ನಾಗರಹೊಳೆಯಲ್ಲಿ ಎರಡು ಹುಲಿಗಳನ್ನು ಬೇಟೆಯಾಡಿದ್ದ ಗ್ಯಾಂಗ್ ಅರೆಸ್ಟ್
ಬೆಂಗಳೂರು, ಏ. 13: ಆತ ಹುಲಿ ಬೇಟೆಯಾಡುವ ಕಿರಾತಕ. ಹುಲಿ ಬೇಟೆಯಾಡಿದ್ದ ಹಸುವಿನ ದೇಹಕ್ಕೆ ವಿಷ ತುಂಬಿ ಮಾಂಸ ತಿನ್ನಲು ಬಂದಿದ್ದ ಹುಲಿರಾಯನನ್ನೇ ಕೊಂದಿದ್ದ! ಅದರ ಉಗುರು ಮತ್ತು ಚರ್ಮವನ್ನು ಮಾರಾಟ ಮಾಡಿದ್ದ. ಎರಡು ಹುಲಿಗಳನ್ನು ಹತ್ಯೆ ಮಾಡಿದ್ದ ವ್ಯಕ್ತಿಯನ್ನು ಆತನ ಸಹಚರರ ಸಮೇತ ಬಂಧಿಸುವಲ್ಲಿ ನಾಗರಹೊಳೆ ವಲಯ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸೋಮಶೇಖರ್ ಬಂಧಿತ ಅರೋಪಿಯ ಹೆಸರು. ಈತನ ಇಬ್ಬರು ಸಹಚರರನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎರಡು ವರ್ಷದ ಹಿಂದೆ ಹುಲಿ ಹಸುವನ್ನು ಸಾಯಿಸಿತ್ತು. ಅದಕ್ಕೆ ವಿಷ ಹಾಕಿದ್ದೆವು. ಅದನ್ನು ತಿನ್ನಲು ಬಂದಿದ್ದ ಹುಲಿಯನ್ನು ಕೊಂದಿದ್ದೆವು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಹುಲಿಗಳನ್ನು ಕೊಂದಿದ್ದು, ಅದರ ಚರ್ಮ ಮತ್ತು ಉಗುರು ಮಾರಾಟ ಮಾಡಿದ್ದೆವು ಎಂದು ಸ್ಫೋಟಕ ಮಾಹಿತಿಯನ್ನು ವಿಚಾರಣೆ ವೇಳೆ ತನಿಖಾಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ.
ಕಳೆದ ಏ. 7 ರಂದು ಹುಲಿ ಉರುಗು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಮದ್ದೂರು ಪೊಲೀಸರು ಬಂಧಿಸಿದ್ದರು. ಆರೋಪಿ ಶರತ್ ಮತ್ತು ಆತನ ಸಹಚರರನ್ನು ವಿಚಾರಣೆ ನಡೆಸಿದಾಗ ಅಸಲಿ ಹುಲಿ ಉಗುರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ವೇಳೆ ಮತ್ತೊಬ್ಬ ಆರೋಪಿ ಸೋಮಶೇಖರ್ ನನ್ನು ಮದ್ದೂರು ಪೊಲೀಸರು ಬಂಧಿಸಿದ್ದರು. ಬಾಡಿ ವಾರಂಟ್ ಆಧಾರದ ಮೇಲೆ ಸೋಮಶೇಖರ್ ನನ್ನು ನಾಗರಹೊಳೆ ವಲಯ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.

