Namm metro: ನೀಲಿ ಮಾರ್ಗದ ವಿದ್ಯುದೀಕರಣ ಟೆಂಡರ್ ಪೂರ್ಣ ಯಾವಾಗ?-ಮಾಹಿತಿ
ಬೆಂಗಳೂರು, ಮಾರ್ಚ್, 04: ಐಟಿ ಹಬ್ ಅಂತಲೇ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಕಂಪನಿಗಳು ತಲೆ ಎತ್ತುತ್ತಲೇ ಇವೆ. ಹಾಗೆಯೇ ನಮ್ಮ ಮೆಟ್ರೋವು ಕೂಡ ಜನಮ್ಮನ್ನೆಗೆ ಗಳಿಸುತ್ತಾ ಪ್ರಯಾಣಿಕರ ಬೇಡಿಕೆಯ ಮೇರೆಗೆ ವಿಸ್ತರಣೆ ಆಗುತ್ತಲೇ ಇದೆ. ಇನ್ನು ನಮ್ಮ ಮೆಟ್ರೊ ನೀಲಿ ಮಾರ್ಗದ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯನ್ನು ಕೆಇಸಿ ಇಂಟರ್‌ನ್ಯಾಷನಲ್ ಪಡೆದುಕೊಂಡಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಲ್ಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ (ನೀಲಿ ಮಾರ್ಗ) 58 ಕಿಲೋ ಮೀಟರ್ ಮಾರ್ಗ ಇದಾಗಿದ್ದು, ಈ ಮಾರ್ಗದ ವಿದ್ಯುತ್ ಸರಬರಾಜಿಗೆ ಬೆಂಗಳೂರು ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬಿಡ್ ಆಹ್ವಾನ ಮಾಡಿತ್ತು.

ನೀಲಿ ಮಾರ್ಗದ ವಿದ್ಯುತ್ ಸರಬರಾಜಿಗೆ ಬಿಎಂಆರ್‌ಸಿಎಲ್ 235.10 ಕೋಟಿ ರೂಪಾಯಿ ಅಂದಾಜು ಮೊತ್ತ ಅನುಮೋದಿಸಿತ್ತು. ವಿದ್ಯುತ್ ಸರಬರಾಜು ಪೂರೈಕೆ ಮಾಡಲು ನಾಲ್ಕು ಕಂಪನಿಗಳು ಮುಂದೆ ಬಂದಿದ್ದವು. ಈ ಪೈಕಿ ಕೆಇಸಿ ಇಂಟರ್‌ನ್ಯಾಷನಲ್ 248.61 ಕೋಟಿ ರೂಪಾಯಿ ಕಡಿಮೆ ಮೊತ್ತ ದಾಖಲಿಸುವ ಮೂಲಕ ಬಿಡ್ ತನ್ನದಾಗಿಸಿಕೊಂಡಿದೆ. ಇನ್ನು ಜಾಕ್ಸನ್ ಯೂನಿವರ್ಸಲ್ 263, ರಾಹುಲ್ ಕೇಬಲ್ 275 ಹಾಗೂ ಕೆಇಐ ಕೇಬಲ್ 279 ಕೋಟಿ ರೂಪಾಯಿ ಬಿಡ್ ಮಾಡಿದ್ದವು.
ಕೆಇಸಿ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಬಗ್ಗೆ ವಿದ್ಯುತ್ ಸರಬರಾಜು ಅಧಿಕಾರಿಗಳು ಮತ್ತು ಸ್ಥಳೀಯ ಪ್ರಾಧಿಕಾರಗಳಾದ ಬಿಡಿಎ, ಬಿಬಿಎಂಪಿ, ಎನ್‌ಎಚ್‌ಎಐ ಮತ್ತು ಬಿಎಸ್‌ಎನ್‌ಎಲ್ ಮತ್ತು ಇತರ ರಾಜ್ಯ ಸರಕಾರಿ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಿ ಸರಿಯಾದ ಸಮಯದಲ್ಲಿ ಕೆಲಸ ಪೂರ್ಣಗೊಳಿಸುವ ದೊಡ್ಡ ಜವಾಬ್ದಾರಿ ಸಂಸ್ಥೆಯದ್ದಾಗಿದೆ.
ಎಷ್ಟು ಕಾಮಗಾರಿ ಮುಗಿದಿದೆ: ಶೇಕಡಾ 57ರಷ್ಟು ಪಿಲ್ಲರ್ ಕ್ಯಾಪ್ ಹಾಗೂ ಶೇಕಡಾ 29ರಷ್ಟು 'ಯು-ಗರ್ಡರ್' ಅಳವಡಿಕೆ ಮಾಡಲಾಗಿದೆ. ಈ ಸಂಸ್ಥೆಗೆ 2021ರ ಮೇನಲ್ಲಿ ಕಾಮಗಾರಿ ಟೆಂಡರ್ ನೀಡಿದ್ದು, 2024ರ ಜೂನ್ ಅಂತ್ಯಕ್ಕೆ ಕಾಮಗಾರಿ ಪೂರ್ಣ ಮಾಡಲು ಅಂತಿಮ ಗಡುವು ನೀಡಲಾಗಿದೆ. ಇನ್ನು, ಶಂಕರನಾರಾಯಣ ಕನ್ಸ್‌ಟ್ರಕ್ಷನ್ (ಎಸ್‌ಎನ್‌ಸಿ) ಸಂಸ್ಥೆಯು ಕೋಡಿ ಬೀಸನಹಳ್ಳಿ (ದೇವರಬೀಸನಹಳ್ಳಿ)ಯಿಂದ ಕೆ.ಆರ್.ಪುರದವರೆಗೆ ಕಾಮಗಾರಿ ನಡೆಸುತ್ತಿದೆ.
