Namma Metro: ಬೆಂಗಳೂರಲ್ಲಿ ಸಂಚರಿಸಲಿದೆ ಚಾಲಕರಹಿತ ಮೆಟ್ರೊ- ಯಾವ ಮಾರ್ಗಗಳಲ್ಲಿ, ಯಾವಾಗಿಂದ ಆರಂಭ? ತಿಳಿಯಿರಿ
ಬೆಂಗಳೂರು, ಜುಲೈ 22: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಾಲಕರಹಿತ ಮೆಟ್ರೊ ರೈಲು ಸಂಚರಿಸಲಿದೆ. ಈ ಮಹತ್ವದ ಯೋಜನೆಗೆ ಬಿಎಂಆರ್‌ಸಿಎಲ್ ಇದೇ ವರ್ಷದ ಕೊನೆಯಲ್ಲಿ ಚಾಲನೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಬೇಕಾಗಿರುವ ಎಲ್ಲಾ ಸಿದ್ದತೆಗಳನ್ನು ನಮ್ಮ ಮೆಟ್ರೊ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
2020 ರ ಡಿಸೆಂಬರ್‌ನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಾಲಕರಹಿತ ಮೆಟ್ರೊಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಆ ಬಳಿಕ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಚಾಲಕರಹಿತ ಮೆಟ್ರೊ ಸಂಚರಿಸುತ್ತಿದೆ. ಮುಂದಿನ ತಿಂಗಳು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮುಂದಿನ ತಿಂಗಳು ಚಾಲಕರಹಿತ ಮೆಟ್ರೊ ಓಡಾಡಲಿದೆ ಎಂದು ವರದಿಯಾಗಿದೆ.

19 ಕಿಮೀ ಎಲಿವೇಟೆಡ್ ಕಾರಿಡಾರ್ ಆಗಿರುವ ಹಳದಿ ರೇಖೆಯಲ್ಲಿ (ಆರ್‌ವಿ ರಸ್ತೆ-ಬೊಮ್ಮಸಂದ್ರ) ಈ ವರ್ಷದ ಕೊನೆಯಲ್ಲಿ ಆರಂಭವಾಗಲಿದೆ. ಈ ಮೆಟ್ರೊ ಕಾರಿಡಾರ್ ಕಳೆದ ವರ್ಷವೇ ಪೂರ್ಣಗೊಳ್ಳಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಕಾಮಗಾರಿಗಳು ವಿಳಂಬಗೊಂಡಿವೆ. ಈ ವರ್ಷದ ಕೊನೆಯಲ್ಲಿ ಆರಂಭಗೊಳ್ಳಲಿರುವ ಕಾರಿಡಾರ್‌ನಲ್ಲಿ ಚಾಲಕರಹಿತ ಮೆಟ್ರೊವನ್ನು ಓಡಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಸಂವಹನ ಆಧಾರಿತ ರೈಲು ನಿಯಂತ್ರಣ (CBTC) ಸಿಗ್ನಲಿಂಗ್ ವ್ಯವಸ್ಥೆಯ ಭಾಗವಾಗಿ ಚಾಲಕ ರಹಿತ ರೈಲುಗಳನ್ನು ಪರಿಚಯಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಚಾಲಕ ರಹಿತ ರೈಲುಗಳಿಗೆ ಅನುಮತಿ ನೀಡಲು 2020 ರ ಮೆಟ್ರೋ ರೈಲ್ವೆ ಸಾಮಾನ್ಯ ನಿಯಮಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ಕೊಚ್ಚಿ ಮತ್ತು ನಾಗ್ಪುರದಂತಹ ಹೊಸ ಮೆಟ್ರೋ ನೆಟ್‌ವರ್ಕ್‌ಗಳಲ್ಲಿ CBTC ಸಿಗ್ನಲಿಂಗ್ ವ್ಯವಸ್ಥೆಯನ್ನು ಈಗಾಗಲೇ ಅಳವಡಿಸಲಾಗಿದೆ. ಆದರೆ ಅವು ಇನ್ನೂ ಚಾಲಕರಹಿತ ಸೇವೆಯನ್ನು ಪ್ರಾರಂಭಿಸಿಲ್ಲ.
ಡ್ರೈವರ್‌ಲೆಸ್ ತಂತ್ರಜ್ಞಾನ ಎಂದು ಕರೆಯಲ್ಪಡುವ CBTC ಅನ್ನು ಮೊದಲ ಬಾರಿಗೆ ನಮ್ಮ ಮೆಟ್ರೊದಲ್ಲಿ ಬಳಸಲಾಗುವುದು. ಇದು ರೈಲುಗಳು ಸ್ವಯಂಚಾಲಿತವಾಗಿ ಚಲಿಸಲು ಸಹಾಯ ಮಾಡುತ್ತದೆ. ಆದರೆ ಕಾರ್ಯಾಚರಣೆಗಳನ್ನು ನಿಯಂತ್ರಣ ಕೇಂದ್ರಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಹಳದಿ ರೇಖೆಗೆ CBTC ತಂತ್ರಜ್ಞಾನವನ್ನು ಒದಗಿಸಲು ಸೀಮೆನ್ಸ್ ಒಪ್ಪಂದ ಮಾಡಿಕೊಂಡಿದೆ.

