ರಾಷ್ಟ್ರಧ್ವಜ ಬ್ಯಾಡ್ಜ ಉಲ್ಟಾ ಹಾಕಿಕೊಂಡು ಪಾದಯಾತ್ರೆ ಮಾಡಿದ ನಳಿನ್ ಕುಮಾರ್ ಕಟೀಲು, ಬೈರತಿ ಬಸವರಾಜು
ಬೆಂಗಳೂರು, ಆಗಸ್ಟ್ 12: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಷ್ಟ್ರಧ್ವಜದಲ್ಲಿ ಕೆಂಪು-ಬಿಳಿ-ಹಸಿರು ಎಂದು ಹೇಳಿದ್ದನ್ನು ಬಿಜೆಪಿಯವರು ತೀವ್ರವಾಗಿ ಖಂಡಿಸಿದ್ದು ಹಸಿಯಾಗಿರುವಾಗಲೇ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ರಾಷ್ಟ್ರಧ್ವಜದ ಬ್ಯಾಡ್ಜ್ ಉಲ್ಟಾ ಹಾಕಿಕೊಂಡು ಪಾದಯಾತ್ರೆ ಮಾಡಿದ್ದು ನಗೆಪಾಟಲಿಗೆ ಗುರಿಯಾಗುತ್ತಿದೆ.
ರಾಷ್ಟ್ರಧ್ವಜ ದೇಶದ ಹೆಮ್ಮೆಯ ಸಂಕೇತ. ಹರ್ ಘರ್ ತಿರಂಗಾ ಮೂಲಕ ರಾಷ್ಟ್ರಧ್ವಜವನ್ನು ಹಾರಿಸುವ ಮತ್ತು ರಾಷ್ಟ್ರದ ಬಗೆಗಿನ ಗೌರವವನ್ನು ಹೆಚ್ಚು ಮಾಡಬೇಕೆಂಬದು ಪ್ರಧಾನಿ ನರೇಂದ್ರ ಮೋದಿಯವರ ನಿಲುವಾಗಿತ್ತು. ಆದರೆ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಧ್ವಜದ ಬ್ಯಾಡ್ಜ್ ಅನ್ನು ಉಲ್ಟಾ ಧರಿಸಿ ರಸ್ತೆಯಲ್ಲಿ ಧ್ವಜ ಹಿಡಿದು ಸಾಗುತ್ತಿರುವ ದೃಶ್ಯ ವೈರಲ್ ಆಗಿದೆ.
ಕೆಆರ್ ಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ(ಆಗಸ್ಟ್ 12) ವಿಜಿನಾಪುರದಿಂದ ಕೆಆರ್ ಪುರದ ತನಕ ಹರ್ ಘರ್ ತಿರಂಗಾಕ್ಕಾಗಿ ನಗರಾಭಿವೃದ್ದಿ ಸಚಿವ ಹಾಗೂ ಕೆಆರ್ ಪುರದ ಶಾಸಕಕರಾಗಿರುವ ಬೈರತಿ ಬಸವರಾಜು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಕಾರ್ಯಕರ್ತರು ರಸ್ತೆಯಲ್ಲಿ ಧ್ವಜವನ್ನು ಹಿಡಿದು ಸಾಗಿದ್ದರು. ಈ ವೇಳೆ ತಮ್ಮ ಶರ್ಟ್ ಮೇಲೆ ಹಾಕಿಕೊಂಡಿದ್ದ ಬ್ಯಾಡ್ಜ್ ತ್ರಿವರ್ಣವೂ ಉಲ್ಟಾ ಆಗಿತ್ತು. ಇದನ್ನು ಇಬ್ಬರು ದಿಗ್ಗಜ ನಾಯಕರು ನೋಡದೆ ರಸ್ತೆಯುದ್ದಕ್ಕೂ ಸಂಚರಿಸಿದ್ದಾರೆ.

ಬೈರತಿ ಬಸವರಾಜು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉಲ್ಟಾ ಧ್ವಜವನ್ನು ಹಾಕಿಕೊಂಡು ಸಾಗುತ್ತಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಕಟೀಲ್ ಮತ್ತು ಬೈರತಿಗೆ ನಿಂದಿಸುತ್ತಿದ್ದಾರೆ. ರಾಷ್ಟ್ರಧ್ವಜ ಹಾರಿಸದವರು ರಾಷ್ಟ್ರ ವಿರೋಧಿ ಎನ್ನುವ ಬಿಜೆಪಿಗರೇ ರಾಷ್ಟ್ರ ಧ್ವಜಕ್ಕೆ ಅಪಮಾನಿಸುವ ನಿಮ್ಮ ನಾಯಕರಿಗೆ ಏನು ಹೇಳುತ್ತೀರಾ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವು ಜನರು ಇಂಥ ರಾಜಕಾರಣಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎನ್ನುತ್ತಿದ್ದಾರೆ.
ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಪ್ರಭಾತ್ ಬೇರಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಬಿ.ಎ.ಬಸವರಾಜ ಭಾಗಿಯಾಗಿದ್ದರು. ಪ್ರಭಾತ್ ಬೇರಿ ಜನಪದ ಕಲಾತಂಡಗಳೊಂದಿಗೆ ಬೃಹತ್ ಜಾಥಾವನ್ನು ವಿಜಿನಾಪುರದ ಕಾವೇರಿ ಆಟದ ಮೈದಾನ ಪ್ರಾರಂಭವಾಗಿ ರಾಮಮೂರ್ತಿ ನಗರ ಮುಖ್ಯ ರಸ್ತೆ, ಬೋವಿ ಕಾಲೋನಿ ಮುಖ್ಯ ರಸ್ತೆ ಮೂಲಕ ಟಿಸಿ ಪಾಳ್ಯ ಮುಖ್ಯ ರಸ್ತೆಯಲ್ಲಿ ಜಾಥಾ ಸಾಗಿತ್ತು. ಈ ವೇಳೆಯಲ್ಲಿ ರಾಷ್ಟ್ರ ಧ್ವಜದ ಬಣ್ಣವುಳ್ಳ ಬ್ಯಾಡ್ಜ್ ಉಲ್ಟಾ ಧರಿಸಿ ಸಾಗಿದ್ದಾರೆ.












Click it and Unblock the Notifications