Namma metro: ಡಿಸೆಂಬರ್ 31ರಂದು ಕೆಲ ಗಂಟೆಗಳ ಕಾಲ ಈ ಮೆಟ್ರೋ ನಿಲ್ದಾಣ ಬಂದ್-ಮಾಹಿತಿ ತಿಳಿಯಿರಿ
ಬೆಂಗಳೂರು, ಡಿಸೆಂಬರ್, 27: 2023 ಮುಗಿದು 2024ಕ್ಕೆ ದಾಪುಗಲಿಡಲು ಇನ್ನೂ ಕಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಈ ಬಾರಿ ಡಿಸೆಂಬರ್ 31 ಇದ್ದು, ಈ ದಿನದ ರಾತ್ರಿ ಕೆಲ ಗಂಟೆಗಳ ಕಾಲ ಬೆಂಗಳೂರಿನ ಈ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದಕ್ಕೆ ಕಾರಣ ಏನು?, ಎಷ್ಟು ಗಂಟೆಗಳ ಕಾಳ ಬಂದ್ ಮಾಡಲಾಗುತ್ತದೆ? ಹಾಗೂ ಪರ್ಯಾಯ ಮಾರ್ಗಗಳೇನು ಎಂದು ಇಲ್ಲಿ ತಿಳಿಯಿರಿ.
ವರ್ಷದ ಕೊನೆಯ ದಿನ ಡಿಸೆಂಬರ್ 31ರಂದು ರಾತ್ರಿ ವೇಳೆ ಎಂಜಿ ರಸ್ತೆ ಮೆಟ್ರೋ ನಿಲ್ದಾಣವನ್ನು ಕೆಲ ಗಂಟೆಗಳ ಕಾಲ ಬಂದ್ ಮಾಡಲಾಗುತ್ತದೆ. ಆಷ್ದರಿಂದ ಪ್ರಯಾಣಿಕರು ಬದಲಿ ಮೆಟ್ರೋ ನಿಲ್ದಾಣ ಬಳಸಬೇಕಾಗಿದೆ. ಡಿಸೆಂಬರ್ 31 ರಾತ್ರಿ ಮೆಟ್ರೋ ರೈಲುಗಳ ಸಂಚಾರವನ್ನು ರಾತ್ರಿ 1 ಅಥವಾ 2 ಗಂಟೆಯವರೆಗೂ ವಿಸ್ತರಣೆ ಮಾಡಲಾಗುತ್ತದೆ.

ಡಿಸೆಂಬರ್ 31ರ ರಾತ್ರಿ 11 ರಿಂದ 2 ಗಂಟೆವರೆಗೆ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಪ್ರಯಾಣಿಕರು ಸಮೀಪದ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ತೆರಳಿ ಮೆಟ್ರೋದಲ್ಲಿ ಸಂಚಾರ ಮಾಡಬಹುದು ಎಂದು ತಿಳಿಸಲಾಗಿದೆ.
ಬಂದ್‌ಗೆ ಕಾರಣ ಏನು?: ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಸುತ್ತಮುತ್ತಲೇ ಹೊಸ ವರ್ಷ ಸಂಭ್ರಮಾಚರಣೆಗಳು ಜೋರಾಗಿಯೇ ನಡೆಯುತ್ತವೆ. ಹೆಚ್ಚು ಜನದಟ್ಟಣೆ ಇರುತ್ತದೆ. ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯ ಆಗುವುದಿಲ್ಲ. ಕಳೆದ ವರ್ಷ ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆ ಮುಗಿದ ಬಳಿಕ ಏಕಾಏಕಿ ಇಲ್ಲಿನ ಮೆಟ್ರೋ ನಿಲ್ದಾಣದಲ್ಲಿ ಭಾರೀ ದಟ್ಟಣೆ ಉಂಟಾಗಿತ್ತು.
ಈ ಸಂದರ್ಭದಲ್ಲಿ ಗಲಾಟೆಗಳು, ತಿಕ್ಕಾಟದಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ಹಲವರಿಗೆ ಸಮಸ್ಯೆ ಉಂಟಾಯಾಯಿತು. ಅಲ್ಲದೆ ಸಾಕಷ್ಟು ಸಮಯಗಳ ಕಾಲ ಜನದಟ್ಟಣೆಯೂ ಇತ್ತು. ಆದ್ದರಿಂದ ಈ ಬಾರಿ ರಾತ್ರಿ 11 ರಿಂದ 2 ಗಂಟೆವರೆಗೆ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ತಿಳಿಸಿದ್ದಾರೆ ಎಂದಿ ವಿಜಯ ಕರ್ನಾಟಕ ವರದಿ ಮಾಡಿದೆ.
ಇನ್ನು ಡಿಸೆಂಬರ್ 31ರಂದು ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಾರ್ವಜನಿಕರಿಗೆ ನಡಿಗೆಯ ಮೂಲಕ ಏಕ ಮುಖ ಪ್ರವೇಶಕ್ಕೆ ಮಾತ್ರ ಅವಕಾಶವಿದ್ದು, ಎಂ.ಜಿ.ರಸ್ತೆಗೆ ಅನಿಲ್ ಕುಂಬ್ಳೆ ಸರ್ಕಲ್ ಹಾಗೂ ಮೇಯೋ ಹಾಲ್ ಜಂಕ್ಷನ್ ಮೂಲಕ ಪ್ರವೇಶಿಸಬಹುದು. ಎಂ.ಜಿ.ರಸ್ತೆ, ಕಸ್ತೂರಿ ಬಾ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧನೆಗಳಿಲ್ಲ. ಡಿಸೆಂಬರ್ ರಾತ್ರಿ 1 ರವರೆಗೆ ಜನರು ಮುಕ್ತವಾಗಿ ಸಂಭ್ರಮಿಸಬಹುದು. ಆದರೆ ಪಾನಮತ್ತರಾಗಿ ವಾಹನ ಚಾಲನೆ ಬೇಡ. ಡ್ರಗ್ಸ್‌ನಿಂದ ದೂರವಿರಿ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ ನೀಡಿದ್ದಾರೆ.
ಅಂದು ರಾತ್ರಿ 8 ಗಂಟೆಯಿಂದಲೇ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ. ಡ್ರ್ಯಾಗ್ ರೇಸ್ ಮತ್ತು ವ್ಹೀಲಿಂಗ್ ನಡೆಸುವವರ ಮೇಲೆ ವಿಶೇಷ ನಿಗಾವಹಿಸಲಾಗುತ್ತದೆ. ಮದ್ಯ ಸೇವನೆ ಮಾಡಿ ವಾಹನ ಚಾಲಾಯಿಸಬೇಡಿ ಎಂದು ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.












Click it and Unblock the Notifications