ಎಲೆಕ್ಟ್ರಾನಿಕ್ಸ್ ಸಿಟಿ, ಗೊಟ್ಟೆಗೆರೆ, ನಾಗವಾರ, ಸಿಲ್ಕ್‌ಬೋರ್ಡ್ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಹೊಸ ಸ್ವತಂತ್ರ ಮಾರ್ಗಗಳನ್ನು ಮೊದಲಿನಿಂದಲೂ CBTC ವ್ಯವಸ್ಥೆಗಾಗಿ ವಿನ್ಯಾಸಗೊಳಿಸಲಾಗಿದೆ.
ಚಾಲಕರಹಿತ ಮೆಟ್ರೊ ರೈಲು ಆರಂಭವಾದ ನಂತರ ಅಲ್ಲಿ ಚಾಲಕ ಇರುವುದಿಲ್ಲ. ಕೇವಲ ಅಟೆಂಡರ್ ಹಾಜರಿರುತ್ತಾರೆ. ತುರ್ತು ಸಂದರ್ಭದಲ್ಲಿ ಅಟೆಂಡರ್ ಕಾರ್ಯಚರಣೆಗೆ ಇಳಿಯುತ್ತಾರೆ. ಚಾಲಕರಹಿತ ಮೆಟ್ರೊ ರೈಲುಗಳು ಯಾವುದೇ ಅಡಚಣೆ ಇಲ್ಲದೇ ಮೂರು ವರ್ಷಗಳ ಕಾಲ ಕಾರ್ಯಾಚರಣೆ ಮಾಡಿದ ಬಳಿಕ ಈ ರೈಲುಗಳಲ್ಲಿ ಅಟೆಂಡರ್ ಸಹ ಇರುವುದಿಲ್ಲವೆಂದು ಮೆಟ್ರೊ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗ ಅಸ್ತಿತ್ವದಲ್ಲಿರುವ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳ ಸಿಗ್ನಲಿಂಗ್ ವ್ಯವಸ್ಥೆಯನ್ನು ನವೀಕರಿಸಲು ಬಿಎಂಆರ್‌ಸಿಎಲ್ ಯೋಜಿಸಿದೆ.
ನಮ್ಮ ಮೆಟ್ರೊ- ಹಳದಿ ರೇಖೆ
ನಮ್ಮ ಮೆಟ್ರೋದ ಹಳದಿ ಮಾರ್ಗವು ನಿರ್ಮಾಣ ಹಂತದಲ್ಲಿದೆ. ಇದರ ಒಟ್ಟು ವಿಸ್ತೀರ್ಣ 18.82 ಕಿಮಿಯಾಗಿದೆ. ಈ ಮಾರ್ಗವು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ಸಂಪೂರ್ಣ ಎಲಿವೇಟೆಡ್ ಕಾರಿಡಾರ್ ಆಗಿದ್ದು, 16 ನಿಲ್ದಾಣಗಳನ್ನು ಹೊಂದಿದೆ. ಆರ್.ವಿ. ರಸ್ತೆ ನಿಲ್ದಾಣವು ಟರ್ಮಿನಲ್ ನಿಲ್ದಾಣವಾಗಿದ್ದು, ಗ್ರೀನ್ ಲೈನ್‌ನೊಂದಿಗೆ ಇಂಟರ್‌ಚೇಂಜ್ ಅನ್ನು ಒದಗಿಸಲಾಗುತ್ತಿದೆ.
ಸಿಲ್ಕ್‌ಬೋರ್ಡ್ ನಿಲ್ದಾಣವು ಹಳದಿ ರೇಖೆ ಮತ್ತು ನೀಲಿ ರೇಖೆಯ ನಡುವಿನ ಮತ್ತೊಂದು ಇಂಟರ್‌ಚೇಂಜ್ ನಿಲ್ದಾಣವಾಗಿದೆ. ಹಳದಿ ರೇಖೆಯನ್ನು ಆರಂಭದಲ್ಲಿ ಬೊಮ್ಮಸಂದ್ರದಲ್ಲಿ ಕೊನೆಗೊಳಿಸಲು ಯೋಜಿಸಲಾಗಿತ್ತು. ಆದರೆ, ಕಳೆದ ವರ್ಷ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿನವರೆಗೆ ಈ ಮಾರ್ಗವನ್ನು ವಿಸ್ತರಿಸಲು ಕರ್ನಾಟಕ ಸರ್ಕಾರವು ಅನುಮೋದನೆ ನೀಡಿತು.
ಹಳದಿ ರಸ್ತೆಯಲ್ಲಿ ಬರುವ ಮಾರ್ಗಗಳು
1- ರಾಷ್ಟ್ರೀಯ ವಿದ್ಯಾಲಯ ರಸ್ತೆ
2- ರಾಗಿಗುಡ್ಡ
3- ಜಯದೇವ ಆಸ್ಪತ್ರೆ
4- ಬಿ ಟಿ ಎಂ ಬಡಾವಣೆ
5- ಸೆಂಟ್ರಲ್ ಸಿಲ್ಕ್ ಬೋರ್ಡ್
6- ಬೊಮ್ಮನಹಳ್ಳಿ
7- ಹೊಂಗಸಂದ್ರ
8- ಕೂಡ್ಲು ಗೇಟ್
9- ಸಿಂಗಸಂದ್ರ
10- ಹೊಸ ರಸ್ತೆ
11- ಬೆರಟೇನ ಅಗ್ರಹಾರ
12- ಕೋನಪ್ಪನ ಅಗ್ರಹಾರ
13- ಎಲೆಕ್ಟ್ರಾನಿಕ್ ಸಿಟಿ
14- ಹುಸ್ಕೂರು ರಸ್ತೆ
15- ಹೆಬ್ಬಗೋಡಿ
16- ಬೊಮ್ಮಸಂದ್ರ












Click it and Unblock the Notifications