Namma Metro: ಪಿಂಕ್ ಲೈನ್ ಕೆಲಸ ನವೆಂಬರ್‌ಗೆ ಪೂರ್ಣ, 2025ಕ್ಕೆ ವಾಣಿಜ್ಯ ಕಾರ್ಯಾಚರಣೆ?
ಬೆಂಗಳೂರು, ಸೆಪ್ಟಂಬರ್ 01: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾಮಗಾರಿಗಳು ಭರದಿಂದ ಸಾಗಿವೆ. ನಗರದ ಡೈರಿ ವೃತ್ತದ ಮಾರ್ಗವಾಗಿ ಭೂಗತ ಸುರಂಗ ಕಾರ್ಯ ಕೈಗೊಂಡಿರುವ ನಮ್ಮ ಮೆಟ್ರೋದ ನಾಗವಾರ-ಕಾಳೇನ ಅಗ್ರಹಾರ ಮಾರ್ಗದ ಕೆಲಸ ಇದೇ ನವೆಂಬರ್‌ಗೆ ಅಂತ್ಯಗೊಳ್ಳಲಿದೆ. ಈ ಮೂಲಕ ಮೆಟ್ರೋ ಗುಲಾಬಿ ಮಾರ್ಗದ ಕಾರ್ಯ ಶೇಕಡಾ 96ರಷ್ಟು ಮುಕ್ತಾಯಗೊಂಡಂತಾಗುತ್ತದೆ.
ಸದ್ಯ ಗುಲಾಬಿ ಮಾರ್ಗದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಟಿಬಿಎಂಗಳು ಡೈರಿ ವೃತ್ತದಿಂದ ನಾಗವಾರವರೆಗೆ ಕಾರ್ಯಪ್ರವೃತ್ತವಾಗಿವೆ. ನಾಗವಾರದಿಂದ ಕೆಜಿಹಳ್ಳಿ ಕಡೆಗೆ 940 ಮೀಟರ್ ಸುರಂಗ ಕೊರೆಯುವ ಕೆಲಸದಲ್ಲಿ ಟಿಬಿಎಂ ಗಳು ನಿರತವಾಗಿವೆ.

ಒಟ್ಟು 21 ಕಿಲೋ ಮೀಟರ್ ಉದ್ದದ ಈ ಗುಲಾಬಿ ಮಾರ್ಗದಲ್ಲಿ ಬರೋಬ್ಬರಿ 13ಕಿಲೋ ಮೀಟರ್ ಸುರಂಗ ಕಾರ್ಯವನ್ನು ಮೂರು ಹಂತಗಳಲ್ಲಿ ಬಿಎಂಆರ್‌ಸಿಎಲ್ ಕೈಗೊಂಡಿತ್ತು. ಕೆಜಿ ಹಳ್ಳಿಯಿಂದ ನಾಗವಾರವರೆಗೆ ತುಂಗಾ, ಭದ್ರಾ ಟಿಬಿಎಂಗಳು ಕಾರ್ಯ ನಿರ್ವಹಿಸುತ್ತಿವೆ. ತುಂಗಾ ಟಿಬಿಎಂ ಸುರಂಗ ಕೆಲಸ ಶೇ. 15ರಷ್ಟು ಬಾಕಿ ಇದೆ. ಭದ್ರಾ ಟಿಬಿಎಂ ಕಾರ್ಯ ಶೇಕಡಾ 50ರಷ್ಟು ಬಾಕಿ ಇದೆ. ಇದೆಲ್ಲವು ನವೆಂಬರ್ ಹೊತ್ತಿಗೆ ಮುಗಿಯಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿವೆ.
ಭೂಗತ ಸುರಂಗ ಕಾಮಗಾರಿ ಒಂದೆಡೆಯಾದರೆ ಮತ್ತೊಂದೆಡೆ ಮೆಟ್ರೋ ನಿಲ್ದಾಣಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಒಟ್ಟು 7.5 ಕಿಲೋ ಮೀಟರ್ ಎತ್ತರಿಸಿದ ಮಾರ್ಗ ನಿರ್ಮಾಣವಾಗಲಿದೆ. ಈಗಾಗಲೇ ಶೇಕಡಾ 94ರಷ್ಟು ಸಿವಿಲ್ ಕಾರ್ಯ ಪೂರ್ಣಗೊಂಡಿದೆ. ಭೂಗತ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಟ್ರ್ಯಾಕ್ ಅಳವಡಿಕೆ, ಇನ್ನಿತರ ಮಹತ್ವದ ಕೆಲಸಗಳು ಆರಂಭವಾಗಲಿವೆ.
2025ಕ್ಕೆ ಕಾಮಗಾರಿ ಪೂರ್ಣ 18 ನಿಲ್ದಾಣಗಳು
ನಮ್ಮ ಮೆಟ್ರೋ ಪಿಂಕ್ ಲೈನ್ ನಲ್ಲಿ ಈ ವರ್ಷಾಂತ್ಯಕ್ಕೆ ಟ್ರ್ಯಾಕ್ ಅಳವಡಿಕೆ ಕಾರ್ಯ ಆರಂಭವಾಗಬಹುದು. ಮುಂದಿನ 2025ರ ವರ್ಷಾಂತ್ಯದಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿಕೊಂಡು ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.