ಸಂಸ್ಥೆಯು ಶೇಕಡಾ 86 ರಷ್ಟು ಪಿಲ್ಲರ್ ಕಾಮಗಾರಿ ಮುಗಿಸಿದ್ದು, ಶೇಕಡಾ 65ರಷ್ಟು ಪಿಲ್ಲರ್ ಕ್ಯಾಪ್ ಹಾಗೂ ಶೇಕಡಾ 64ರಷ್ಟು 'ಯು -ಗರ್ಡರ್' ಅಳವಡಿಕೆ ಮಾಡಿದೆ. ಈ ಸಂಸ್ಥೆಗೂ ಈ ವರ್ಷದ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಅಂತಿಮ ಗಡುವು ನೀಡಲಾಗಿತ್ತು. ಆದರೆ ಸದ್ಯದ ಸ್ಥಿತಿಯಲ್ಲಿಇದು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.
ನೀಲಿ ಮಾರ್ಗದ 37 ಕಿಲೋ ಮೀಟರ್ ಕಾಮಗಾರಿಯನ್ನು ನಾಗರ್ಜುನ ಕನ್ಸ್‌ಟ್ರಕ್ಷನ್ ಕಂಪನಿ (ಎನ್‌ಸಿಸಿ) ನಿರ್ವಹಿಸುತ್ತಿದೆ. ಒಟ್ಟು ಮೂರು ಹಂತಗಳಲ್ಲಿ ಸಂಸ್ಥೆ ಕಾಮಗಾರಿ ನಡೆಸುತ್ತಿದ್ದು, ಬೆನ್ನಿಗಾನಹಳ್ಳಿಯಿಂದ ಕೆಂಪಾಪುರ (ಹಂತ -1), ಕೆಂಪಾಪುರದಿಂದ-ಯಲಹಂಕ ವಾಯು ನೆಲೆ (ಹಂತ -2), ಯಲಹಂಕ ವಾಯು ನೆಲೆಯಿಂದ-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಹಂತ-3)ದವರೆಗೆ ಕಾಮಗಾರಿ ನಡೆಸುತ್ತಿದೆ.
ಮೂರು ಹಂತದಲ್ಲಿಒಟ್ಟಾರೆ ಶೇಕಡಾ 61ರಷ್ಟು ಪಿಲ್ಲರ್ ಹಾಗೂ ಶೇಕಡಾ 45ರಷ್ಟು ಪಿಲ್ಲರ್ ಕ್ಯಾಪ್ ಅಳವಡಿಸಲಾಗಿದೆ. ಶೇಕಡಾ 24ರಷ್ಟು ಯು-ಗರ್ಡರ್ ಅಳವಡಿಕೆ ಕೂಡ ಪೂರ್ಣಗೊಳಿಸಿದೆ. ಬಿಎಂಆರ್‌ಸಿಎಲ್, ಎನ್‌ಸಿಸಿ ಸಂಸ್ಥೆಗೆ 2024ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಸುವುದಕ್ಕೆ ಗಡುವು ನೀಡಿದೆ.
ಎರಡು ಹಂತದಲ್ಲಿ ಈ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಮೊದಲ ಹಂತದಲ್ಲಿ ರೇಷ್ಮೆ ಮಂಡಳಿಯಿಂದ-ಕೆ.ಆರ್.ಪುರ (13 ನಿಲ್ದಾಣ), ಎರಡನೇ ಹಂತದಲ್ಲಿಕೆ.ಆರ್.ಪುರದಿಂದ ವಿಮಾನ ನಿಲ್ದಾಣದವರೆಗೆ (17 ನಿಲ್ದಾಣ) ಕಾಮಗಾರಿ ನಡೆಯತ್ತಿದೆ. 58.19 ಕಿಲೋ ಮೀಟರ್ ಮಾರ್ಗದಲ್ಲಿ ಎಲ್ಲಾ ನಿಲ್ದಾಣಗಳು ಎತ್ತರಿಸಿದವುಗಳು ಆಗಿರುವುದರಿಂದ ಕಾಮಗಾರಿ ವೇಗದಲ್ಲಿ ನಡೆಯುತ್ತಿದೆ. 2026ರ ಜೂನ್ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಲೆಕ್ಕ ಹಾಕಿದೆ.












Click it and Unblock the Notifications