ನಾಗರಹೊಳೆಯಲ್ಲಿ ಹುಲಿಯ ಅಸ್ತಿ ಪಂಜರ ಪತ್ತೆ:
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ. ಅತಿಕ್ರಮ ಪ್ರವೇಶ ಮಾಡಿ ಸಿಕ್ಕಿಬಿದ್ದರೂ, ಏಳು ವರ್ಷ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಂತಹ ಅಭಯ ಅರಣ್ಯದಲ್ಲಿ ಲಕ್ಷಾಂತರ ಬೆಲೆ ಬಾಳುವ ಹುಲಿ ಉಗುರು ಮತ್ತು ಚರ್ಮಕ್ಕಾಗಿ ಸ್ಥಳೀಯ ಬುಡಕಟ್ಟು ಜನರು ಎರಡು ವರ್ಷದ ಹಿಂದೆ ಎರಡು ಹುಲಿಗಳನ್ನು ಹತ್ಯೆ ಮಾಡಿದ್ದಾರೆ.
ಬಾಡಿ ವಾರಂಟ್ ಆಧಾರದ ಮೇಲೆ ಸೋಮಶೇಖರ್ ನನ್ನು ವಶಕ್ಕೆ ಪಡದು ವಿಚಾರಣೆ ನಡೆಸಿದಾಗ, ನಾಗರಹೊಳೆಯಲ್ಲಿ ಹುಲಿಯ ಅಸ್ತಿ ಪಂಜರವನ್ನು ತೋರಿಸಿದ್ದಾನೆ. ಎರಡು ವರ್ಷದ ಹಿಂದೆ ಹಸುವನ್ನು ಕೊಂದಿದ್ದನ್ನು ಪತ್ತೆ ಮಾಡಿದ್ದ ಆರೋಪಿಗಳು, ಅದಕ್ಕೆ ವಿಷ ಹಾಕಿ ಹೋಗಿದ್ದರು. ಪುನಃ ಹಸು ಮಾಂಸ ತಿಂದಿದ್ದ ಹುಲಿ ಅಲ್ಲಿಯೇ ಸಾವನ್ನಪ್ಪಿತ್ತು. ಹೀಗೆ ಎರಡು ಹುಲಿಗಳನ್ನು ಕೊಂದು ಅದರ ಚರ್ಮ ಮತ್ತು ಉಗುರುಗಳನ್ನು ಪರಭಾರೆ ಮಾಡಿದ್ದರು. ವರ್ಷದ ಹಿಂದೆ ಹುಲಿ ಚರ್ಮ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದರು. ಇದೀಗ ಮದ್ದೂರು ಬಳಿ ಹುಲಿ ಉಗುರು ಮಾರಾಟ ಮಾಡಲು ಯತ್ನಿಸಿದ ಆರೋಪಿಗಳ ಜಾಡು ಹಿಡಿದು ನಾಗರಹೊಳೆಯಲ್ಲಿ ಎರಡು ಹುಲಿಗಳನ್ನು ಕೊಂದಿದ್ದ ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಪ್ರಕರಣ ಅರಣ್ಯ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ.

Recommended Video
'ಹುಲಿ ಸಂರಕ್ಷಿತ ವಲಯದಲ್ಲಿ ಅನಧಿಕೃತ ಪ್ರವೇಶ ಮಾಡುವುದೇ ಮಹಾ ಅಪರಾಧ. ಅಂತದ್ದರಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೋಗಿ ಎರಡು ಹುಲಿ ಕೊಂದಿದ್ದಾರೆ. ಎರಡು ವರ್ಷದ ಹಿಂದೆ ಕೊಂದಿದ್ದ ಹುಲಿಯ ಅಸ್ತಿ ಪಂಚರ ಈಗ ಪತ್ತೆಯಾಗಿದ್ದು, ಗಾಬರಿ ಮೂಡಿಸುವಂತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಮತ್ತಷ್ಟು ಹುಲಿಗಳ ಸಾವಿನ ರಹಸ್ಯ ಬಯಲಾಗಬಹುದು' ಎಂದು ವನ್ಯ ಜೀವಿ ಹೋರಾಟಗಾರ ಶರತ್ 'ಒನ್‌ಇಂಡಿಯಾ' ಕನ್ನಡಕ್ಕೆ ತಿಳಿಸಿದ್ದಾರೆ.












Click it and Unblock the Notifications