಯಾನ ನಗರಿಯ ಹಸಿರು ವರ್ಷದಿಂದ ವರ್ಷಕ್ಕೆ ತಗ್ಗುತ್ತಿದೆ. ಬಿಸಿಲಿನ ಧಗೆ ಹೆಚ್ಚುತ್ತಿದೆ.












Click it and Unblock the Notifications