ಕಾಳೇನ ಅಗ್ರಹಾರದಿಂದ ನಾಗರವಾರವರೆಗಿನ ಮೆಟ್ರೋ ಗುಲಾಬಿ ಮಾರ್ಗವು ನಮ್ಮ ಮೆಟ್ರೋ ಹಂತ 2 ಯೋಜನೆಗೆ ಒಳಪಡುತ್ತದೆ. ಈ ಮಾರ್ಗದಲ್ಲಿ ಒಟ್ಟು 18ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಈ ಮಾರ್ಗ ನಿರ್ಮಾಣವಾದರೆ ನಗರದ ಹೃದಯಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.
ಶೀಗ್ರವೇ ಬಿಇಎಂಎಲ್‌ನಿಂದ ಮೆಟ್ರೋ ಬೋಗಿ
ಗುಲಾಬಿ ಮಾರ್ಗದ ಜೊತೆಗೆ ನೀಲಿ ಮಾರ್ಗದ (ಸಿಲ್‌ಬೋರ್ಡ್‌ನಿಂದ ಕೆ.ಆರ್‌ಪುರಂ ಅಲ್ಲಿಂದ ದೇವನಹಳ್ಳಿ ಏರ್‌ಪೋರ್ಟ್) ನಿರ್ಮಾಣ ಕಾರ್ಯ ಚುರುಕಿನಿಂದ ಸಾಗಿದೆ. ಹಳದಿ ಮಾರ್ಗವು ಇದೇ ವರ್ಷಾಂತ್ಯಕ್ಕೆ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದೆ. ಮತ್ತೊಂದೆಡೆ ದೈನಂದಿನ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಈ ಕಾರಣದಿಂದಾಗಿ ಒಪ್ಪಂದಂತೆ ಬಿಇಎಂಎಲ್ ಚಾಲಕ ರಹಿತ ಮೆಟ್ರೋ ಉತ್ಪಾದನೆ ಮಾಡುತ್ತಿದೆ. ಒಂದು ವರ್ಷದ ಹಿಂದೆ ಆದ ಒಪ್ಪಂದಂತೆ ಮೆಟ್ರೋ ಕೋಚ್ ತಯಾರಿಸಿ ಬಿಎಂಆರ್‌ಸಿಎಲ್‌ಗೆ ನೀಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲವು ಅಂದುಕೊಂಡಂತೆ ಆದರೆ ಇದೆ ವರ್ಷಾಂತ್ಯದ ಹೊತ್ತಿಗೆ ನಮ್ಮ ಮಟ್ರೋ ಹಾಲಿ ರೈಲುಗಳ ಮೇಲಿನ ಒತ್ತಡ ತಕ್ಕಮಟ್ಟಿಗೆ ಕಡಿಮೆ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಪ್ರಯಾಣಿಕರು ಹೆಚ್ಚಿದಂತೆ ರೈಲು ಆವರ್ತನ ಸಮಯ ಇಳಿಕೆ ಮಾಡಿದರೂ ಸಹಿತ, ದಟ್ಟಣೆ ಕಡಿಮೆ ಯಾಗಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಹೆಚ್ಚು ರೈಲು ಕೋಚ್‌ಗಳ ಅಗತ್ಯತೆ ಇದೆ.












Click it and Unblock the Notifications